ವಾಡಿ: ಗೌರವಧನ ಹೆಚ್ಚಳಕ್ಕಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ರಾಜ್ಯವ್ಯಾಪಿ ಅನಿರ್ಧಿಷ್ಟಾವದಿಗಳ ಕಾಲ ಕರೆ ನೀಡಲಾಗಿರುವ ಮುಷ್ಕರ ಮುಂದು ವರೆಸಿರುವ ಕೊರೊನಾ ವಾರಿಯರ್ಸ್ ಟೀಂನ ಆಶಾ ಕಾರ್ಯಕರ್ತೆಯರು, ಸೋಮವಾರ ಗ್ರಾಮ ಪಂಚಾಯತಿ ಹಾಗೂ ಪುರಸಭೆ ಕಚೇರಿಗಳ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸುವ ಮೂಲಕ ಎರಡನೇ ಹಂತದ ಹೋರಾಟಕ್ಕೆ ಮುಂದಾದರು.
ಹಳಕರ್ಟಿ ಹಾಗೂ ಲಾಡ್ಲಾಪುರ ಗ್ರಾಪಂ ಕಚೇರಿಗಳ ಮುಂದೆ ಗ್ರಾಮದ ಮುಖಂಡರ ಬೆಂಬಲದೊಂದಿಗೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಘೋಷಣೆ ಕೂಗಿದ ಆಶಾ ಕಾರ್ಯಕರ್ತೆಯರು, ಮಾಸಿಕ ರೂ.೧೨೦೦೦ ಗೌರವಧನ ಖಾತ್ರಿಪಡಿಸಬೇಕು. ಕೋವಿಡ್-೧೯ರ ವಿರುದ್ಧ ಹೋರಾಡಲು ಅಗತ್ಯವಿರುವಷ್ಟು ಸುರಕ್ಷಣಾ ಸಾಮಾಗ್ರಿ ಒದಗಿಸಬೇಕು. ಕೊರೊನಾ ಸೋಂಕಿಗೆ ತುತ್ತಾದ ಆಶಾಗಳಿಗೆ ಪರಿಹಾರ ನೀಡುವ ಜತೆಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಜಂಟಿ ಕಾರ್ಯದರ್ಶಿ ಭಾಗಣ್ಣ ಬುಕ್ಕಾ, ನ್ಯಾಯಯುತ ಬೇಡಿಕೆಗಳಿಗಾಗಿ ಆಗ್ರಹಿಸಿ ಆಶಾಗಳು ಹೋರಾಟ ಆರಂಭಿಸಿದ್ದಾರೆ. ಇದುವರೆಗೂ ಸರಕಾರದಿಂದ ಯಾವೂದೇ ಪ್ರತಿಕ್ರೀಯೆ ಬಂದಿಲ್ಲ. ಕೊರೊನಾ ವಾರಿಯರ್ಸ್‌ಗಳೆಂದು ಹೆಸರುಕೊಟ್ಟು ವಿಮಾನದಿಂದ ಹೂಮಳೆಗೈದರೆ ಆಶಾಗಳ ಹೊಟ್ಟೆ ತುಂಬೋದಿಲ್ಲ. ಅವರಿಗೆ ಬೇಕಿರೋದು ಸಮಾನ ಕೆಲಸಕ್ಕೆ ಸಮಾನ ವೇತನ. ಜೀವ ಸುರಕ್ಷತೆಗೆ ಅಗತ್ಯ ಸಲಕರಣೆ ಎಂಬುದು ಸರಕಾರ ಅರಿತುಕೊಳ್ಳಬೇಕು.
ಹೋರಾಟವನ್ನು ನಿರ್ಲಕ್ಷ್ಯದಿಂದ ಕಂಡರೆ ಉಗ್ರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ತಾಪಂ ಸದಸ್ಯ ಬಸವರಾಜ ಲೋಕನಳ್ಳಿ, ಗ್ರಾಮದ ಮುಖಂಡರಾದ ಚಂದ್ರಕಾಂತ ಮೇಲಿನಮನಿ, ರಾಜು ಸಂಗಶೆಟ್ಟಿ, ಸಿದ್ದು ಮುಗುಟಿ, ರಾಘವೇಂದ್ರ ಅಲ್ಲಿಪುರಕರ, ಮಲ್ಲಿಕಾರ್ಜುನ ಅಣಿಕೇರಿ, ಚೌಡಪ್ಪ ಗಂಜಿ, ಆಶಾ ಕಾರ್ಯಕರ್ತೆಯರಾದ ನಾಗಮ್ಮ, ಪಾರ್ವತಿ, ಭಾಗ್ಯಶ್ರೀ, ಮೆಹರುನ್ನೀಸಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಪಂ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.