ಶಹಾಪುರ/ವಡಗೇರಾ: ತಾಲ್ಲೂಕಿನ ಸೂಗೂರ ಗ್ರಾಮದ ಪರಿಶಿಷ್ಟ ಪಂಗಡದ(ವಾಲ್ಮೀಕಿ ಸಮುದಾಯ) ಭೀಮಣ್ಣಗೌಡ ಹನುಮಗೌಡ ದೊರೆ ಅವರ ಏಕೈಕ ಕುಟಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ಕುಟುಂಬದ ಸದಸ್ಯರು ಆತಂಕಗೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಗ್ರಾಮದಲ್ಲಿ ನನ್ನದೊಂದೆ ಕುಟುಂಬವಿದೆ. ಐದು ಜನ ಮಕ್ಕಳಿದ್ದಾರೆ. ಗ್ರಾಮಸ್ಥರು ದುರುದ್ದೇಶದಿಂದ ಕೂಡಿ ಸಾಮಾಜಿಕ ಬಹಿಷ್ಕಾರವನ್ನು ಹಲವು ತಿಂಗಳ ಹಿಂದೆ ಹಾಕಿದ್ದಾರೆ. ದೇವಸ್ಥಾನಕ್ಕೆ ಪ್ರವೇಶ ಮಾಡಲು ಅವಕಾಶ ನೀಡುತ್ತಿಲ್ಲ. ಅಂಗಡಿಗೆ ತೆರಳಿ ನಮ್ಮ ಕುಟುಂಬದ ಸದಸ್ಯರು ಆಹಾರ ಸಾಮಗ್ರಿ ತೆಗೆದುಕೊಂಡು ಬರಲು ತೆರಳಿದರೆ ಅವಮಾನಿಸಿ ಯಾವುದೇ ವಸ್ತುಗಳನ್ನು ನೀಡುವುದಿಲ್ಲ. ನನ್ನ ಜಮೀನುಗಳಿಗೆ ಕೆಲಸಕ್ಕೆ ಬರುವುದಿಲ್ಲ. ದ್ವಿಚಕ್ರ ವಾಹನ ತೆಗೆದುಕೊಂಡು ರಸ್ತೆ ಮೇಲೆ ಹೊರಟಾಗ ಅವ್ಯಾಚ್ಚ ಶಬ್ದಗಳಿಂದ ನಿಂದಿಸುತ್ತಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಟುಂಬಕ್ಕೆ ಹಿಂಸೆ ನೀಡುತ್ತಿರುವುದು ತುಂಬಾ ನೋವುಂಟು ಮಾಡಿದೆ ಎಂದು ಅವರು ಆರೋಪಿಸಿದರು.
ಗ್ರಾಮದ ದಳಪತಿಯೇ ನಾನಿದ್ದೇನೆ. ಸಾಕಷ್ಟು ಅವಮಾನವನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಯಾವ ಸಮಯದಲ್ಲಿ ನನ್ನ ಕುಟುಂಬದ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸುತ್ತಾರೆ ಗೊತ್ತಿಲ್ಲ.ಅದರಲ್ಲಿ ಶಿವಪೂರ ಗ್ರಾಮದ ಮರೆಪ್ಪ ತೋಟದಮನೆ ಎನ್ನವರು ಹೆಜ್ಜೆ ಹಜ್ಜೆಗೂ ನಮ್ಮ ಕುಟುಂಬವನ್ನು ಹೀಯಾಳಿಸಿ ನೋವುಂಟು ಮಾಡುತ್ತಿದ್ದಾರೆ. ಇದರ ಬಗ್ಗೆ ವಡಗೇರಾ ಠಾಣೆಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದರು ಸಹ ಪೊಲೀಸರು ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದರಿಂದ ನನ್ನ ಕುಟುಂಬಕ್ಕೆ ರಕ್ಷಣೆ ಇಲ್ಲವಾಗಿದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗೆ ದೂರು ನೀಡಿರುವೆ. ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು. ಆತಂಕ ಮತ್ತು ಭೀತಿಯಲ್ಲಿರುವ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು.ಬಹಿಷ್ಕಾರ ಹಾಕಿದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.