ರಾವುರ ಸಿದ್ಧಲಿಂಗ ಮಠದಲ್ಲಿ ಭಾವೈಕ್ಯ ಬೆಸೆದ ಬಕ್ರೀದ್

0
59

ವಾಡಿ: ತ್ಯಾಗದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸಲ್ಮಾನ ಬಂಧುಗಳು ಹಿಂದೂ ಮಠದಲ್ಲಿ ಪೂಜ್ಯರ ಆಶೀರ್ವಾದ ಪಡೆಯುವ ಮೂಲಕ ಬಕ್ರೀದ್ ಹಬ್ಬವನ್ನು ಭಾವೈಕ್ಯದ ಸಂಗಮವಾಗಿ ಆಚರಿಸಿದರು. ರಾವೂರ ಗ್ರಾಮದ ಮಸೀದಿಯಲ್ಲಿ ಸಾಮೂಹಿಕ ನಮಾಜ್ ಮಾಡಿ ಮಠಕ್ಕೆ ಆಗಮಿಸಿದ ಮುಸ್ಲಿಂ ಮುಖಂಡರು, ಶ್ರೀಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಶ್ರೀ ಅಭಿನವ ಸಿದ್ಧಲಿಂಗ (ಧಾನೇಶ್ವರ) ದೇವರನ್ನು ನಮಿಸಿ ಆಶೀರ್ವಾದ ಪಡೆದುಕೊಂಡರು. ಮಠವನ್ನು ಪ್ರವೇಶಿಸಿ ಈದ್ ಸಂತಸ ಹಂಚಿಕೊಳ್ಳಲು ಮಠಕ್ಕೆ ಬಂದ ಇಸ್ಲಾಂ ಧಾರ್ಮಿಕ ಮುಖಂಡರನ್ನು ಮಠದೊಳಕ್ಕೆ ಸ್ವಾಗತಿಸಿದ ಪೂಜ್ಯ ಶ್ರೀಸಿದ್ಧಲಿಂಗ ದೇವರು, ಹೂಮಾಲೆ ಕೊಟ್ಟು ಹಬ್ಬದ ಶುಭಕೋರಿದರು.

ಈ ವೇಳೆ ಬಸವಾದಿ ಶರಣರ ಭಾವೈಕ್ಯದ ಚಿಂತನೆಗಳನ್ನು ನೆನಪಿಸಿದ ಸಿದ್ಧಲಿಂಗ ದೇವರು, ಜೀವನದಲ್ಲಿ ಪ್ರತಿಯೊಬ್ಬರೂ ಕೋಮು ಸೌಹಾರ್ಧತೆಗೆ ಮೊದಲ ಅಧ್ಯತೆ ನೀಡುವ ಜತೆಗೆ ಶಾಂತಿ, ಪ್ರೀತಿ, ಸಹೋದರೆತೆಯ ಕೊಂಡಿ ಬೆಸೆದುಕೊಂಡು ಸಾಗುವುದೇ ನಿಜವಾದ ಧರ್ಮವಾದೀತು. ಎಲ್ಲಿ ಕೋಮು ಭಾವನೆಯಿಲ್ಲವೋ ಅಲ್ಲಿ ದೇವರಿದ್ದಾನೆ. ಎಲ್ಲಿ ದ್ವೇಶ, ಅಸೂಹೆ, ಅಹಂಕಾರವಿಲ್ಲವೋ ಅಲ್ಲಿ ಅಲ್ಲಾಹ ಇದ್ದಾನೆ. ಕರುಣೆ, ಮಮತೆ, ಮೈತ್ರಿ ಇರುವಲ್ಲಿ ಮಾತ್ರ ಬುದ್ಧ, ಯೇಸು, ಪೈಗಂಬರ್ ಹಾಗೂ ಬಸವವಾದಿ ಶರಣರಿರುತ್ತಾರೆ. ಹಬ್ಬಗಳು ಪರಸ್ಪರ ಭಾವೈಕ್ಯ ಗಟ್ಟಿಗೊಳಿಸುವಂತಾಗಬೇಕು ಎಂದು ನುಡಿದರು.

Contact Your\'s Advertisement; 9902492681

ಮುಖಂಡರಾದ ಅಬ್ದುಲ್ ಅಜೀಜ್‌ಸೇಠ, ಡಾ.ಗುಂಡಣ್ಣ ಬಾಳಿ, ಯುನ್ಯೂಸ್ ಪ್ಯಾರೆ, ಮಹ್ಮದ್ ಹುಸೇನ ಮುದೇಲ್, ಜಾಕೀರ್ ಹುಸೇನ್ ಫತೇಖಾನ್, ಮುಕ್ರುಂ ಪಟೇಲ, ಹಾಜಿ ಮಾಸುಲ್ದಾರ, ಕರೀಮ ಪೀರಾವಾಲೆ, ರಜಾಕ್‌ಮಿಯ್ಯಾ, ಅಫ್ರೋಜ್ ಮೌಜನ್ ಹಾಮು ಮತ್ತಿತರರು ಪೂಜ್ಯರ ಆಶೀರ್ವಾದ ಪಡೆದುಕೊಂಡರು.

ಎಂಟು ಮಸೀದಿಗಳಲ್ಲಿ ಪ್ರತ್ಯೇಕ ಪ್ರಾರ್ಥನೆ: ಸಿಮೆಂಟ್ ನಗರಿ ವಾಡಿ ಪಟ್ಟಣದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಜಾಮೀಯಾ ಮಸೀದಿ, ಮಕ್ಕಾ ಮಸೀದಿ, ಸಾಧಿಕಿನ್ ಮಸೀದಿ, ಮದೀನಾ ಮಸೀದಿ, ಕಮಲೀಯಾ ಮಸೀದಿ, ಬಿಯ್ಯಾಬನಿ ಮಸೀದಿ, ಇಂದ್ರಾನಗರ ಮಸೀದಿ, ನಿಜಾಮ ಗೇಟ್ ಮಸೀದಿ ಸೇರಿದಂತೆ ಒಟ್ಟು ಎಂಟು ಮಸೀದಿಗಳಲ್ಲಿ ಪ್ರತ್ಯೇಕವಾಗಿ ಏಕಕಾಲಕ್ಕೆ ಸಾಮೂಹಿಕ ನಮಾಜ್ ಕೈಗೊಳ್ಳಲಾಯಿತು. ಸಾಂಕ್ರಾಮಿಕ ರೋಗ ನಿಯಮದಂತೆ ಈ ಬಾರಿ ಈದ್ಗಾದಲ್ಲಿ ಪ್ರಾರ್ಥನೆಗೆ ಅವಕಾಶ ದೊರೆಯದ ಕಾರಣ ತಮ್ಮ ತಮ್ಮ ಬಡಾವಣೆಗಳ ಮಸೀದಿಗಳಲ್ಲೇ ನಮಾಜ್ ಮಾಡುವ ಮೂಲಕ ಮುಸ್ಲಿಂ ಬಾಂಧವರು ಈದ್ ಆಚರಿಸದರು.

ಹಸ್ತಲಾಘವ ಮತ್ತು ಪರಸ್ಪರ ಅಲಿಂಗನಕ್ಕೆ ಅವಕಾಶವಿಲ್ಲದಿದ್ದರೂ ಅನೇಕರು ಹಳೆಯ ಸಾಂಪ್ರದಾಯದಂತೆಯೇ ಹಬ್ಬದ ಶುಭಕೋರಿದ ದೃಶ್ಯಗಳು ಕಂಡುಬಂದವು. ಹಳಕರ್ಟಿ, ಲಾಡ್ಲಾಪುರ, ನಾಲವಾರ, ಕುಂದನೂರು, ಇಂಗಳಗಿ, ಕೊಲ್ಲೂರು, ಕಮರವಾಡಿ, ಚಾಮನೂರು, ಕೊಂಚೂರು, ಬಳವಡಗಿ, ಕಡಬೂರ ಗ್ರಾಮಗಳಲ್ಲೂ ತ್ಯಾಗ ಬಲಿದಾನದ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here