ಶಹಾಬಾದ: ತಾಲೂಕಿನ ಭಂಕೂರ ಹಾಗೂ ಮುತ್ತಗಾ ಗ್ರಾಮದ ಮಧ್ಯೆ ಲೋಕೋಪಯೋಗಿ ಇಲಾಖೆಯ ಸುಮಾರು 4.25 ಕೋಟಿ ರೂ. ಕಾಮಗಾರಿ ಕಳಪೆ ಮಟ್ಟದಿಂದ ನಡೆಯುತ್ತಿದ್ದರೂ ಸಂಬಂಧಿಸಿದ ಜೆಇ ಹಾಗೂ ಎಇಇ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಮುಖಂಡ ಮಹೇಂದ್ರ ಕೋರಿ ಆರೋಪಿಸಿದ್ದಾರೆ.
ರಸ್ತೆ ಕಾಮಗಾರಿ ಮಾಡುವಾಗ ಮುರುಮ್ ಮತ್ತು ಕಂಕರ್ ಹಾಕಿ ರೋಲರ್ ಮೂಲಕ ಸಮತಟ್ಟು ಮಾಡಬೇಕು.ಆದರೆ ಇಲ್ಲಿ ರಸ್ತೆಯ ಬದಿಯಲ್ಲಿರುವ ಹೊಲದ ಮಣ್ಣು, ಕಲ್ಲಿನ ಗಣಿಯಲ್ಲಿರುವ ತ್ಯಾಜ್ಯ ಕಲ್ಲುಗಳನ್ನು ಹಾಕಿದ್ದಾರೆ.ಇದು ನಿಯಮ ಬಾಹಿರವಾದರೂ ಗುತ್ತಿಗೆದಾರರು ಮಾತ್ರ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.ಅಲ್ಲದೇ ಮಳೆಗಾಲ ಬಂದಾಗ ಮಳೆ ನೀರು ಭಾರಿ ಪ್ರಮಾಣದಲ್ಲಿ ಹರಿದು ಬಂದು ಪೂಲ್ಗಳ ಮೇಲೆ ಬರುವ ಮೂಲಕ ಎರಡು ಗ್ರಾಮಗಳಿಗೆ ಸಂಚಾರ ಅಡಚಣೆಯಾಗುತ್ತಾ ಇರುತ್ತದೆ. ಇಂತಹ ಪೂಲ್ಗಳ ನಿರ್ಮಾಣ ಮಾಡಿದ ಎರಡು ದಿನಗಳ ಒಳಗೆ ಹಾಕಿದ ಸಿಮೆಂಟ್ ರಿಂಗ್ (ಗುಮ್ಮಿ)ಒಡೆದು ಹೋಗಿದೆ.ಅಲ್ಲದೇ ಹಳೆಯ ಪೂಲ್ ತೆಗೆದು ಹೊಸ ಪೂಲ್ ನಿರ್ಮಾಣ ಕಾರ್ಯ ಸಂಪೂರ್ಣ ಕಾಮಗಾರಿ ಕಳಪೆ ಮಾಡಿರುವುದಕ್ಕೆ ಅಲ್ಲಿನ ಪೂಲ್ ನೋಡಿದರೇ ಗೊತ್ತಾಗುತ್ತದೆ.ಹಳೆಯ ಪೂಲ್ನ ಕೆಳಗಡೆ ನೀರು ಹರಿದು ಹೋಗಲು ಸುಮಾರು 12 ಸಿಮೆಂಟ ರಿಂಗ್ಗಳನ್ನು ಅಳವಡಿಸಲಾಗಿತ್ತು.ಆದರೆ ಗುತ್ತಿಗೆದಾರ ಹಳೆಯ ಪೂಲ್ ಸಂಪೂರ್ಣ ಬೀಳಿಸದೇ, ಅರ್ಧದಷ್ಟು ಬೀಳಿಸಿ, ಕೇವಲ ನಾಲ್ಕು ಗುಮ್ಮಿಗಳನ್ನು ಹಾಕಿದ್ದಾರೆ.ಅಲ್ಲದೇ ಹಳೆಯ ಪೂಲ್ ಅಷ್ಟೇ ಬಿಟ್ಟಿದ್ದರಿಂದ ಯಾವಾಗಲಾದರೂ ಬೀಳುವ ಸಾಧ್ಯತೆಯಿದೆ.
ಇಷ್ಟೊಂದು ಕಳಪೆ ಕಾಮಗಾರಿ ಮಾಡಿದರೂ ಸಂಬಂಧಪಟ್ಟ ಜೆಇ ಮತ್ತು ಎಇಇ ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ.ಇದರಲ್ಲಿ ಅವರು ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.ಅಲ್ಲದೇ ಕ್ಷೇತ್ರದ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ತರಲಾಗಿದೆ. ಕೂಡಲೇ ಕಳಪೆ ಮಟ್ಟದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಕು. ಅವರ ಬಿಲ್ ತಡೆಹಿಡಿದು ಕ್ರಮಕೈಗೊಳ್ಳಬೇಕು.ಇಲ್ಲದಿದ್ದರೇ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಮಹೇಂದ್ರ ಕೋರಿ ಎಚ್ಚರಿಕೆ ನೀಡಿದ್ದಾರೆ.