ವಾಡಿ: ನಾಲವಾರ ಕಂದಾಯ ಅಧಿಕಾರಿಗೆ ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಬುಧವಾರ ಉಪ ತಹಶೀಲ್ದಾರರ ಆಡಳಿತ ಕೇಂದ್ರ ಕಾರ್ಯಾಲಯ ನಾಲವಾರ ನಾಡಕಚೇರಿ ಸೀಲ್ಡೌನ್ ಮಾಡಲಾಗಿದೆ.
ನಾಲವಾರ, ವಾಡಿ, ಕೊಲ್ಲೂರು, ಸನ್ನತಿ, ತರ್ಕಸ್‌ಪೇಟೆ, ರಾಮತೀರ್ಥ ವ್ಯಾಪ್ತಿಯ ಹಲವು ಗ್ರಾಮಗಳ ರೈತರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ದಾಖಲಾತಿ ವಿತರಿಸಲಾಗುತ್ತಿದ್ದ ನಾಡ ಕಚೇರಿಯ ಆರ್‌ಐಗೆ ಮಹಾಮರಿ ಒಕ್ಕರಿಸಿದ್ದರಿಂದ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವವರಲ್ಲಿ ಸೋಂಕಿನ ಆತಂಕ ಮನೆಮಾಡಿದೆ. ಸೋಂಕಿತ ಕಂದಾಯ ಅಧಿಕಾರಿ ಚಿತ್ತಾಪುರ ತಹಶೀಲ್ದಾರ ಕಚೇರಿಗೂ ಪದೇಪದೆ ಭೇಟಿ ನೀಡುತ್ತಿದ್ದರಿಂದ ತಾಲೂಕಿನ ತಹಶೀಲ್ ಕಚೇರಿಯೂ ಸೀಲ್ಡೌನ್ ಫಜೀತಿಗೆ ಒಳಗಾಗಿದೆ.
ಸದ್ಯ ನಾಲವಾರ ನಾಡಕಚೇರಿಯ ಸಾರ್ವಜನಿಕ ಸೇವೆ ಸ್ಥಗಿತಗೊಳಿಸಲಾಗಿದೆ. ಕೊರೊನಾ ಸೋಂಕು ಇಂದು ಸಾಮಾನ್ಯವಾಗುತ್ತಿದೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಸೋಂಕಿತರು ಬೇಗ ಗುಣಮುಖರಾಗಿ ಮನೆಗೆ ಬರುತ್ತಿದ್ದಾರೆ. ಬುಧವಾರ ಮತ್ತು ಗುರುವಾರ ಎರಡು ದಿನಗಳ ವರೆಗೆ ಮಾತ್ರ ಕಚೇರಿ ಸೀಲ್ಡೌನ್ ಮಾಡಲಾಗಿದೆ. ಶುಕ್ರವಾರ ಎಂದಿನಂತೆ ಸೇವೆ ಮುಂದುವರೆಸುತ್ತೇವೆ ಎಂದು ಉಪ ತಹಶೀಲ್ದಾರ ವೆಂಕನಗೌಡ ಪಾಟೀಲ ತಿಳಿಸಿದ್ದಾರೆ.