ಶಹಾಪುರ: ರಾಜ್ಯಾದ್ಯಂತ ಜು.25ರಂದು ಆಚರಿಸಲ್ಪಡುವ ನಾಗರಪಂಚಮಿ ಹಬ್ಬದಂದು ನಾಗರ ಹುತ್ತಕ್ಕೆ ಹಾಗೂ ನಾಗ ಪ್ರತಿಮೆಗಳಿಗೆ ಹಾಲು ಎರೆಯುವ ಬದಲು, ಅದೇ ಹಾಲನ್ನು ಬಡ ಮಕ್ಕಳಿಗೆ ಮತ್ತು ರೋಗಿಗಳಿಗೆ ನೀಡಬೇಕೆಂದು ದಲಿತ ಮುಖಂಡರಾದ ಶಿವು ಆಂದೋಲಾ ಮನವಿ ಮಾಡಿದ್ದಾರೆ.
ಹಬ್ಬದ ನೆಪದಲ್ಲಿ ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವಿಗೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ರೀತಿ ಅವೈಜ್ಞಾನಿಕವಾಗಿ ಆಚರಿಸ್ಪಡುವ ಹಬ್ಬದ ಕಾರಣದಿಂದಾಗಿ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ.
ಇದೇ ಹೊತ್ತಿನಲ್ಲಿ ರಾಜ್ಯದಲ್ಲಿ ಪ್ರತಿವರ್ಷ 40 ಸಾವಿರಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಮರಣ ಹೊಂದುತ್ತಿದ್ದಾರೆಂದು ನಾವು ಗಮನಿಸಬೇಕು. ಹುತ್ತಗಳಿಗೆ ಹಾಲನ್ನು ಸುರಿಯುವ ಮೂಲಕ ಹಾವುಗಳ ಪ್ರಾಣಕ್ಕೆ ಅಪಾಯ ತರುವ ಬದಲು ಅದೇ ಹಾಲನ್ನು ಬಡವರಿಗೆ, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಂಚುವ ಮೂಲಕ ಪೌಷ್ಟಿಕ ಆಹಾರ ಪೋಲಾಗುವುದನ್ನು ತಪ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.