ನನಗೆ ಲಂಕೇಶ್ ಪತ್ರಿಕೆಯಲ್ಲಿ ಬರೆಯಲು ಸಾಧ್ಯವಾಗಿದ್ದು ಹೀಗೆ

0
127

ನನಗೆ ಎಸ್. ನಿಜಲಿಂಗಪ್ಪ, ಕಡಿದಾಳ ಮಂಜಪ್ಪ, ಲಾಲ್ ಬಹಾದ್ದೂರ ಶಾಸ್ತ್ರೀ ಮುಂತಾದವರು ಆದರ್ಶದ ಮೈಲುಗಲ್ಲಾಗಿ ಕಾಣಿಸಿದರು. ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಇಷ್ಟವಾದರು. ಪ್ರಪಂಚದ ಪಾಟೀಲ ಪುಟ್ಟಪ್ಪ, ಬಸವರಾಜ ಕಟ್ಟಿಮನಿ ಹತ್ತಿರವೆನಿಸಿದರು. ಸಿದ್ದಯ್ಯ ಪುರಾಣಿಕರು ಕಣ್ಣಲ್ಲಿ ಮನದಲ್ಲಿ ತುಂಬಿಕೊಂಡರು. ಕೋ. ಚೆನ್ನಬಸಪ್ಪ, ಜಿ.ಎಸ್. ಶಿವರುದ್ರಪ್ಪ, ಚನ್ನವೀರ ಕಣವಿ ಆತ್ಮೀಯರಾದರು. ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶರ ಗೆಳೆತನ ಬಂತು. ಅಬ್ದುಲ್ ನಜೀರ್‌ಸಾಬ ಹತ್ತಿರದವರಾದರು. ಶಿಕ್ಷಣ ಮಂತ್ರಿಗಳಾಗಿದ್ದ ಗೋವಿಂದೇಗೌಡರನ್ನು ನಾನು ಬಹಳವಾಗಿ ಹಚ್ಚಿಕೊಂಡಿದ್ದೆ. ರಾಯಚೂರಿನ ಶಾಂತರಸ, ಚೆನ್ನಬಸವಪ್ಪ ಬೆಟ್ಟದೂರು, ವೀರನಗೌಡ ನೀರಮಾನ್ವಿ ಮುಂತಾದವರೆಲ್ಲರೂ ಗುಡಿಗಟ್ಟಿದರು.

ಶಿವರಾಮ ಕಾರಂತರು, ಕುವೆಂಪುರವರು ಪ್ರಭಾವಿಸಿದರು. ಲಂಕೇಶ-ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಚಂದ್ರಶೇಖರ ಪಾಟೀಲ, ಕಾಳೇಗೌಡ ನಾಗವಾರ, ಜ.ಹೋ. ನಾರಾಯಣಸ್ವಾಮಿ, ಕೆ.ಎಸ್. ಭಗವಾನ್, ಎಲ್. ಬಸವರಾಜು, ಸಾ.ಶಿ. ಮರುಳಯ್ಯ, ಎಂ.ಎಂ. ಕಲ್ಬುರ್ಗಿ, ಸಾಣೆಹಳ್ಳಿಯ ಪಂಡಿತಾರಾಧ್ಯರು, ದೇ. ಜವರೇಗೌಡ, ದೇವನೂರ ಮಹಾದೇವ, ರಂಜಾನ್ ದರ್ಗಾ, ಶೂದ್ರ ಶ್ರೀನಿವಾಸ ಮುಂತಾದ ವಿಚಾರಶೀಲರಾದ ಬಂಡಾಯ ಮನೋಧರ್ಮದ ಲೆಕ್ಕವಿಲ್ಲದಷ್ಟು ಗೆಳೆಯರ ಸಾಂಗತ್ಯ ಬೆಳೆದು ಬರಲು ಸಾಧ್ಯವಾಯಿತು.

Contact Your\'s Advertisement; 9902492681


ಇಂಥೆಲ್ಲ ಕವಿ, ಸಾಹಿತಿ, ವಿಚಾರವಾದಿಗಳ ಸಾಂಗತ್ಯಕ್ಕೆ ಮುಖ್ಯ ಕಾರಣವಾದುದು ನನ್ನೊಳಗೆ ಹರಿಗಡಿಯದಂತೆ ತುಂಬಿಕೊಂಡ ಬಸವಾದಿ ವಿಚಾರಧಾರೆ ಎಂದು ಹೇಳಿದರೆ, ದುರಭಿಮಾನದ ಮಾತಾಗಿ ಕೇಳಿಸತ್ತದೋ ಎಂದು ಭಯವಾಗುತ್ತದೆ. ಆದರೆ ಏನು ಮಾಡಲಿ? ಇದು ನಿಜ! ನನ್ನ ಹಿರಿಕಿರಿಯ ಗೆಳೆಯರಲ್ಲಿ ಕೂಡ ನನ್ನೊಳಗೆ ಎಂತೋ ಅವರೊಳಗೂ ಅದೇ ಬಸವ ವಿಚಾರಧಾರೆಯ ತಂತು ಇದ್ದುದನ್ನು ನಾನು ಗುರುತಿಸಿದ್ದೇನೆ. ಅವರೂ ಬಸವವಾದಿಗಳಾಗಿದ್ದರಿಂದಾಗಿಯೇ ನನಗೆ ಮತ್ತು ಅವರಿಗೆ ಸ್ನೇಹ ಸಂಬಂಧ ಸಾಧ್ಯವಾಯಿತು. ಉದಾಹರಣೆಯೊಂದಿಗೆ ವಿವರಿಸಬೇಕೆಂದರೆ;

ಲಂಕೇಶಗೂ ನನಗೂ ಮೊದಲು ಯಾವ ಪರಿಚಯ ಇದ್ದಿರಲಿಲ್ಲ. ಅವರನ್ನು ಪರಿಚಯಿಸಿ, ನನ್ನ “ಬಸವ ಚಳವಳಿ” ಪುಸ್ತಕಕ್ಕೆ ಅವರಿಂದ ಬರೆಸಿದವರು ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು. ಅವರು ಮತ್ತು ನಾನು ಒಂದು ಮುಂಜಾವು ೯ ಗಂಟೆಗೆ ಅವರ ಮನೆಗೆ ಹೋದೆವು. ಅವರಿನ್ನೂ ಹಾಸಿಗೆಯಲ್ಲೇ ಇದ್ದರು. ಪ್ರೊಪೆಸರರ ದನಿ ಕೇಳಿಸುತ್ತಲೇ ಒಳಕ್ಕೆ ಕರೆದರು. ಆಗ ಪ್ರೊಪೆಸರರು ಲಂಕೇಶರಿಗೆ ನನ್ನನ್ನು ಪರಿಚಯಿಸುತ್ತ ಬಸವಣ್ಣನನ್ನು ಮತ್ತು ಅವರ ಚಳವಳಿಯನ್ನು ” ಬಸವಣ್ಣನನ್ನು ಮತ್ತು ಅವರ ಚಳವಳಿಯನ್ನು ನಮ್ಮ ಲಿಂಗಣ್ಣ ಸತ್ಯಂಪೇಟೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹಸ್ತಪ್ರತಿಯಲ್ಲಿರುವ ಇವರ ಬಸವ ಚಳವಳಿಯನ್ನು ಓದಿ ಮೆಚ್ಚಿಕೊಂಡಿದ್ದೇನೆ. ಇವರು ಗುಲ್ಬರ್ಗದವರು. ನನಗೆ ಸುಪರಿಚಿತರು. ತಮ್ಮ ಪುಸ್ತಕಕ್ಕೆ ನನ್ನಿಂದ ಮುನ್ನುಡಿ ಬಯಸಿ ಇಷ್ಟು ದೂರ ಬಂದಿದ್ದಾರೆ. ನನಗೆ ನಿನ್ನ ಸಂಕ್ರಾಂತಿ ಗೊತ್ತು. ಆದ್ದರಿಂದಲೇ ನಾನು ಇವರನ್ನು ಇಲ್ಲಿಗೆ ಕರೆದುಕೊಂಡು ಬಂದೆ. ನೀನೇ ಇವರ ಪುಸ್ತಕಕ್ಕೆ ಮುನ್ನುಡಿಯನ್ನೋ ಬೆನ್ನುಡಿಯನ್ನೋ ಬರೆಯಬೇಕು” ಎಂದು ಗೆಳೆತನದ ಸಲುಗೆಯಿಂದ (೧೯೮೦ ಎಂದು ಕಾಣುತ್ತದೆ) ಒಂಚೂರು ಆಜ್ಞಾಪಿಸುವ ದಾಟಿಯಲ್ಲಿ ಹೇಳಿದರು. ಪಿ. ಲಂಕೇಶ ಮತ್ತು ಮತ್ತು ಪ್ರೊ. ಎಂ.ಡಿ. ನಂಜುಂಡಸ್ವಾಮಿಗಳು ಆಗ ಗಳಸ್ಯ ಗಂಟಸರಾಗಿದ್ದರು. ಹಗ್ಗಸ್ಯ ಉರುಲಸ್ಯರಾದುದು ಆ ಮೇಲೆ!

ಅಂದು ಲಂಕೇಶ ಎರಡನೆ ಮಾತೇ ಆಡಲಿಲ್ಲ. “ಇವರ ಹೆಸರು ಕೇಳಿದ್ದೇನೆ. ಪಾಟೀಲ ಪುಟ್ಟಪ್ಪನವರ ಪ್ರಪಂಚದಲ್ಲಿ ಬರೆಯೋದು ಗೊತ್ತು. ” ಎಂದು ಪ್ರತಿಕ್ರಿಯಿಸುತ್ತ ಹಾಸಿಗೆ ಮೇಲಿಂದ ಎದ್ದು ಕುಳಿತರು. “ವಾರದೊಳಗೆ ಅವರಿಗೆ ಬರೆದು ಕಳಿಸುತ್ತೇನೆ” ಎಂದರು. ಅದರಂತೆ ವಾರೊಪ್ಪತ್ತಿನಲ್ಲಿ ಬೆನ್ನುಡಿಗಾಗಿ ನಾಲ್ಕು ಸಾಲುಗಳನ್ನು ಬರೆದು ಕಳಿಸಿದರು. ಅದರಿಂದ ನನ್ನ ಬಸವ ಚಳವಳಿ ಕೃತಿಗೆ ಒಂದು ತೂಕ ಬಂತು. ನನ್ನ ವಿಚಾರ ಸರಣಿ ಮತ್ತು ಬರವಣಿಗೆಯ ರೀತಿ ಲಂಕೇಶರಿಗೂ ಗೊತ್ತಾಯಿತು. ಆದ್ದರಿಂದಲೇ ತಮ್ಮ ಪತ್ರಿಕೆಗೆ ಬರೆಯುವಂತೆ ಎರಡು ಮೂರು ಸಲ ಪತ್ರ ಬರೆದರು. ಆದರೆ ಅದೇ ವರ್ಷವೇ ನನ್ನ ತಂದೆಯವರು ತೀರಿಕೊಂಡು, ಮೊದಲೇ ಋಣಭಾರವಾಗಿದ್ದ ನನ್ನ ಕುಟುಂಬ ಇನ್ನಷ್ಟು ಮಣಭಾರವಾಗಿ ಬಿಟ್ಟಿತ್ತು.

ಅದರ ಆಗುಹೋಗುಗಳನ್ನು ನಿತ್ತರಿಸಿಕೊಂಡು ಹೋಗುವುದಕ್ಕೆ ಸಾಕು ಬೇಕಾಗುತ್ತಿದ್ದರಿಂದ ಬರೆಯೋದೆಲ್ಲಿ? ಓದೋದೆಲ್ಲಿ? ನನ್ನ ಪಾಲಿಗೆ ಆ ದಿನಗಳು. ಅಂಥ ಹೊತ್ತಲ್ಲಿ ಮತ್ತೊಮ್ಮೆ ಲಂಕೇಶ ನೆನಪಿಸಿದರು. ಬರವಣಿಗೆ ಶುರು ಮಾಡಿದೆ. ಅಂದಿನಿಂದ ಮುಂದುವರಿದ ಬರವಣಿಗೆಯ ವ್ಯವಸಾಯ ಇಂದಿಗೂ ನನ್ನನ್ನು ಹೀಗೆಯೇ ಮುನ್ನಡೆಸಿಕೊಂಡು ಹೊರಟಿದೆ. ಹೋಗೆ ಬಸವಣ್ಣನವರ ಕುರಿತ ನನ್ನ ಪುಸ್ತಕದ ಕಾರಣದಿಂದಾಗಿಯೇ ನನಗೂ ಲಂಕೇಶ್ ಗೂ ಪರಿಚಯಬಂತಲ್ಲವೇ? ೧೯೮೩-೮೪ರಿಂದ ೧೯೯೫-೯೬ರ ವರೆಗೆ ನನಗೆ ಅವರ ಪತ್ರಿಕೆಯಲ್ಲಿ ಬರೆಯಲು ಸಾಧ್ಯವಾಯಿತಲ್ಲವೇ?.

(ಮುಂದುವರೆಯುವುದು)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here