ಸುರಪುರ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಸತ್ಯಂಪೇಟೆ ಗ್ರಾಮದ ರೈತರ ಐವತ್ತಕ್ಕೂ ಹೆಚ್ಚು ಎಕರೆ ಭತ್ತದ ಗದ್ದೆಗಳು ನೀರಿನಿಂದ ತುಂಬಿ ನಿಂತು ರೈತರಿಗೆ ಮುಂಗಾರು ಆರಂಭದಲ್ಲೆ ಸಂಕಷ್ಟಕ್ಕೆ ದೂಡಿದೆ.
ಸತ್ಯಂಪೇಟೆ ಗ್ರಾಮದ ಅನೇಕ ರೈತರ ಜಮೀನುಗಳು ಊರ ಮುಂದಿನ ಹಳದ ಎಡ ಮತ್ತು ಬಲ ದಂಡಗಳಲ್ಲಿದ್ದು ಮುಂಗಾರು ಚೆನ್ನಾಗಿ ಆರಂಭಗೊಂಡಿದ್ದರಿಂದ ಹಳ್ಳದ ನೀರನ್ನ ಉಪಯೋಗಿಸಿಕೊಂಡು ಭತ್ತ ನಾಟಿ ಮಾಡಿದ್ದಾರೆ.ಆದರೆ ಸದ್ಯ ನಾಟಿ ಮಾಡಿದ ಎಲ್ಲಾ ಗದ್ದೆಗಳು ನೀರಿನಿಂದ ತುಂಬಿ ನಿಂತಿವೆ.
ಇದರ ಕುರಿತು ರೈತ ಶಿವರುದ್ರ ಉಳ್ಳಿ ತಮ್ಮ ಅಳಲನ್ನು ತೋಡಿಕೊಂಡಿದ್ದು,ಸುಮಾರು ಮೂವತ್ತು ಎಕರೆ ನಮ್ಮ ಜಮೀನು ಮಳೆಯಾಗಿದ್ದರಿಂದ ಹಳ್ಳದ ನೀರಿಗೆ ಭತ್ತ ನಾಟಿ ಮಾಡಿ ಮೂರು ದಿನಗಳಾಗಿದೆ.ಆದರೆ ಮೂರೆ ದಿನವಾದ ಸಸಿಗಳು ಈ ಭಾನುವಾರ ಸುರಿದ ಭಾರಿ ಮಳೆಯಿಂದ ಇಡೀ ಗದ್ದೆಗಳೆಲ್ಲ ತುಂಬಿ ಕೆರೆಗಳಂತಾಗಿದ್ದು ಇದರಿಂದ ಎಲ್ಲಾ ಸಸಿಗಳು ಕೊಳೆಯುವ ಭೀತಿ ಶುರುವಾಗಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ಸಸಿ ಬೆಳೆಸಿ ಈಗ ನಾಟಿ ಮಾಡಿದ್ದೆವೆ.ಅಲ್ಲದೆ ಸಸಿಗಳ ಬೆಳೆಸಲು ಬೀಜ ಗೊಬ್ಬರ ಮತ್ತು ಕ್ರಿಮಿನಾಶಕ ಎಂದು ಒಂದು ಲಕ್ಷ ರೂಪಾಯಿ ಸಮೀಪ ಹಣ ಖರ್ಚು ಮಾಡಿದ್ದೇವೆ.ಆದರೆ ಸದ್ಯ ಎಲ್ಲಾ ಸಸಿಗಳು ನೀರಲ್ಲಿ ನಿಂತು ಕೊಳೆಯುವುದರಿಂದ ನಮ್ಮ ಎಲ್ಲಾ ಕಷ್ಟವೂ ವ್ಯರ್ಥವಾಗಿದೆ.ಇದಕ್ಕೆ ಸರಕಾರ ನಮ್ಮ ನೆರವಿಗೆ ಬಂದರೆ ನಷ್ಟವಾಗಿರುವ ಎಲ್ಲಾ ರೈತರಿಗೆ ಒಂದಿಷ್ಟು ಚೇತರಿಕೆ ಬರಲಿದೆ.ಇಲ್ಲವಾದರೆ ಮತ್ತೆ ನಮಗೆ ಗೋಳು ತಪ್ಪಿದ್ದಲ್ಲ ಎಂದು ಬೇಸರದಿಂದ ನುಡಿಯುತ್ತಾರೆ.ಆದರೆ ಸರಕಾರ ಈ ರೈತರ ನೆರವಿಗೆ ಬರುವುದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.