ಸುರಪುರ : ತಾಲೂಕಿನ ಕಕ್ಕೇರಾ ಪಟ್ಟಣದ ಹದಿನೇಳನೆ ವಾರ್ಡಿನ ಕೃಷ್ಣಾನದಿಯ ನಡುಗಡ್ಡೆ ಗ್ರಾಮವಾದ ನೀಲಕಂಠರಾಯಗಡ್ಡಿ ಜನರ ಗೋಳು. ನದಿಸಾಲು ಫಲವತ್ತಾದ ಕೃಷಿ ಜಮೀನುಗಳನ್ನು ನಂಬಿ ಪ್ರವಾಹ ಲೆಕ್ಕಿಸದೇ ಬದುಕಿನ ಬಂಡಿ ದೂಡುತ್ತಿದ್ದಾರೆ. ಗ್ರಾಮದಲ್ಲಿ ೬೨ ಮನೆಗಳಿದ್ದು ೩೦೪ರಷ್ಟು ಜನಸಂಖ್ಯೆ ಇದೆ. ನಾವು ದೊರೆಗಳು ಎಂದು ಗತ್ತಿನಲ್ಲಿ ಹೇಳುವ ಇವರ ಗೋಳು ಮಾತ್ರ ಯಾರಿಗೆ ಬೇಡವಾಗಿದೆ.
ಕಳೆದ ವರ್ಷ ನೀಲಕಂಠರಾಯನಗಡ್ಡಿಗೆ ತೆರಳಲು ಶಾಸ್ವತ ಸೇತುವೆ ನಿರ್ಮಾಣ ಮಾಡಲಾಗಿತ್ತು, ನಿರ್ಮಾಣವಾದ ಒಂದೇ ತಿಂಗಳಿಗೆ ಅಂದರೆ ಕಳೆದ ವರ್ಷ ಉಂಟಾದ ಭಾರಿ ನೆರೆಗೆ ಸೇತುವೆ ಕಿತ್ತು ಹೋಗಿತ್ತು. ಇದರಿಂದ ಗಡ್ಡಿ ಜನರಿಗೆ ಜಂಘಾಬಲವೇ ಕುಸಿದಂತಾಗಿತ್ತು. ಸೇತುವೆ ಕಳಚಿ ವರ್ಷವಾಗುತ್ತಾ ಬಂದರೂ ಸೇತುವೆಯ ದುರಸ್ಥಿ ಕಾರ್ಯಕ್ಕೆ ಸರಕಾರ ಗಮನಹರಿಸಲಿಲ್ಲ. ಆದರೂ ಕೃಷ್ಣಾ ಹೈಡ್ರೋ ಪವರ್ ಕಂಪನಿಯವರು ಕೊಚ್ಚಿ ಹೋದ ಸೇತುವೆಯ ದುರಸ್ಥಿ ಕಾರ್ಯಕ್ಕೆ ಮುಂದಾಗಿದೆ.
ಸೇತುವೆಯ ಮೂಲಕ ನದಿ ದಾಟಿ ದ್ವೀಪಕ್ಕೆ ಸೇರುಬಹುದೆಂದು ಗಡ್ಡಿ ಜನರು ಕನಸಿಗೆ ಕೊಕ್ಕೆ ಹಾಕಿದ್ದು ಜಲ ವಿದ್ಯುತ್ ಉತ್ಪಾದನಾ ಘಟಕದ ಗೋಡೆ ನದಿಯ ನೀರಿಗೆ ಅಡ್ಡಲಾಗಿ ಗೋಡೆ ಕಟ್ಟಲಾಗಿದೆ. ಆದರೆ ನದಿಯ ಈ ಕಡೆಯ ದಡಕ್ಕೆ ಸೇರುವ ಸೇತುವೆ ಮುರಿದು ಬಿದ್ದಿದ್ದರಿಂದ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದರ ಮದ್ಯೆ ಗಾಯದ ಮೇಲೆ ಬರೆ ಎಳೆದಂತೆ ಕೃಷ್ಣಾನದಿಗೆ ೪೫ ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿಬಿಟ್ಟಿದ್ದರಿಂದ ಜನರು ದಾಟಿ ಬರಲು ಸಾಧ್ಯವಾಗುತ್ತಿಲ್ಲ. ನಿರ್ಮಾಣ ಹಂತದ ಕಬ್ಬಿಣದ ಸೇತುವೆಯ ಸರಳುಗಳ ಮೇಳೆ ಜೀವ ಕೈಯಲ್ಲಿಡಿದು ಜನರು ನದಿ ದಾಟುತ್ತಿದ್ದಾರೆ. ಕಬ್ಬಿಣದ ಸೇತುವೆ ಮೇಲೆ ನದಿ ದಾಟುವಾಗ ಯಾಮಾರಿದರೇ ಯಮನ ಪಾದವೇ ಗತಿ. ಸೇತುವೆ ಮೇಲೆ ಸರ್ಕಸ್ ಮಾಡುತ್ತಾ ಜನರು ಜೀವ ಕೈಯಲ್ಲಿಡಿದು ನದಿ ದಾಟುತ್ತಿದ್ದಾರೆ.
ಕೃಷ್ಣಾನದಿಗೆ ನೀರು ಬಂದಾಗ ನೀಲಕಂಠರಾಯನಗಡ್ಡಿ ಜನರ ಸಮಸ್ಯೆಗೆ ಮೊಸಳೆ ಕಣ್ಣೀರು ಸುರಿಸುವ ಮುಂಚೆ ಅಧಿಕಾರಿ ವರ್ಗ ಮೊದಲೇ ಎಚ್ಚೆತ್ತುಗೊಂಡಿದ್ದರೆ ಬೇಸಿಗೆಯಲ್ಲಿಯೇ ಸೇತುವೆ ನಿರ್ಮಾಣವಾಗಿ ಗಡ್ಡಿ ಜನರ ಸಮಸ್ಯೆಗೆ ಪರಿಹಾರವಾಗುತ್ತಿತ್ತು. ಈಗ ಮಳೆಗಾಲವಾಗಿದ್ದರಿಂದ ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚಾಗಿ ನದಿಗೆ ಪ್ರವಾಹ ಬರುತ್ತದೆ ಇನ್ನೂ ಕಬ್ಬಿಣದ ಸೇತುವೆ ನಿರ್ಮಾಣ ಕಾಮಗಾರಿ ವೇಗದಲ್ಲಿ ಕೈಗೊಂಡು ಗಡ್ಡಿಯ ಜನರು ಬಾಹ್ಯ ಪ್ರಪಂಚದ ಸಂಪರ್ಕಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ನೀಲಕಂಠರಾಯನಗಡ್ಡಿ ಜನರ ಪಾಲಿಗೆ ಆಡಳಿತ ಯಂತ್ರ ನಿಷ್ಕ್ರೀಯವಾಗಿರುವದು ಸಾಬೀತು ಮಾಡಿದಂತಿದೆ.