ಬಸವಾದಿ ಶರಣರ ಕಾಯಕ-ದಾಸೋಹ, ಸ್ತ್ರೀ ಸ್ವಾತಂತ್ರ್ಯ, ಜಾತಿ ವಿನಾಶ, ಅಧ್ಯಾತ್ಮ ಮಾರ್ಗದೆಡೆಗೆ ಸಾಗುವ ಸಿದ್ಧಾಂತಗಳು ಪ್ರಜಾಪ್ರಭುತ್ವ ಮಾದರಿಯ ಸಂವಾದ ಗೋಷ್ಠಿಯನ್ನು ನೆನಪಿಸುವಂತಿದೆ. ಕಾಯಕ-ದಾಸೋಹಕ್ಕೆ ಸಂಬಂಧಿಸಿದಂತೆ “ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು” ಎನ್ನುವ ಆಯ್ದಕ್ಕಿ ಮಾರಯ್ಯನ ವಚನ ಬಹಳ ಮುಖ್ಯವೆನಿಸುತ್ತದೆ.
ಇದಕ್ಕೆ ಪ್ರತಿಯಾಗಿ “ಕಾಯಕ ನಿಂದಿತ್ತು ಹೋಗಯ್ಯ ಎನ್ನಾಳ್ದನೆ…” ಎಂದು ಆಯ್ದಕ್ಕಿ ಲಕ್ಕಮ್ಮ ಹೇಳಿರುವುದು ಸ್ತ್ರೀ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಂತಿದೆ. ದೇವರಿಗಿಂತ ದೊಡ್ಡದು ಕಾಯಕ ಎಂದು ಮಾರಯ್ಯ ಹೇಳಿದರೆ, ನಿಮ್ಮ ಅನುಭಾವಕ್ಕಿಂತ ಕಾಯಕ ದೊಡ್ಡದು ಎಂಬ ಎಚ್ಚರಿಕೆಯನ್ನು ಲಕ್ಕಮ್ಮ ಹೇಳುವುದನ್ನು ಗಮನಿಸಬೇಕು. ಶರಣ ಮಧ್ಯೆ ಇಂತಹ ಅನೇಕ ಚರ್ಚೆ ಸಂವಾದ ನಡೆಯುತ್ತಿದ್ದವು ಎಂಬುದು ಶೂನ್ಯಸಂಪಾದನೆ ಕೃತಿಯಲ್ಲಿ ದಾಖಲಾಗಿದೆ.
ದಾಸಿ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬಂತಹ ನೂರರು, ಸಾವಿರಾರು ವಿಷಯಗಳ ಕುರಿತು ಚರ್ಚಿಸಿ ಶರಣರು ಕೊನೆಗೆ ಒಂದು ನಿರ್ಧಾರಕ್ಕೆ ಬರುತ್ತಿದ್ದರು. ಅಂತೆಯೇ ಇದನ್ನು ಪ್ರಪಂಚದ ಮೊದಲ ಸಂಸತ್ತು ಹೇಳಬಹುದು. “ಕುಂಡಲಿಗನೊಂದು ಕೀಡೆಯ ತಂದು ತನ್ನಂತೆ ಮಾಡಿತಲ್ಲಾ ಎಲೆ ಮಾನವಾ ಕೂಡಲಸಂಗನ ಶರಣರ ಅನುಭಾವ ಇದರಿಂದ ಕಿರುಕುಳವೆ ಎಲೆ ಮಾನವಾ”, “ತನ್ನಲ್ಲಿ ತಾ ಸನ್ನಿಹಿತವುಳ್ಳಡೆ ಶಿವಶರಣರ ಸಂಗವೇತಕನೆಗಯ್ಯ.
” ಎನ್ನುವ ಬಸವಣ್ಣನವರ ವಚನಗಳು ಅನುಭವ ಮಂಟಪದಲ್ಲಿ ನಡೆಯುವ ಚರ್ಚೆಗಳು ಮಾತಿನ ಮಥನಗಳಾಗಿರದೆ ಪರಿವರ್ತನೆಗೆ ಹಾದಿ ಮಾಡಿಕೊಡುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. “ಬಕ್ತಿಗೆ ಅನುಭಾವವೇ ಬೀಜ ಕಾಣಿರೋ ಅನುಭಾವ ಮಾಡುವಲ್ಲಿ ವಿನಯದಿಂದ ಕೇಳದಿದ್ದಡೆ ಕೂಡಲಚೆನ್ನಸಂಗಯ್ಯ ಘೋರ ನರಕದಲ್ಲಿಕ್ಕದೆ ಬಿಡುವನೆ? ಎನ್ನುವ ಚೆನ್ನಬಸವಣ್ಣನವರ ವಚನ ಮನುಷ್ಯನಿಗೆ ವಿನಯ ಬಹಳ ಮುಖ್ಯ ಎಂಬುದನ್ನು ತಿಳಿಸಿಕೊಡುತ್ತದೆ.
“ಮರಮರ ಮಥಿಸಿ ಕಿಚ್ಚು ಹುಟ್ಟಿ ಸುತ್ತಣ ತರುಮರಾದಿಗಳು ಸುಡಲಾಯಿತ್ತು..” ಎನ್ನುವ ಅಕ್ಕನ ವಚನ ಹಾಗೂ “ಅನುಭಾವದಿಂದ ತನು ಹಾಳಾಯುತ್ತು, ಮನ ಹಾಳಾಯಿತ್ತು… ಭಕ್ತಿಯೆಂಬೀ ಒಡವೆಯನು ದಿಟವ ಮಾಡಿದರು ತೋರಿದರು ಕಾಣಾ ಕೂಡಲಸಂಗಮದೇವ” ಎಂಬ ಅಣ್ಣನ ವಚನಗಳು, ಅನುಭವ ಮಂಟಪದ ನಿಯಮ ಪಾಲನೆ ಅನುಭಾವದ ಪರಿಣಾಮವನ್ನು ವಿವರಿಸುತ್ತವೆ. ಹೀಗಾಗಿ ಕಲ್ಯಾಣದ ಪರಿಸರದಲ್ಲಿ ಕಂಡುಬರುವ ಶರಣರ ನೆಲೆಗಳಲ್ಲಿ ನಡೆಯುತ್ತಿದ್ದ ಅನುಭಾವ ಗೋಷ್ಠಿಗಳೇ ಅನುಭವ ಮಂಟಪದ ಪರಿಕಲ್ಪನೆಯನ್ನು ತಂದುಕೊಡುತ್ತವೆ ಎಂದು ಹೇಳಬಹುದು. ಮಹಾಮನೆ, ಅರಿವಿನ ಮನೆ, ಅನುಭವ ಮಂಟಪ ಮುಂತಾದ ಕಡೆ ನಿಗದಿತ ವೇಳೆಯಲ್ಲಿ ೭೭೦ ಅಮರಗಣಂಗಳು ಚರ್ಚಿಸುತ್ತಿದ್ದ ಸ್ಥಳಗಳು ಇವುಗಳಾಗಿದ್ದವು.
ಹುಮನಾಬಾದ-ಬಸವಕಲ್ಯಾಣಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜೇಶ್ವರ ದಾಟಿದ ನಂತರ ತಡೋಳಾದಿಂದ ಎಡಕ್ಕೆ ಬರುವ ಹಂದ್ರಾಳ ಗ್ರಾಮದಲ್ಲಿ ಘಟ್ಟಿವಾಳಯ್ಯನವರ ಗವಿ ಇದೆ. ದೊಡ್ಡ ದೊಡ್ಡ ಈ ಗವಿಗಳನ್ನು ಗಮನಿಸಿದರೆ ಈ ಗವಿಗಳು ಜನಸಂಪರ್ಕದಲ್ಲಿರುವ ಗವಿಗಳಾಗಿದ್ದವು ಎಂದು ಹೇಳಬಹುದು. ಗವಿಯಲ್ಲಿ ಗವಿ ಇರುವುದು, ಶರಣರೆಲ್ಲರು ಇಂಥಲ್ಲಿಯೇ ಒಟ್ಟಿಗೆ ಪೂಜೆ ಮಾಡಿಕೊಳ್ಳುವ ಸ್ಥಳಗಳಾಗಿದ್ದವು ಎಂದು ಹೇಳಬಹುದು. ರಾಜೇಶ್ವರ ಗ್ರಾಮದಲ್ಲಿ ರಾಮಲಿಂಗೇಶ್ವರ ದೇವಸ್ಥಾನವಿದ್ದು, ಇಲ್ಲಿ ಮೂರು ಲಿಂಗಗಳಿರುವುದನ್ನು ಕಾಣಬಹುದು. ರಾಜೇಶ್ವರಲಿಂಗ ರಾಮೇಶ್ವರ ಲಿಂಗವಾಗಿರಬಹುದು.
ಅದೇ ಗ್ರಾಮದಲ್ಲಿ ಬಾಚಿ ಕಾಕಯದ ಬಸವಪ್ಪ, ಕಾಳವ್ವೆಯಗಳ ಗವಿ, ಇನ್ನೊಂದು ಅಪರಿಚಿತ ಗವಿ ಕೂಡ ಇದೆ. ಇದೀಗ ಆ ಜಾಗದಲ್ಲಿ ಹಿರಿದಾದ ಬಂಗ್ಲೆ ತಲೆಯೆತ್ತಿ ನಿಂತಿರುವುದು ಖೇದದ ಸಂಗತಿ. ಮೋಳ್ಕೇರಿಯಲ್ಲಿ ಮೋಳಿಗೆ ಮಾರಯ್ಯನವರ ಗವಿ, ಮೋಳಿಗೆ ಮಹಾದೇವಮ್ಮನವರ ಶಿಲ್ಪ, ಮೋಳಿಗೆ ಮಾರಯ್ಯನವರ ತಂಗಿ ಬೋಂತಾದೇವಿಯ ಶಿಲ್ಪ ವಿಗ್ರಹಗಳಿವೆ.
ಗಡವಂತಿಯಲ್ಲಿ ಮುಗ್ಧ ಸಂಗಯ್ಯನವರ ಗವಿ, ನುಲಿಯ ಚಂದಯ್ಯನ ಗವಿ ಕಾಣಬಹುದು. ಚಿಟಗುಪ್ಪದಲ್ಲಿ ಗುಡ್ಡ ಅಗೆದು ಮಾಡಿದ ಗವಿಯಿದ್ದು, ಇದನ್ನು ಮಡಿವಾಳಪ್ಪನ ಗವಿಯೆಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು. ಅಲ್ಲಮಪ್ರಭು ಗವಿ, ಅಲ್ಲಮಪ್ರಭುಗಳ ದೇವಾಲಯ, ಸಿದ್ಧರಾಮೇಶ್ವರರ ಗವಿಗಳು ಕೂಡ ಇವೆ.
ಸ್ಥಳ: ಕಲ್ಬರ್ಗಿ ಬಸವ ಸಮಿತಿಯ ಅನುಭವ ಮಂಟಪ
ಜಯನಗರ, ಕಲಬುರಗಿ