ಕಲಬುರಗಿ: ಶಹಾಬಾದ ನಗರದಲ್ಲಿ ಶುಕ್ರವಾರ ನಡೆದ ಗುಂಪು ದಾಳಿಯಿಂದ ಪಟ್ಟಣದ ಜಗದೀಶ ಎಂಬಾತ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಬಾದ ಠಾಣೆ ಪೊಲೀಸರು ಒಟ್ಟು ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ನಯೀಮ ಅಮ್ಜದ್ (೨೯), ಶೇಖ ದಾವೂದ್ (೨೦), ಮಹೆಬೂಬ ಪಟೇಲ (೨೫), ಮಹ್ಮದ್ ಶಬ್ಬೀರ್ (೨೨), ಮುಸ್ತಾಖ್ (೨೭), ನಿಹಾಲ್ ಅಹ್ಮದ್ (೨೭), ರಹೆಮಾನ (೨೩), ಸೈಯ್ಯದ್ ಅಸ್ಫಾಖ (೨೨) ಬಂಧಿತ ಕೊಲೆ ಆರೋಪಿಗಳಾಗಿದ್ದು, ಇವರೆಲ್ಲರೂ ಶಹಾಬಾದ ನಗರದ ನಿವಾಸಿಗಳಾಗಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ಕೆಲ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ತಿಳಿಸಿದ್ದಾರೆ.
ತಿರುವು ಪಡೆದ ಪ್ರಕರಣ: ಕೊಲೆಯಾದ ಪಟ್ಟಣದ ಪಿಲಕಮ್ಮಾ ದೇವಿ ಬಡಾವಣೆಯ ವಿವಾಹಿತ ಯುವಕ ಜಗದೀಶ, ಪಕ್ಕದ ಮನೆಯ ಅನ್ಯ ಕೋಮಿನ ವಿವಾಹಿತ ಯುವತಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಯುವತಿಯ ಕೋಮಿನವರು, ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ ಮಾರ್ಗ ಮಧ್ಯದಲ್ಲೇ ತಡೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.
ಗುಪ್ತಾಂಗ ಮತ್ತು ಹೃದಯ ಭಾಗಕ್ಕೆ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಜಗದೀಶ ಮೃತಪಟ್ಟಿದ್ದಾನೆ. ಮೃತ ಜಗದೀಶನ ಕುಟುಂಬ ಮತ್ತು ವಿವಾಹಿತ ಮಹಿಳೆಯ ಕುಟುಂಬ ಪರಸ್ಪರ ಅನ್ನೋನ್ಯವಾಗಿತ್ತು ಎನ್ನಲಾಗಿದ್ದು, ಅನ್ಯ ಕೋಮಿನ ಮಹಿಳೆ ಮೃತ ಜಗದೀಶನ ಜತೆ ಬೈಕ್ ಮೇಲೆ ಹೋಗಿ ಔಷಧ ತರಲು ಆಕೆಯ ಪತಿಯೇ ಅನುಮತಿ ನೀಡಿದ್ದಾನೆ ಎಂದು ಮೃತ ಜಗದೀಶನ ತಾಯಿ ಪ್ರತಿಕ್ರೀಯಿಸಿದ್ದಾರೆ. ಇದನ್ನೇ ಅನೈತಿಕ ಸಂಬಂಧ ಎಂದು ಭಾವಿಸಿದ ಆರೋಪಿಗಳು, ಗುಂಪು ದಾಳಿ ನಡೆಸಿದ್ದಾರೆ ಎಂಬುದು ತನಿಖೆಯಿಂದ ಬಯಲಾಗಿದೆ.
ಪರಸ್ಪರ ಕೋಮು ಸೌಹಾರ್ಧತೆಯಿಂದ ಬಾಳುತ್ತಿದ್ದ ಅನ್ಯ ಕೋಮಿನ ಎರಡು ಕುಟುಂಬಗಳ ಭವಿಷ್ಯದ ಮೇಲೆ ಕತ್ತಿ ಬೀಸಿರುವ ಕೋಮುವಾದಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಮೃತ ಜಗದೀಶನ ಕುಟುಂಬಕ್ಕೆ ಪರಿಹಾರ ನೀಡಬೇಕು. ಮೂವರು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ನಗರದ ಸರಕಾರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ್ದ ಎಸ್‌ಪಿ ಯಡಾಮಾರ್ಟೀನ್ ಅವರಿಗೆ ವಿವಿಧ ಸಂಘಟನೆಗಳ ಮುಖಂಡರು ಸಲ್ಲಿಸಿದರು.
ಪುರಸಭೆ ಉಪಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಪುರಸಭೆ ಸದಸ್ಯ ಕಾಂಗ್ರೆಸ್‌ನ ಶರಣು ನಾಟೀಕಾರ, ಮಹ್ಮದ್ ಅಶ್ರಫ್, ಅಲ್ತಾಫ್ ಸೌದಾಗರ, ಭಾಜಪ ಅಧ್ಯಕ್ಷ ಬಸವರಾಜ ಪಂಚಾಳ, ಕಾರ್ಯದರ್ಶಿ ವೀರಣ್ಣ ಯಾರಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಭೀಮಶಾ ಜಿರೊಳ್ಳಿ, ಬಂಜಾರಾ ಸೇವಾ ಸಂಘದ ಅಧ್ಯಕ್ಷ ಶಂಕರ ಜಾಧವ, ಯುವ ಮೋರ್ಚ ಅಧ್ಯಕ್ಷ ರವಿ ಕಾರಬಾರಿ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಕರವೇ ಅಧ್ಯಕ್ಷ ಸಿದ್ದು ಪೂಜಾರಿ ಮತ್ತಿತರರು ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ ಉಮಾಕಾಂತ ಹಳ್ಳೆ, ಉಪ ತಹಶೀಲ್ದಾರ ವೆಂಕನಗೌಡ ಪಾಟೀಲ, ಡಿವೈಎಸ್‌ಪಿ ವೆಂಕನಗೌಡ ಪಾಟೀಲ, ಪಿಎಸ್‌ಐ ವಿಜಯಕುಮಾರ ಭಾವಗಿ ಇದ್ದರು. ಶನಿವಾರ ಮದ್ಯಾಹ್ನ ಶವ ಪರೀಕ್ಷೆ ನಂತರ ವೀರಶೈವ ಸಮಾಜದ ರುದ್ರಭೂಮಿಯಲ್ಲಿ ಮೃತನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬ ಸದಸ್ಯರ ಆಕ್ರಂಧನ ಮುಗಿಲು ಮುಟ್ಟಿತು.