ಶರಣರ ಸ್ಮಾರಕಗಳಲ್ಲಿ: ಸೊನ್ನಲಿಗೆಯ ಸಿದ್ಧರಾಮೇಶ್ವರರು: “ಶರಣ ಚರಿತೆ”

0
84

ಸೊನ್ನಲಿಗೆಯ ಸಿದ್ಧರಾಮನ ಕುರಿತು ಹರಿಹರನ ರೇವಣಸಿದ್ಧ ರಗಳೆ, ರಾಘವಾಂಕನ ಸಿದ್ಧರಾಮ ಚರಿತೆಯಿಂದ ಅವರ ಹುಟ್ಟಿನ ಬಗ್ಗೆ ತಿಳಿದು ಬರುತ್ತದೆ. ಹಿರಿಯ ಶರಣ ರೇವಣಸಿದ್ಧೇಶ್ವರರು ಮಂಗಳವೇಡೆಯಿಂದ ತಮ್ಮ ಭಕ್ತರ ಜೊತೆ ಸೊಲ್ಲಾಪುರಕ್ಕೆ ಆಗಮಿಸಿದ್ದಾಗ ಪಲ್ಲಕ್ಕಿಯಿಂದಿಳಿದು ಭೂಮಿಗೆ ನಮಸ್ಕರಿಸಿ ಭೂಮಿಗೆ ಕಾಲು ತಾಗದಂತೆ ನಡೆಯುತ್ತಿದ್ದರು. ಅವರ ಈ ನಡೆ ಕುರಿತು ಶಿಷ್ಯರು ಪ್ರಶ್ನಿಸಿದಾಗ ಈ ಊರಲ್ಲಿ ಮುದ್ದುಗೌಡ ಸುಗ್ಗಲೆಯರ ಉದರದಲ್ಲಿ ಒಬ್ಬ ಕಾರಣಿಕನ ಜನನವಾಗುತ್ತದೆ. ಇದು ಪುಣ್ಯಭೂಮಿಯಾಗುತ್ತದೆ ಎಂದು ಹೇಳಿದ್ದರು ಎಂದು ರಾಘವಾಂಕನು ಬರೆಯುತ್ತಾನೆ.

ಮುದ್ದುಗೌಡನ ಮನೆಗೆ ಬಂದು ಸುಗ್ಗಲೆಯ ಉದರಕ್ಕೆ ಭಸ್ಮ ಹಚ್ಚಿ ತಮ್ಮ ಶಿಷ್ಯ ಹಗೂ ರುದ್ರಮುನಿಯೆಡೆಗೆ ನೋಡುತ್ತಾನೆ ಎಂದು ಹರಿಹರನ ರಗಳೆಯಲ್ಲಿ ಬರುವುದರಿಂದ ಸಿದ್ಧರಾಮನಿಗಿಂತ ರುದ್ರಮನಿ ಹಿರಿಯ ಎಂದು ತಿಳಿದು ಬರುತ್ತದೆ. ಈ ರುದ್ರಮುನಿಯೇ ಹಾವಿನಾಳ ಕಲ್ಲಯ್ಯನಿಗೆ ದೀಕ್ಷೆ ನೀಡಿದರು ಎಂಬುದು ಕೂಡ ಗೊತ್ತಾಗುತ್ತದೆ.

Contact Your\'s Advertisement; 9902492681

ಇಂತಹ ಸಿದ್ಧಿಪುರುಷನಿಗಾಗಿ ಒಂದಿಷ್ಟು ಜಾಗ ಮೀಸಲಿಡಬೇಕು ಎಂದು ರಾಣಿ ಚಾಮಲಾದೇವಿಯ ಕನಸಿನಲ್ಲಿ ಶಿವ ಬಂದು ಹೇಳಿದ ಮತ್ತು ರೇವಣಸಿದ್ಧನೇ ಚಾಮಲಾದೇವಿ ಮನೆಗೆ ಹೋಗಿ ಸ್ಥಳ ಕೊಡುವಂತೆ ಹೇಳಿದ ಸಿದ್ಧರಾಮನ ಬಗೆಗಿನ ಈ ಪ್ರಸಂಗವನ್ನು ಹರಿಹರ ರಾಘವಾಂಕರು ಭಿನ್ನವಾಗಿ ಬರೆಯುತ್ತಾರೆ. ಬಾಲಕ ಸಿದ್ಧರಾಮ ಮಲ್ಲಿಕಾರ್ಜುನನಿಗೆ ನಮ್ಮೂರಿಗೆ ಬಂದು ನೆಲೆಸು.

ಹಿರಿದಾದ ಪರ್ವತವೊಂದನ್ನು ಇಲ್ಲಿ ಸೃಷ್ಟಿಸು ಎಂದು ಕೇಳಿದಾಗ ಲಿಂಗದಿಂದ ಲಿಂಗ ಪ್ರತಿಷ್ಠಾಪಿಸಿದರೆ ನಿಮ್ಮೂರಿಗೆ ಬರುತ್ತೇನೆ ಎಂಬ ಸಿದ್ಧರಾಮ ಪುರಾಣದ ಕತೆಗೆ ಸಂಬಂಧಿಸಿದಂತೆ ಕೆರೆಯ ಭಾಗದಲ್ಲಿರುವ ಮಲ್ಲಿಕಾರ್ಜುನ ದೇವಾಲಯ ನೋಡಬಹುದು. ರಾಘವಾಂಕ ಕವಿ ಇದು ಯಾವ ದಿಕ್ಕಿನಲ್ಲಿ, ಎಷ್ಟು ಜಮೀನು ಇದೆ ಎಂಬ ಇತ್ಯಾದಿ ಸಂಗತಿಗಳನ್ನು ಬಹಳ ಸ್ಪಷ್ಟವಾಗಿ ತಿಳಿಸಿರುವುದರಿಂದ ರಾಘವಾಂಕ ಬಹುಶಃ ಇಲ್ಲಿಗೆ ಭೇಟಿ ನೀಡಿ ಸಿದ್ಧರಾಮನ ಚರಿತೆಯನ್ನು ಬರೆದಿರಬಹುದು ಎಂದು ಸಂಶೋಧಕ ಡಾ. ಎಂ. ಎಂ. ಕಲ್ಬುರ್ಗಿ ತಿಳಿಸುತ್ತಾರೆ.

ಸೊಲಾಪುರದಲ್ಲಿ ಸಿದ್ಧರಾಮನ ದೇವಾಲಯ ಅವರು ಹುಟ್ಟಿ ಬೆಳೆದ ಮನೆ, ಆ ಮನೆಯೊಳಗೆ ಸಿದ್ಧರಾಮನ ಜಗಲಿ ಕಟ್ಟೆ ಇದೆ. ಸೊಲ್ಲಾಪುರದ ಸಿದ್ಧರಾಮೇಶ್ವರ ದೇವಾಲಯಕ್ಕೆ ಭೇಟಿ ಕೊಡುವ ಜನರು ಅವರ ಮನೆಗೂ ಭೇಟಿ ಕೊಡುತ್ತಾರೆ. “ಸಿದ್ಧರಾಮ ಬಲ್ಯದಲ್ಲಿದ್ದಾಗ ಶಿವ ಪ್ರತ್ಯೇಕ್ಷ ಆಗಿ ಮೊಸರನ್ನ ತರಲು ಹೇಳಿದ. ಬಾಲಕ ಅದನ್ನು ತರುವಷ್ಟರಲ್ಲೇ ಆತ ಇರಲಿಲ್ಲ” ಎಂಬ ಕಥೆಗೆ ಸಂಬಂಧಿಸಿದಂತೆ ಸಿದ್ಧರಾಮನಿಗೆ ಶಿವ ಭೇಟಿಯಾದ ಸ್ಮಾರಕ (ಗುರುಭೇಟ) ಕೂಡ ಅಲ್ಲಿ ಕಾಣಬಹುದು.

ಮಲ್ಲಿಕಾರ್ಜುನನ ಬೆನ್ನು ಹತ್ತಿ ಯಾತ್ರಿಕರೊಂದಿಗೆ ಶ್ರೀಶೈಲಕ್ಕೆ ತೆರಳಿದ್ದ ಸಿದ್ಧರಾಮನನ್ನು ಬೊಮ್ಮಣ್ಣ ಮತ್ತೆ ಸೊಲ್ಲಾಪುರಕ್ಕೆ ಕರೆ ತಂದ ಎಂಬ ಕಥೆಗೆ ಪೂರಕವಾಗಿ ಕೆರೆಯ ಆ ಕಡೆ ದಂಡೆಗೆ ಬಾಲ ಬೊಬ್ಬಣ್ಣನ ಸಣ್ಣ ದೇವಾಲಯವಿದೆ. ಸಿದ್ಧರಾಮನ ಹೆಸರು ಅವರು ಕೈಕೊಂಡಿದ್ದ ಜನಕಲ್ಯಾಣ ಕಾರ್ಯದ ವಿಷಯ ತಿಳಿದ ಅಲ್ಲಮಪ್ರಭುಗಳು ಬಸವಣ್ಣನಿರುವ ಕಲ್ಯಾಣಕ್ಕೆ ಇವರನ್ನು ಕರೆ ತಂದರೆ ವಚನ ಚಳವಳಿಗೆ ಶಕ್ತಿ ಬರುತ್ತದೆ ಎಂದುಕೊಂಡರು.

ಸೊಲ್ಲಾಪುರಕ್ಕೆ ಬಂದು “ಒಳಗೆ ತೊಳೆದು ಜಲವ ತುಂಬಲರಿಯದ ಅರೆಮರುಳೇನಾದ ಹೇಳಿರೆ, ಕೆರೆಯೆ ಕಟ್ಟಿಸುವ ಒಡ್ಡರಾಮನ ಇರವೆಂತು ಹೇಳಿರೆ?” ಎಂದು ಸಿದ್ಧರಾಮನ ಶಿಷ್ಯರನ್ನು ಕೇಳಿದರು. ನಂತರ ಅವರಿಬ್ಬರೂ ಅಲ್ಲಿಯೇ ಭೇಟಿಯಾದರು ಎಂಬ ಕಥೆಗೆ ಸಂಭಂಧಿಸಿದಂತೆ ಅಲ್ಲೊಂದು ಅಲ್ಲಮಪ್ರಭು ದೇವಾಲಯ ಇರುವುದನ್ನು ನಾವು ಕಾಣುತ್ತೇವೆ.

ಕೆರೆಕಟ್ಟೆಗಳನ್ನು ಕಟ್ಟಿಸುವ ಜನೋಪಯೋಗಿ ಕಾರ್ಯ ಮಾಡಿದ ಶಿವಯೋಗಿಸಿದ್ಧರಾಮರು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ ರಾಜ್ಯಗಳ ವಿವಿಧೆಡೆ ಲೋಕ ಪರ್ಯಟನೆ ಮಾಡಿದರು. ಈ ಮಾತಿಗೆ ಸಾಕ್ಷಿ ಎನ್ನುವಂತೆ ಇಲ್ಲೆಲ್ಲ ಅವರ ಸ್ಮಾರಕಗಳಿರುವುದನ್ನು ಇಂದಿಗೂ ಕಾಣಬಹುದು.

ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರುವ ಸೋಲಾಪುರದಲ್ಲಿ ಸಿದ್ಧರಾಮೇಶ್ವರರ ಭವ್ಯ ದೇವಾಲಯ ಇದೆ. ಸಿದ್ಧರಾಮೇಶ್ವರ ಹೆಸರಿನ ಜೊತೆಗೆ ಅಲ್ಲಿನ ಜನರು ಮಳೆರಾಜ, ಮಳೆಯ ದೇವರು ಎಂಬಿತ್ಯಾದಿಯಾಗಿ ಕರೆಯುವುದನ್ನು ಕಾಣುತ್ತೇವೆ. ಅದರಂತೆ ಶಿವಪುರ, ತುಮಕೂರು ಜಿಲ್ಲೆಯ ಬೆಳಗುಂಬ, ಕೊಪ್ಪ, ದಬ್ಬೆಗಟ್ಟ ಶಿವಮೊಗ್ಗ ಜಿಲ್ಲೆಯ ಹಿರೇಜಂಬೂರು, ಹಳೆಮುತ್ತಗಿ ಮುಂತಾದೆಡೆ ಸಿದ್ಧರಾಮೇಶ್ವರರ ತೋರು ಗದ್ದುಗೆಗಳಿರುವುದನ್ನು ಕಾಣಬಹುದು. ಅಂತರ್ಜಲ ಗುರುತಿಸುವ ಶಕ್ತಿ ಸಿದ್ಧರಾಮೇಶ್ವರಿಗೆ ಇತ್ತು ಎಂಬುದು ನಮಗೆ ತಿಳಿದುಬರುತ್ತದೆ.

ಸ್ಥಳ: ಅನುಭವ ಮಂಟಪ,
ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here