ಸುರಪುರ: ಕೊರೊನಾ ವೈರಸ್ ದೇಶದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿಯೇ ನಾಗರ ಪಂಚಮಿ ಹಬ್ಬ ಆಗಮಿಸಿದ್ದು ಈಬಾರಿ ಸರಳವಾಗಿ ಹಬ್ಬ ಆಚರಿಸಲಾಯಿತು.ನಗರದಲ್ಲಿನ ಮಹಿಳೆಯರು ಮತ್ತು ಮಕ್ಕಳು ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಿದರು.
ಬೆಳಿಗ್ಗೆ ಮಹಿಳೆಯರು ಹೊಸ ಬಟ್ಟೆ ಧರಿಸಿ ಮಕ್ಕಳೊಂದಿಗೆ ನಗರದ ದೇವರಬಾವಿ ಬಳಿಯಲ್ಲಿನ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿಯಲ್ಲಿನ ನಾಗರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಹಾಲನೆರೆದು ಹಬ್ಬ ಆಚರಿಸಿದರು.ಆದರೆ ಪ್ರತಿ ವರ್ಷ ತುಂಬಾ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದ ನಗರದ ಜನತೆ ಈಬಾರಿ ಕೊರೊನಾ ಎಫೆಕ್ಟ್‍ನಿಂದಾಗಿ ಸರಳವಾಗಿ ಹಬ್ಬ ಆಚರಿಸಿದ್ದು ಕಂಡು ಬಂತು.
ಈ ಬಾರಿಯ ಹಬ್ಬದ ಕುರಿತು ಸಂಗೀತಾ ಎಸ್.ಮುರಾಳ ಗೃಹಿಣಿ ಮಾತನಾಡಿ,ನಾಗರ ಪಂಚಮಿ ಎಂಬುದು ನಮ್ಮ ದೇಶದಲ್ಲಿನ ಬಹುದೊಡ್ಡ ಹಬ್ಬ ಇದನ್ನು ನಾವೆಲ್ಲ ಒಂದು ವಾರಗಳ ಕಾಲ ಆಚರಿಸುತ್ತಿದ್ದೆವು.ಆದರೆ ಈ ವರ್ಷ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವುದರಿಂದ ತುಂಬಾ ಸರಳವಾಗಿ ಹಬ್ಬವನ್ನು ಆಚರಿಸುತ್ತಿದ್ದೆವೆ.ಇಂದು ನಾಗ ದೇವರ ಮೂರ್ತಿಗೆ ಹಾಲನೆರೆದು ಜಗತ್ತಿನಿಂದ ಕೊರೊನಾ ನಿರ್ಮೂಲನೆಯಾಗಲಿ,ನಾಡಿಗೆ ,ಮಳೆ ಬೆಳೆ ಚೆನ್ನಾಗಿ ಬರಲಿ ಹಾಗು ನಮ್ಮೆಲ್ಲ ಜನರು ಸುಖ ಸಂತೋಷದಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.