ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಳ: ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ

0
61
ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಳ: ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ
ಕಲಬುರಗಿ: ನಗರ ಮತ್ತು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಇನ್ಫ್ಲುಯೆಂಜಾ ಲೈಕ್ ಇಲ್ನೆಸ್ (ILI) ಮತ್ತು ತೀವ್ರ ಉಸಿರಾಟದ ತೊಂದರೆ (SARI) ಪ್ರಕರಣಗಳು ಸೇರಿದಂತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ಜಿಲ್ಲಾಧಿಕಾರಿ ಶರತ್ ಬಿ. ಅವರು ಸಭೆ ನಡೆಸಿದರು.
ಪ್ರಸ್ತುತ ಜಿಲ್ಲೆಯಲ್ಲಿ ಜುಲೈ-9ರ ವರೆಗೆ 1901 ಜನರಿಗೆ ಕೊರೋನಾ ಸೋಂಕು ಕಂಡು ಬಂದಿದ್ದು, ಇದರಲ್ಲಿ 30 ಜನ ನಿಧನ ಹೊಂದಿರುತ್ತಾರೆ. ಕಳೆದ 15 ದಿನಗಳಲ್ಲಿ ಹೆಚ್ಚಿನ ಕೊರೋನಾ ಪಾಸಿಜಿಟ್ ಸಂಖ್ಯೆಗಳ ಜೊತೆಗೆ ಸಾವಿನ ಸಂಖ್ಯೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ವೈದ್ಯಕೀಯ ವ್ಯವಸ್ಥೆ, ಹಾಸಿಗೆ ಹೆಚ್ಚಳ ಸೇರಿದಂತೆ ಆಸ್ಪತ್ರೆಗಳ ಮೂಲ ಸೌಲಭ್ಯ ಹೆಚ್ಚಿಸುವ ಸಂಬಂಧ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶರತ್ ಬಿ. ಅವರು ಜಿಲ್ಲೆಯಲ್ಲಿ ಐ.ಎಲ್.ಐ. ಹಾಗೂ ಸಾರಿ ಸಂಖ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ಜಿಲ್ಲಾಡತವು ಎಲ್ಲ ಮುಂಜಾಗೃತಾ ಕ್ರಮ ಕೈಗೊಂಡಿದೆ ಎಂದರು.
ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಹಾಗೂ ಶುಚಿತ್ವ ಕಾಪಾಡುವುದೇ ಕೊರೋನಾ ತಡೆಯಲು ಸಾಧ್ಯವಾಗಿದ್ದು, ಜಿಲ್ಲೆಯ ಜನತೆ ಇದನ್ನು ತಪ್ಪದೇ ಪಾಲಿಸಬೇಕು. ಅನಗತ್ಯ ಓಡಾಟ ಹಾಗೂ ಗುಂಪಾಗಿ ಸೇರಬಾರದು. ಆಗಾಗ ಸಾಬೂನುನಿಂದ ಕೈ ತೊಳೆದುಕೊಳ್ಳಬೇಕು ಮತ್ತು ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯಲ್ಲಿ ದೀರ್ಘ ಕಾಯಿಲೆಯಿಂದ ಬಳಲುತ್ತಿರುವವರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಇದ್ದಲ್ಲಿ ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರು ವಿಶೇಷ ಕಾಳಜಿ ವಹಿಸಬೇಕು.ಹೊರಗಡೆಯಿಂದ ಮನೆಗೆ ಹೋದ ನಂತರ ನೇರವಾಗಿ ಕಾಯಿಲೆ ಪೀಡಿತರನ್ನು ಭೇಟಿಯಾಗಬಾರದು ಎಂದರು.
ಜನಸಂದಣಿಯಾದಲ್ಲಿ ಅಂಗಡಿ-ಮುಂಗಟ್ಟುಗಳ ವಿರುದ್ಧ ಕ್ರಮ: ಅನ್ಲಾಕ್ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಬಹುತೇಕ ಚಟುವಟಿಕೆಗಳು ಚಾಲ್ತಿಯಲ್ಲಿದ್ದು, ಅಂಗಡಿ ಮುಂಗಟ್ಟುಗಳ ಮುಂದೆ ಸಾರ್ವಜನಿಕರು ಗುಂಪಾಗಿ ಸೇರಿದ್ದಲ್ಲಿ ಅಥವಾ ಸಾಮಾಜಿಕ ಅಂತರ ಕಾಪಾಡಲು ಅಂಗಡಿಗಳು ವಿಫಲವಾದಲ್ಲಿ ಅಂತಹ ಅಂಗಡಿ-ಮುಂಗಟ್ಟುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಗೃಹ ಬಂಧನ ಉಲ್ಲಂಘಿಸುವಂತಿಲ್ಲ: ಅನ್ಯರಾಜ್ಯದಿಂದ ಬಂದವರು ಅಥವಾ ಕೋರೊನಾ ಸೋಂಕಿತರ ಸಂಪರ್ಕಕ್ಕೆ ಒಳಗಾದವರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಕಡ್ಡಾಯವಾಗಿದ್ದು, ಯಾರಾದರೂ ಇದನ್ನು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಎಫ್.ಐ.ಆರ್. ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ. ಶರತ್ ಬಿ. ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟೀನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನ ಅತುಲ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿ.ಹೆಚ್.ಓ. ಡಾ. ಎಂ.ಎ. ಜಬ್ಬಾರ್, ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ್, ಸಹಾಯಕ ಅಯುಕ್ತರಾದ ರಾಮಚಂದ್ರ ಗಡಾದೆ, ರಮೇಶ ಕೋಲಾರ ಸೇರಿದಂತೆ ಆರೋಗ್ಯ ಇಲಾಖೆಯ ಇನ್ನಿತರ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here