ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಶರಣ ಭೋಗಣ್ಣನ ದೇವಾಲಯದ ಜೊತೆಗೆ ಶರಣ ರೇವಣಸಿದ್ಧರ ದೇವಾಲಯ ಇರುವುದನ್ನು ಕಾಣಬಹುದಾಗಿದ್ದು, ಕೆಂಭಾವಿಯಲ್ಲಿ ದೊರೆತ ಶಾಸನದ (೧೦೫೪)ದಲ್ಲಿ ಲಿಖಿತದಂತೆ ಅಲ್ಲೊಂದು ಈಶ್ವರ ದೇವಲಯ ಇದೆ. ರೇವಣಸಿದ್ಧರು ಕಲ್ಯಾಣದ ಸಂಪರ್ಕದ ನಂತರ ಈ ಆಭಾಗದಲ್ಲಿದ್ದ ಶರಣರ ನೆಲೆಗಳಿಗೆ ಭೇಟಿ ಕೊಟ್ಟರು.
ಅಲ್ಲೆಲ್ಲ ತಿರುಗಾಡಿದ್ದಾರೆ ಎಂಬುದು ನಮಗೆ ತಿಳಿದು ಬರುತ್ತದೆ. ಸಂಗಮೇಶ್ವರ ದೇವಾಲಯದ ಎದುರಿಗೆ ಕೆರೆಯ ಮಧ್ಯೆ ಭೋಗಣ್ಣನ ದೇವಲಯ ಕಟ್ಟಲಾಗಿದೆ. ಅದರ ಸುತ್ತಲೂ ಕಂದಕವಿದೆ. ಈ ದೇವಸ್ಥಾನಕ್ಕೆ ಹೋಗಲು ಏಳು ಅಂತಸ್ತಿನ ಸೇತುವೆಗಳು ಇದ್ದವು ಎಂಬ ಮೌಖಿಕ ಮಾಹಿತಿಯಂತೆ ಕೆರೆ ಹೂಳೆತ್ತು ವಾಗ ಸೇತುವೆಯ ಕೆಳ ಅಂತಸ್ತಿನ ಭಾಗ, ಅಲ್ಲೊಂದು ಗರ್ಭಗುಡಿ ದೊರೆತಿರುವುದನ್ನು ಈಗಲೂ ಕಾಣಬಹುದು.
ಅಫಜಲಪುರ ತಾಲ್ಲೂಕಿನ ರೇವೂರ ಹಾಗೂ ಮಲ್ಲಾಬಾದನಲ್ಲಿ ಪ್ರಸಿದ್ಧವಾದ ರೇವಣಸಿದ್ಧೇಶ್ವರ ದೇವಸ್ಥಾನವಿದೆ. ಜೇವರ್ಗಿ ತಾಲ್ಲೂಕಿನ ಕೋಣಸಿಸರಗಿ ಹೊರಗಿನ ಪ್ರದೇಶದಲ್ಲಿರುವ ಸಿದ್ಧಾಪುರದ ದೇವಾಲಯದ ಕಂಬದಲ್ಲಿರುವ ಶಿಲಾ ಶಾಸನ (೧೦೫೫) ಬರಹದಂತೆ ಇದು ಸಿದ್ಧೇಶ್ವರ ದೇವಾಲಯ ಆಗಿದ್ದು, ಭೀಮಾನದಿಯ ದಡದಲ್ಲಿ ಕಟ್ಟಿಸಂಗಾವಿಯಲ್ಲಿ ರೇವಣಸಿದ್ಧೇಶ್ವರ ಮಠವಿದೆ.
ಹಿಂದೊಮ್ಮೆ ಭೀಮೆ ತುಂಬಿ ಹರಿಯುವಾಗ ರೇವಣಸಿದ್ಧರು ನೀರಿನ ಮೇಲೆ ಕಂಬಳಿ ಹಾಸಿ ಈಜಿ ದಡ ಸೇರಿದರು ಎಂಬ ಕಥೆಯನ್ನು ಪೂಜರಿಗಳು ಈಗಲೂ ಹೇಳುತ್ತಾರೆ. ಈ ಊರಲ್ಲಿ ಹಳೆಯ ಸಂಗಮೇಶ್ವರ ದೇವಾಲಯ ಇದೆ. ಜೇವರ್ಗಿ ತಾಲ್ಲೂಕಿನ ಕೋಳಕೂರನಲ್ಲಿ ರೇವಣಸಿದ್ಧೇಶ್ವರ ಹೆಸರಿನ ಲಿಂಗ ಇರುವುದನ್ನು ನಾವು ಈಗಲೂ ಕಾಣಬಹುದಾಗಿದ್ದು. ಕಲ್ಯಾಣ ಕ್ರಾಂತಿಯ ನಂತರ ಬಸವಕಲ್ಯಾಣದಿಂದ ಉಳಿವಿಡೆಗೆ ತೆರಳುವ ಸಂದರ್ಭದಲ್ಲಿ ಶರಣರು ಇಲ್ಲಿಯೇ ತಂಗಿದ್ದರು ಎಂದು ಹೇಳಲಾಗುತ್ತದೆ. ಸ್ವಲ್ಪ ಮುಂದೆ ಹೀದರೆ ಷಣ್ಮುಖ ಶಿವಯೋಗಿಗಳು ಬಾಲ್ಯದಲ್ಲಿ ಕಳೆದ ಜೋಗಿ ಕೊಳ್ಳವನ್ನು ಸಹ ಇಲ್ಲಿ ಕಾಣಬಹುದು.
ಗಾಣಿಗನ ವೇಷದ ರೇವಣಸಿದ್ಧರು ಗಾಣಿಗನಿಗೆ ತವನಿಧಿ ಕೊಟ್ಟ ಬಂದ ಹರಿಹರನ ಕಥೆಯ ಜಾಡು ಹಿಡಿದು ಚಿಂಚೋಳಿ ತಾಲ್ಲೂಕಿನ ರಟಗಲ್‌ಗೆ ಹೋದರೆ ಅಲ್ಲಿ ರೇವಣಸಿದ್ಧೇಶ್ವರ ಮಠ ಸಿಗುತ್ತದೆ. ಮಠದ ಮುಂದೆ ಗಾಣದ ಕಲ್ಲಿನ ಚೆಕ್ಕಿ ಈಗಲೂ ಇರುವುದನ್ನು ಗುರುತಿಸಬಹುದು.
ರೇವಣಸಿದ್ಧರು ಇಲ್ಲಿಗೆ ಸಮೀಪದ ಗುಡ್ಡದಲ್ಲಿಯೇ ಬಹಳ ಕಾಲ ವಾಸವಾಗಿದ್ದರಿಂದ ರೇವಣನ ಗಿರಿ (ರೇವಗ್ಗಿ) ಎಂದು ಕರೆಯುತ್ತಾರೆ. ಅಲ್ಲೊಂದು ಕಮರಿಮಠವಿದೆ. ಆ ಊರಿನಲ್ಲಿರುವ ರೇವಣಸಿದ್ಧೇಶ್ವರರ ಮಠದಲ್ಲಿ ಗಂಗಮ್ಮಾಯಿಯ ಸಣ್ಣ ಗುಡಿ ಕೂಡ ಇದೆ. ಇಲ್ಲಿಂದ ಗುಡ್ಡ ಏರಿದರೆ ರೇವಣಸಿದ್ದೇಶ್ವರ ದೇವಸ್ಥಾನದ ಗರ್ಭಗುಡಿಯ ಎದುರಿಗೆ ಮಾಯಿಯ ಮೂರ್ತಿ ಕಾಣಬಹುದು.
ಕಲಬುರಗಿ ಸಮೀಪದ ಮಹಾಗಾಂವ ಗ್ರಾಮದ ಕುರುಬರ ಗಲ್ಲಿಯಲ್ಲಿ ರೇವಣಸಿದ್ಧೇಶ್ವರರ ದೇವಸ್ಥಾನ ಇದೆ. ಅವರೆ ಆ ಗುಡಿಯ ಪೂಜಾರಿಗಳಿದ್ದಾರೆ. ಗದಗ ಜಿಲ್ಲೆಯ ಕಣವಿಯಲ್ಲಿ ಕೂಡ ಇದೇ ಪದ್ಧತಿ ಇರುವುದನ್ನು ಕಾಣಬಹುದು. ಆಳಂದ ತಾಲ್ಲೂಕಿನ ಸಲಗರ ಗ್ರಾಮದಲ್ಲಿ ರೇವಣಸಿದ್ದೇಶ್ವರ ಹಾಗೂ ಮಹಾಂತ ಮಠ, ಮಹಾದೇವ ಮಂದಿರಗಳನ್ನು ಕಾಣಬಹುದು.
ಅದರಂತೆ ಕಮಾಲಾಪುರದಲ್ಲಿ ಜೇಡರ ದಾಸಿಮಯ್ಯ, ಶಂಕರ ದಾಸಿಮಯ್ಯ, ಸಿದ್ದರಾಮೇಶ್ವರ ಮಠ-ಗುಡಿಗಳು ಕಾಣುತ್ತವೆ. ಘಾಟ ಬೋರಾಳದಲ್ಲೂ ಇವರಿಬ್ಬರ ಗವಿಗಳಿವೆ. ಸಿದ್ರಾಮೇಶ್ವರರ ದೇವಾಲಯ ಮತ್ತು ಅದಕ್ಕೆ ಹೊಂದಿಕೊಂಡ ಪುರಾತನ ಸ್ಮಾರಕವಿರುವುದನ್ನು ಗಮನಿಸಿದರೆ ಆಗಿನ ಕಾಲದಲ್ಲಿ ಇಲ್ಲಿ ಶರಣರು ಬಹಳ ಜನ ಇದ್ದರು ಎಂಬುದು ಗೊತ್ತಾಗುತ್ತದೆ. ಮರುಳಶಂಕರ ದೇವಾಲಯ ಕೂಡ ಇದೆ.
ಬೆಂಗಳೂರು ಸಮೀಪದ ರಾಮನಗರದಲ್ಲೂ ರೇವಣಸಿದ್ದೇಶ್ವರ ದೇವಾಲಯ ಇದೆ. ರ‍್ಯಾವಪ್ಪನ ಲಿಂಗ ಎಂದು ಕರೆಯುತ್ತಿದ್ದರಂತೆ. ೧೫ ಕಿ. ಮೀ. ದೂರದಲ್ಲಿ ಬರುವ ಅವರೇಹಳ್ಳಿಯಿಂದ ೩ ಕಿ. ಮೀ. ದೂರದಲ್ಲಿ ಬೆಟ್ಟದಲ್ಲಿ ರೇವಣಸಿದ್ಧೇಶ್ವರ ಮಂದಿರ ಇದೆ. ಮರುಳಸಿದ್ಧೇಶ್ವರ ದೇವಾಲಯ ಇದೆ.
ಬಹುಶಃ ರೇವಣಸಿದ್ಧರು ತಪಗೈದ ಸ್ಥಳ ಇದಾಗಿದ್ದು, ಗುಡ್ಡದ ಹಿಂದೆ ನಾಲ್ಕೈದು ಸಾಲಿನ ಶಾಸನ (೧೧೯೩), ಬರಹದ ಪ್ರಕಾರ ರೇವಣಸಿದ್ಧರ ಶಿಷ್ಯ (ಮಗ) ಮರುಳಸಿದ್ಧರು ಎಂಬುದು ಮಗೆ ತಿಳಿದು ಬರುತ್ತದೆ. ರೇವಣಸಿದ್ಧೇಶ್ವರ ದೇವಸ್ಥಾನಗಳಿಗೆ ಕೆಲವು ಕಡೆ ಕುರುಬ ಸಮುದಾಯದವರು ಪೂಜಿಸಿದರೆ, ಸಿದ್ಧರಾಮೇಶ್ವರರ ದೇವಸ್ಥಾನಗಳಿಗೆ ಮರಾಠಿಗರು, ಕಲ್ಲುಕುಟಿಕರು ಪೂಜೆ ಮಾಡಿಕೊಂಡು ಬರುವುದನ್ನು ಕಾಣುತ್ತೇವೆ.