ವಾಡಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪೊಲೀಸ್ ಠಾಣೆಯಲ್ಲೂ ಕಳೆದ ಐದಾರು ದಿನಗಳಿಂದ ಗರಂ ಗರಂ ಆಯುವೇದಿಕ ಕಷಾಯ ಕುದಿಯುತ್ತಿದೆ. ಪ್ರತಿನಿತ್ಯ ಬೆಳಗ್ಗೆ ನಿಯೋಜಿಸಲಾದ ಸ್ಥಳಗಳಲ್ಲಿ ಕರ್ತವ್ಯಕ್ಕೆ ಅಣಿಯಾಗಲು ಹೊರಡುವ ಖಾಕಿಪಡೆಗಳು ಕಡ್ಡಾಯವಾಗಿ ಈ ಕಷಾಯವನ್ನು ಗಂಟಲಿಗೆ ಇಳಿಸಿಯೇ ಮುಂದೆ ಹೆಜ್ಜೆಯಿಡುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಿಎಸ್‌ಐ ವಿಜಯಕುಮಾರ ಭಾವಗಿ, ಮಹಾಮಾರಿ ವೈರಸ್‌ನಿಂದ ಬಚಾವ್ ಆಗಲು ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಅಧ್ಯತೆ ನೀಡಬೇಕಿದೆ. ಬೆಳಗಿನ ವ್ಯಾಯಾಮದ ಜತೆಗೆ ಇಂಥಹ ಔಷಧಿ ಗುಣವುಳ್ಳ ಕಷಾಯ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಮತ್ತು ಉತ್ಸಾಹದಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಆಯುರ್ವೇದ ಕಷಾಯ ವಿತರಣೆ ಪದ್ಧತಿ ಬಹುತೇಕ ಠಾಣೆಗಳಲ್ಲಿ ಜಾರಿಗೆ ತರಲಾಗಿದ್ದು, ನಮ್ಮ ಠಾಣೆಯಲ್ಲೂ ಇದಕ್ಕೆ ಚಾಲನೆ ನೀಡಿದ್ದೇವೆ. ಸಾರ್ವಜನಿಕರೂ ಕೂಡ ಈ ಕಷಾಯವನ್ನು ಮನೆಯಲ್ಲಿ ತಯಾರಿಸಿ ಕುಡಿಯುವುದು ಒಳ್ಳೆಯದು ಎಂದು ಪ್ರತಿಕ್ರೀಯಿಸಿದ್ದಾರೆ.
ತುಳಸಿ ಎಲೆ, ಯಾಲಕ್ಕಿ, ಲವಂಗ, ಶುಂಠಿ, ಚೆಕ್ಕೆ, ಕರಿ ಮೆಣಸು, ಜೀರಗಿ, ನಿಂಬೆ ರಸ, ಬೆಳ್ಳುಳ್ಳಿ, ಅರಸಿಣ, ಬೆಲ್ಲ, ಧನಿಯಾ ಸೇರಿದಂತೆ ಇತರ ಪದಾರ್ಥಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಬೇಯಿಸಿದ ನಂತರ ಈ ಆಯುರ್ವೇದ ಕಷಾಯ ಸಿದ್ಧಗೊಳ್ಳುತ್ತದೆ. ಇದನ್ನು ಬೆಳಗ್ಗೆ ಮತ್ತು ಸಾಯಂಕಾಲ ಎರಡು ಟೈಂ ಬಿಸಿಬಿಸಿಯಾಗಿಯೇ ಸೇವಿಸುವುದರಿಂದ ಗಂಟಲಿಗೆ ಹಿತ ನೀಡುತ್ತದೆ. ಉಸಿರಾಟದ ಕ್ರಿಯೆ ಉತ್ತಮಗೊಳ್ಳಲು ಇದು ಸಹಕಾರ ನೀಡುತ್ತದೆ.
ಎಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಾವು ಪೊಲೀಸರು ನಿರ್ಭಯವಾಗಿ ಜನರ ಮಧ್ಯೆ ಕರ್ತವ್ಯಕ್ಕೆ ನಿಲ್ಲುತ್ತೇವೆ. ಈ ಮಧ್ಯೆ ನಮಗೂ ಸೋಂಕಿನ ಆತಂಕ ಇದ್ದೇಯಿದೆ. ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಕೆ ಮಾಡುವ ಜತೆಗೆ ಈ ಕಷಾಯವೂ ಕುಡಿದರೆ ಮಾನಸಿಕ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತಾರೆ ಪೊಲೀಸ್ ಪೇದೆಗಳಾದ ಮಾಲನಂಬಿ, ದೊಡ್ಡಪ್ಪ ಪೂಜಾರಿ, ಬಸಲಿಂಗಪ್ಪ ಮುನಗಲ್ ಹಾಗೂ ದತ್ತಾತ್ರೇಯ ಜಾನೆ. ಠಾಣೆಯಲ್ಲಿ ಬೇಯಿಯುವ ಔಷಧ ರೂಪದ ಕಷಾಯ ಜನಗಳ ಮನೆ ಮನೆಯಲ್ಲೂ ಬೇಯಬೇಕು ಎಂದು ಪೊಲೀಸ್ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.