ಶ್ರೀ ರಾಮಮಂದಿರ ಶಂಕುಸ್ಥಾಪನೆ ಹಿನ್ನೆಲೆ: ಕಲಬುರಗಿ ನಗರದಾದ್ಯಂತಹ ಆಗಸ್ಟ್ 6ರವರೆಗೆ ನಿಷೇಧಾಜ್ಞೆ

0
69

ಕಲಬುರಗಿ:  ಬುಧವಾರ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಶಂಕು ಸ್ಥಾಪನೆ ಹಿನ್ನೆಲೆಯಲ್ಲಿ ಕಲಬುರಗಿ ನಗರದಾದ್ಯಂತಹ ಶಾಂತಿ, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ 2020ರ ಆಗಸ್ಟ್ 4ರ ಮಧ್ಯಾಹ್ನ 3 ಗಂಟೆಯಿಂದ ಆಗಸ್ಟ್ 6ರ ಬೆಳಗಿನ 6 ಗಂಟೆಯವರೆಗೆ ಕಲಂ 144 ಸಿ.ಆರ್.ಪಿ.ಸಿ. ಅನ್ವಯ ಕಲಬುರಗಿ ನಗರದಾದ್ಯಂತ ನಿಷೇಧಾಜ್ಞೆ ಹೊರಡಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಎನ್.ಸತೀಶ್‍ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಇದಲ್ಲದೇ ಕಲಬುರಗಿ ನಗರದಲ್ಲಿ ಸ್ಪೋಟಕ ವಸ್ತುಗಳ ಮಾರಾಟ ಹಾಗೂ ಸ್ಪೋಟಿಸುವುದನ್ನು (ಹಾರಿಸುವುದು) ನಿಷೇಧಿಸಲಾಗಿದೆ. ಕಾನೂನು ಭಂಗವನ್ನುಂಟು ಮಾಡುವ ಉದ್ದೇಶದಿಂದ 4 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಮತ್ತು ಸಭೆ ಸಮಾರಂಭಗಳನ್ನು ನಡೆಸುವುದು, ಕೋಮು ಗಲಭೆಗೆ ಸಂಬಂಧಿಸಿದ ಹೇಳಿಕೆ ಮತ್ತು ಭಾಷಣ ಮಾಡುವುದನ್ನು ನಿಷೇಧಿಸಲಾಗಿದೆ.

Contact Your\'s Advertisement; 9902492681

ಶಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಸೇರಿದಂತೆ ಮುಂತಾದ ಮಾರಕಾಸ್ತ್ರಗಳ ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು, ಯಾವುದೇ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲು, ಕ್ಷೀಪಣಿಗಳನ್ನು ಎಸೆಯುವ ಸಾಧನ ಅಥವಾ ಉಪಕರಣಗಳ ಒಯ್ಯುವುದು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ.

ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವುದು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆ ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರ, ಸಂಕೇತ, ಭಿತ್ತಿಪತ್ರ ಅಥವಾ ಇತರೆ ಯಾವುದೇ ವಸ್ತು ಹಾಗೂ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.
ಸಭ್ಯತೆ ಅಥವಾ ನೀತಿಯನ್ನು ಅತಿಕ್ರಿಮಿಸಬಹುದಾದ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಬಹುದಾದ ಅಥವಾ ರಾಜ್ಯದ ಭದ್ರತೆಯನ್ನು ಕುಗ್ಗಿಸಬಹುದಾದ ಅಥವಾ ಅಪರಾಧ ಮಾಡಲು ಪ್ರಚೋದಿಸಬಹುದಾದ ಬಹಿರಂಗ ಘೋಷಣೆ ಮಾಡುವುದು, ಹಾಡುವುದು, ಅಂಕ ನಿರೂಪಣೆಗಳ ಉಪಯೋಗ ಮಾಡುವುದು ಮತ್ತು ಚಿತ್ರಗಳ ಸಂಕೇತ, ಭಿತ್ತಿ ಪತ್ರಗಳನ್ನು ಅಥವಾ ಇತರ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು ಅಥವಾ ಪ್ರಸಾರ ಮಾಡುವುದನ್ನು ಸಹ ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here