ಕಲಬುರಗಿ: ಕೊವಿಡ್ 19 ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ನಗರದ ಸುಸಜ್ಜಿತ ಇಎಸ್ ಐಸಿ ನಲ್ಲಿ ಮತ್ತೊಂದು ಸೋಂಕು ಪರೀಕ್ಷಾ ಕೇಂದ್ರ ಸ್ಥಾಪಿಸಿ ತ್ವರಿತಗತಿಯಲ್ಲಿ ಸೋಂಕು ಪತ್ತೆ ಮಾಡಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವಂತೆ ಶಾಸಕರಾದ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಪ್ರಸ್ತುತ ಜಿಮ್ಸ್ ನಲ್ಲಿ ನಡೆಸಲಾಗುತ್ತಿದ್ದ ಸೋಂಕು ಪರೀಕ್ಷಾ ಕೇಂದ್ರದ ಯಂತ್ರಗಳು ಮಾರ್ಚ್, 23 ರಿಂದ ದಿನದ 24 ಗಂಟೆ ಕಾರ್ಯನಿರ್ವಹಿಸಿದ್ದು ಈಗ ಸೋಂಕು ನಿವಾರಣೆ ಕಾರ್ಯ ಹಾಗೂ ಸರ್ವೀಸ್ ಮಾಡುವ ಅವಶ್ಯಕತೆ ಇದ್ದು ಜುಲೈ 12 ಹಾಗೂ 13 ರಂದು ಯಾವುದೇ ಮಾದರಿಯನ್ನು ಸ್ವೀಕರಿಸುವುದಿಲ್ಲ ಹಾಗೂ ಪರೀಕ್ಷೆ ಮಾಡುವುದಿಲ್ಲ ಎಂದು ಜಿಮ್ಸ್ ನ ಸೋಂಕು ಪತ್ತೆ ಹಾಗೂ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರು ಜಿಮ್ಸ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಸರಕಾರದ ನಿರ್ಲಕ್ಷ್ಯತನಕ್ಕೆ ಬೇಸರ ವ್ಯಕ್ತಪಡಿಸಿರುವ ಶಾಸಕರು, ಜಿಮ್ಸ್ ನ ಸೋಂಕು ಪತ್ತೆ ಕೇಂದ್ರದ ಯಂತ್ರಗಳ ಸರ್ವೀಸ್ ಮಾಡುವುದು ಅವಶ್ಯಕ. ಆದರೆ, ಈಗಾಗಲೇ ಸಾವಿರಾರು ಸಂಖ್ಯೆಯ ಮಾದರಿಗಳು ಪರೀಕ್ಷೆಯಾಗದೆ ಉಳಿದಿವೆ. ಈ ಹಂತದಲ್ಲಿ ಎರಡು ದಿನಗಳ ಕಾಲ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಮಾದರಿ ಸ್ವೀಕರಿಸದಿರುವುದು ಹಾಗೂ ಪರೀಕ್ಷೆ ನಡೆಸದಿರುವುದು ಸೋಂಕಿನ ಮಾದರಿಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿವೆ. ಸರಕಾರ ಈ ಸಂದರ್ಭದಲ್ಲಿ ಮತ್ತೊಂದು ಪರೀಕ್ಷಾ ಮಾದರಿ ಕೇಂದ್ರವನ್ನು ಇಎಸ್ ಐಸಿ ನಲ್ಲಿ ಸ್ಥಾಪಿಸಿದ್ದರೆ ತ್ವರಿತಗತಿಯಲ್ಲಿ ಸೋಂಕು ಪತ್ತೆ ಕಾರ್ಯ ಮುಂದುವರೆಸಬಹುದಿತ್ತು ಆದರೆ ಸರಕಾರ ಈ ವಿಷಯದಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಈ ಹಿಂದೆಯೂ ಕೂಡಾ ಸರಕಾರಕ್ಕೆ ಪತ್ರ ಬರೆದಿದ್ದ ಶಾಸಕರು ತಕ್ಷಣವೇ ಇಎಸ್ ಐ ಸಿನಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.