‘ನೆಲದ ಹೊನಲು:ವಚನದೊಳಗಿನ ಕಲ್ಯಾಣ’ ಎಂಬ ವೈಚಾರಿಕ ಕೃತಿ ಜನಾರ್ಪಣೆ

0
159

ಕಲಬುರಗಿ: ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳು ಬದುಕಿನ ಎಲ್ಲ ಮಗ್ಗಲುಗಳನ್ನು ಮುಟ್ಟಿ ಮಾತನಾಡಿಸುತ್ತವೆ. ಅವುಗಳನ್ನು ಕಣ್ಣಿಂದ ನೋಡಿ ಕಿವಿಯಿಂದ ಕೇಳಿ ಮನದಲ್ಲಿ ಕಾಪಾಡಿಟ್ಟುಕೊಂಡು ಬದುಕನ್ನು ಹಸನು ಮಾಡಿಕೊಳ್ಳಬೇಕಾಗಿದೆ ಎಂದು ಚಿತ್ರದುರ್ಗ ಬ್ರಹನ್ಮಠದ ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ನುಡಿದರು.

ಚಿತ್ರದುರ್ಗದ ಬ್ರಹನ್ಮಠದಲ್ಲಿ ಬುಧವಾರ ಜರುಗಿದ ಸಮಾರಂಭದಲ್ಲಿ ಸಾಂಸ್ಕೃತಿಕ ಸಂಘಟಕ-ಲೇಖಕ ವಿಜಯಕುಮಾರ ತೇಗಲತಿಪ್ಪಿ ಅವರ ವಿರಚಿತ ‘ನೆಲದ ಹೊನಲು: ವಚನದೊಳಗಿನ ಕಲ್ಯಾಣ’ ಎಂಬ ವೈಚಾರಿಕ ಕೃತಿಯನ್ನು ಜನಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ಸಮಕಾಲೀನ ತವಕ-ತಲ್ಲಣಗಳಿಗೆ ವಚನಗಳಲ್ಲಿ ಅಮೃತಸ್ವರೂಪವಾದ ಸಂದೇಶಗಳಿವೆ. ಈ ನೆಲದ ಶರಣರು ಕನ್ನಡದಲ್ಲಿ ಅತ್ಯಂತ ಸರಳವಾಗಿ ವಚನಗಳನ್ನು ರಚಿಸಿದ್ದು, ಅವುಗಳನ್ನು ವರ್ತಮಾನದಲ್ಲಿ ಮನನ ಮತ್ತು ಅನ್ವಯಿಸಬೇಕಾಗಿದೆ ಎಂದು ನುಡಿದ ಅವರು, ಈ ದಿಸೆಯಲ್ಲಿ ಸಂಘಟನೆ ಎಂಬುದು ಸಂಕಷ್ಟದ ಹಾದಿ, ಇಂಥ ಸಂಘಟನಾ ಹಾದಿಯನ್ನೇ ಸಂತಸದ ವೇದಿಕೆಯಾಗಿಸಿಕೊಂಡ ವಿಜಯಕುಮಾರ ತೇಗಲತಿಪ್ಪಿ ಅವರು, ಸಮಾಜದಲ್ಲಿ ನಾಡು-ನುಡಿ, ನೆಲ-ಜಲ, ಸಾಹಿತ್ಯ-ಸಾಂಸ್ಕೃತಿಕ ಸೆಲೆ ಬತ್ತದಂತೆ ಅವಿರತವಾಗಿ ಕಾರ್ಯಪ್ರವೃತ್ತರಾಗುವ ಮೂಲಕ ಇಂದಿನ ಸಮಾಜದ ‘ನಿಜ ಜಂಗಮ’ ಎನಿಸಿಕೊಂಡಿದ್ದಾರೆ ಎಂದು ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ತಮ್ಮ ಮುಕ್ತ ಕಂಠದಿಂದ ಬಣ್ಣಿಸಿದರು.

Contact Your\'s Advertisement; 9902492681

ಪ್ರಕೃತಿಯ ಒಂದು ಭಾಗವಾಗಿರುವ ನಾವು ಪ್ರಕೃತಿಯ ನಡೆ-ನುಡಿಯಲ್ಲಿ ಜೀವನವನ್ನು ನಡೆಸಬೇಕಾಗಿದೆ. ಪ್ರಕೃತಿಗೆ ನಾವು ಎಸಗುತ್ತಿರುವ ಕ್ರೌರ್ಯದ ಪ್ರತಿಫಲವಾಗಿಯೇ ಇಂದು ಹಲವಾರು ಪ್ರಾಕೃತಿಕ ಅವಘಡಗಳು ಜರುಗುತ್ತಿವೆ. ಹನ್ನೆರಡನೆಯ ಶತಮಾನದ ವಚನಕಾರರು ಪ್ರಕೃತಿಯನ್ನು ಪ್ರೀತಿಸಿ, ಆರಾಧಿಸಿದರು.

ಸಾಂಸ್ಕೃತಿಕ ಸಂಘಟಕ-ಶರಣ ಲೇಖಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ವಚನ ಚಳವಳಿಯು ವ್ಯವಸ್ಥೆಯ ವಿರುದ್ಧ ಜನ ಸಾಮಾನ್ಯರ ಬದುಕಿಗೆ ಇಂಬು ನೀಡುವುದಾಗಿದೆ. ಅನೇಕ ಶರಣರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡಿ ವಚನ ಸಾಹಿತ್ಯ ಸಂರಕ್ಷಿಸಿ ನಮ್ಮ ಕೈಗೆ ನೀಡಿದ್ದಾರೆ. ಅದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಕ್ರಿಯಾಶೀಲ ಗೆಳೆಯರ ಬಳಗದ ಪ್ರೊ.ಯಶವಂತರಾಯ ಅಷ್ಠಗಿ, ಕಲ್ಯಾಣಕುಮಾರ ಶೀಲವಂತ ಮಾತನಾಡಿ, ‘ವಚನ ಸಾಹಿತ್ಯ ಬಸವಾದಿ ಶರಣರು ವಿಶ್ವಕ್ಕೆ ನೀಡಿದ ಸಂವಿಧಾನವಾಗಿದೆ. ಕಾನೂನಿನಲ್ಲಿ ಇರುವ ಎಲ್ಲ ಕಲಂಗಳಲ್ಲಿನ ಅಂಶಗಳು ವಚನಗಳಲ್ಲಿ ಇವೆ ಎಂದು ಮಾರ್ಮಿಕವಾಗಿ ಹೇಳಿದರು.

ಶರಣ ಚಿಂತಕರಾದ ಬಸವರಾಜ ಕಟ್ಟಿ, ರವೀಂದ್ರಕುಮಾರ ಭಂಟನಳ್ಳಿ ಮಾತನಾಡಿದರು. ಪ್ರಮುಖರಾದ ಶರಣರಾಜ್ ಛಪ್ಪರಬಂದಿ, ನಾಗೇಂದ್ರಪ್ಪ ಮಾಡ್ಯಾಳೆ, ಪ್ರಭುಲಿಂಗ ಮೂಲಗೆ, ಶಿವಶರಣ ಕುಸನೂರ, ಶಿವರಾಜ ಅಂಡಗಿ, ಡಾ.ಕೆ.ಗಿರಿಮಲ್ಲ, ಪರಮೇಶ್ವರ ಶಟಕಾರ, ಸತೀಶ ಸಜ್ಜನಶೆಟ್ಟಿ, ಭಾಗ್ಯಜ್ಯೋತಿ ಹಿರೆಮಠ, ರಾಜೇಶ್ವರಿ ಸಾಹು, ಸಂಗೀತಾ ರೆಡ್ಡಿ, ರವಿಕುಮಾರ ಶಹಾಪುರಕರ್, ಪ್ರಭವ ಪಟ್ಟಣಕರ್, ಡಾ.ನಾಗರಾಜ ಹೆಬ್ಬಾಳ, ಹಣಮಂತರಾಯ ಅಟ್ಟೂರ, ಬಿ.ಎಂ.ಪಾಟೀಲ ಕಲ್ಲೂರ, ಜಗದೀಶ ಮರಪಳ್ಳಿ, ವಿದ್ಯಾಸಾಗರ ದೇಶಮುಖ, ಶರಣಬಸವ ಜಂಗಿನಮಠ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here