ನಮ್ಮನ್ನಗಲಿದ ಹಿರಿಯ ಸಾಹಿತಿಗಳಾದ ಎ.ಕೃಷ್ಣ,ಶ್ರೀಬಸವರಾಜ ರುಮಾಲರನ್ನು ನೆನೆದು ಕವಿತೆ

0
65

ಹೂಬೊಗಸೆ ನಮನ

ಕೃಷ್ಣೆಭೀಮೆಯರ ತಿಳಿನೀರಿನಲ್ಲ್ಲಿ
ತೇಲಿಹೋದವೆರಡು ದೀಪ|
ಮನಮನದ ಕೊಳದಲೂಅರಳಿನಿಂತಿವೆ
ಬಿಳಿ ಕಮಲದಂಥ ರೂಪ || ೧ ||
ಹರಿವ ಕಲಕಲದಿ ಬೆರೆತು ಹೋಯ್ತು
ಓಂಕಾರ ಮುರಳಿನಾದ |
ಬಸವ ಬೆಳಕಿನ ರುಮಾಲು ಕಳಚಿ
ಸೇರಿ ಶಿವನ ಪಾದ || ೨ ||
ಎದೆಗಡಲ ಮುತ್ತುಗಳ ಮಿಂಚು ಹೊಳಪಿಗೆ
ಶ್ವೇತಪಕ್ಷಿ ಹಾರಿ |
ಚಂದ್ರಲಾಂಬೆಯ ಕರುಣ ಕಿರೀಟದಿ
ಸಗರನಾಡ ತೋರಿ || ೩||
ರುಮಾಲು ಬಸವನ ವಿಭೂತಿ ಬಿಳುಪಿಗೆ
ಬೆಳಕು ಪಡೆದ ಜನತೆ |
ನಿಮ್ಮ ಚೆನ್ನುಡಿಯು ವಚನದೈಸಿರಿಯು
ಬಾಳಹಾದಿಗ್ಹಣತೆ || ೪ ||
ಜೀವಂತ ಶವಗಳನು ನಗಿಸಿದಾತ
ಪರದಲ್ಲು ನಗಿಸಲ್ಹೋದ |
ಭಾವಬೆಸುಗೆಯಲಿ ನೀಡಿದೊಲವು
ಅದುವೆ ಶಿವನ ಪ್ರಸಾದ ||೫ ||
ಶುಭಸುಪ್ರಭಾತಕೆ ನಸುನಗುವ ನಸುಕು
ದಿಸೆದಿಸೆಗೂ ದೇವಗಾನ |
ಸಹಜದಾರಿಯಲಿ ನಡೆದ ಕೃಷ್ಣ
ಆ ದಿವ್ಯ ಬೆಳಕಿನೊಳು ಲೀನ || ೫ ||
ನಿಮ್ಮ ಬರುವಿಕೆಗೆ ನೋಂತುನಿಂತಿದೆ
ಸಗರನಾಡ ಜನತೆ |
ಬೆಳೆವ ಕುಡಿಗಳಿಗೆ ತಿಳಿಬೆಳಕ ನೀಡಲು
ಮತ್ತೆ ಬನ್ನಿ ಧರೆಗೆ || ೬ ||
ತಾಳಲಾರೆನು ಬಸವ ಕೃಷ್ಣರೆ ನಿಮ್ಮೀ
ಅಗಲಿಕೆಯ ನೋವು ಬಾಧೆ |
ಹರಿಹರರಂದದಿ ಒಂದಾಗಿ ಬನ್ನಿ
ಸುರಪುರದ ಸಿರಿಯ ನೆಲಕೆ || ೭ ||
ಮುಳ್ಳು ತುಳಿದು ಹೂ ಹರಡಿ ನಡೆದಿರಿ
ನೆಟ್ಟು ಒಳಿತ ಸಸಿನ |
ಕಂಬನಿಯ ಮನದಿ ಅರ್ಪಿಸುವೆ ನಿಮಗೆ ಹೂಬೊಗಸೆ ನಮನ ದವನ || ೮ ||
-ಡಿ.ಎನ್.ಅಕ್ಕಿ.
ದಿ.೧೪.೦೭.೨೦೨೦.
9448577898.
Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here