ಶಹಾಬಾದ:ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಭಂಕೂರ ಗ್ರಾಮ ಐತಿಹಾಸಿಕ ಗ್ರಾಮವಾದರೂ, ಈ ಗ್ರಾಮ ಮೂರು ವಿಧಾನ ಪರಿಷತ್ ಸ್ಥಾನ ಪಡೆಯುವುದರ ಮೂಲಕ ಗಮನ ಸೆಳೆಯುತ್ತಿದೆ ಎಂಬುದಕ್ಕೆ ಎರಡು ಮಾತಿಲ್ಲ.
ಭಂಕೂರ ಗ್ರಾಮ ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿದ್ದರೂ, ಈಗ ರಾಜಕೀಯವಾಗಿ ಅಷ್ಟೇ ಗಮನ ಸೆಳೆಯುತ್ತಿದೆ. ಗ್ರಾಮದಲ್ಲಿ ಈ ಹಿಂದೆ ಗ್ರಾಮದ ಗಣ್ಯ ವ್ಯಕ್ತಿಗಳಾದ ದಿವಂಗತ ಶಾಂತಮಲ್ಲಪ್ಪ ಪಾಟೀಲ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.ಈಗ ಇದೇ ಗ್ರಾಮದ ಡಾ.ಸಾಬಣ್ಣ ತಳವಾರ ಅವರು ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ರಾಜಕೀಯವಾಗಿ, ಆರ್ಥಿಕವಾಗಿ ಬಲಿಷ್ಠರಾಗಿದ್ದ ಶಾಂತಮಲ್ಲಪ್ಪ ಪಾಟೀಲ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕೊಗೊಂಡಿದ್ದರೂ ಅಚ್ಚರಿಪಡಬೇಕಿಲ್ಲ. ಆದರೆ ಬಡ ಕುಟುಂಬದಲ್ಲಿ ಜನಸಿದ ಮತ್ತು ಯಾವುದೇ ರಾಜಕೀಯ ಬಲವಿಲ್ಲದೆ, ಡಾ.ಸಾಬಣ್ಣ ತಳವಾರ ಅವರು ಕಷ್ಟ ಪಟ್ಟು ಓದಿ ಗಮನಾರ್ಹ ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿಪಡುವಂತೆ ಎಂಎಲ್ಸಿ ಸ್ಥಾನ ಲಭಿಸಿಕೊಂಡಿದ್ದು ಮಾತ್ರ ಸುಳ್ಳಲ್ಲ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಭಂಕೂರ ಗ್ರಾಮದಲ್ಲೇ ಮುಗಿಸಿ, ಶಹಾಬಾದ ನಗರದ ಎಸ್ಎಸ್ ಮರಗೋಳ ಕಾಲೇಜಿನಲ್ಲಿ ಬಿಎ ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದರು. ನಂತರ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿ ಎಂಎ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದ್ದಿದ್ದರು.ಬಳಿಕ ಎಂಫಿಲ್, ಪಿಎಚ್ಡಿ ಪದವಿ ಪಡೆದು, ಮುದೋಳ ಸರ್ಕಾರಿ ಕಾಲೇಜು ಮತ್ತು ಚಿತ್ತಾಪೂರ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬೆಳಗಾವಿ ಪಿಜಿ ಕೇಂದ್ರದಲ್ಲಿ ನೇಮಕಗೊಂಡು ಅನೇಕ ಸಂಶೋಧನ ಪ್ರಬಂಧಗಳನ್ನು ನಾಡಿಗೆ ನೀಡಿದ್ದಾರೆ. ಒಳ್ಳೆಯ ಆರ್ಥಿಕ ತಜ್ಞರಾಗಿರುವ ಸಾಬಣ್ಣ ತಳವಾರ ಅವರು ಕಳೆದ ಐದು ವರ್ಷಗಳಿಂದ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರ ಶೈಕ್ಷಣಿಕ ಸಾಧನೆಯನ್ನು ಗಮನಿಸಿ ಇವರಿಗೆ ವಿಧಾನ ಪರಿಷತ್ ಸದಸ್ಯರ ಮುಕುಟ ನೀಡಿದೆ.
ಕೋಟ್ ಮಾಡಿ
ರಾಜ್ಯ ಸರ್ಕಾರ ನನ್ನ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ವಿಧಾನ ಪರಿಷತ್ ನೇಮಿಸಿರುವುದು ಸಂತೋಷ ತಂದಿದ್ದು, ಇನ್ನಷ್ಟು ಶಿಕ್ಷಣ ಕ್ಷೇತ್ರವನ್ನು ಗಟ್ಟಿಗೊಳಿಸುವತ್ತ ಶ್ರಮಿಸಲಾಗುವುದು- ಡಾ.ಸಾಬಣ್ಣ ತಳವಾರ ನೂತನ ವಿಧಾನ ಪರಿಷತ್ ಸದಸ್ಯ.
ಹಿಂದುಳಿದ ವರ್ಗದ ಮತ್ತು ಬಡ ಕುಟುಂಬದ ಡಾ.ಸಾಬಣ್ಣ ತಳವಾರ ತನ್ನ ಶೈಕ್ಷಣಿಕ ಸಾಧನೆಗಳ ಮೂಲಕ ಎಂಎಲ್ಸಿ ಸ್ಥಾನ ಪಡೆದುಕೊಂಡಿರುವುದಕ್ಕೆ ಭಂಕೂರ ಗ್ರಾಮಸ್ಥರಿಗೆ ಎಲ್ಲಿಲ್ಲದ ಸಂತಸ ಉಂಟಾಗಿದೆ- ಲಕ್ಷ್ಮಿಕಾಂತ ಕಂದಗೂಳ ಗ್ರಾಪಂ ಸದಸ್ಯ ಭಂಕೂರ.