ಬೆಲೆ ಏರಿಕೆ-ಭ್ರಷ್ಟಾಚಾರ: ಬಿಜೆಪಿ ಸರ್ಕಾರದ ಸಾಧನೆ: ಕಾಮ್ರೇಡ್ ವೀರಭದ್ರಪ್ಪ

0
55

ಕಲಬುರಗಿ: ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯನ್ನು ತಗ್ಗಿಸಬೇಕಾದ ಕೇಂದ್ರ ಬಿಜೆಪಿ ಸರಕಾರ, ಸ್ವತಹ ಅವುಗಳನ್ನು ಪೋಷಿಸುತ್ತಿದೆ ಎಂದು ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಆರೋಪಿಸಿದರು.

ವಾಡಿ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಎಸ್‍ಯುಸಿಐ (ಸಿ) ಪಕ್ಷದ ಸಂಸ್ಥಾಪಕ ಅಧ್ಯಕ್ಷ ಕಾಮ್ರೇಡ್ ಶಿವದಾಸ ಘೋಷ್ ಅವರ 45ನೇ ಸ್ಮಾರಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಜನರಲ್ಲಿ ಪ್ರಾಣಭೀತಿ ಹುಟ್ಟಿಸಿರುವ ಕೊರೊನಾ ಸಂಕಟದ ಮಧ್ಯೆಯೂ ಜನವಿರೋಧಿ ಆಡಳಿತ ನೀಡುತ್ತಿರುವ ಕೇಂದ್ರ ಸರಕಾರ ಜನಸಾಮಾನ್ಯರ ಬೇಡಿಕೆಗಳನ್ನೇ ಮರೆತುಬಿಟ್ಟಿದೆ. ಬಂಡವಾಳಶಾಹಿಗಳ ಪಾದಪೂಜೆಯಲ್ಲಿ ನಿರತರಾಗುವ ಮೂಲಕ ಜನತಾಂತ್ರಿಕ ಹಕ್ಕುಗಳ ಮೇಲೆ ದೊಡ್ಡ ಪೆಟ್ಟು ನೀಡಿದೆ. ಕೊರೊನಾ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಎಡವಿರುವ ಮೋದಿ ಸರಕಾರ, ಮಹಾ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.

Contact Your\'s Advertisement; 9902492681

ನಿರುದ್ಯೋಗ, ಬಡತನ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಬೆಲೆಯೇರಿಕೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹುಸಿ ಭರವಸೆಯನ್ನು ಮೂಡಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಆಶೋತ್ತರಗಳ ಮೇಲೆ ತಣ್ಣೀರೆರಚಿದೆ. ಆದ್ದರಿಂದಲೇ ಈ ಸಮಸ್ಯೆಗಳ ವಿರುದ್ಧ ಹಾಗೂ ಆಳುವ ಸರ್ಕಾರಗಳ ಮೋಸದ ವಿರುದ್ಧ ಇನ್ನೊಂದೆಡೆ ದೇಶದ ಜನರ ತಾಳ್ಮೆಯ ಕಟ್ಟೆಯೊಡೆದು ಇತ್ತೀಚೆಗೆ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರ ಹಾಗೂ ರೈತ ಕಾರ್ಮಿಕರ ದೊಡ್ಡ ದೊಡ್ಡ ಹೋರಾಟಗಳು ಭುಗಿಲೇಳುತ್ತಿವೆ. ಆದರೆ ಈ ಎಲ್ಲಾ ಹೋರಾಟಗಳಲ್ಲಿ ವೈಚಾರಿಕ ಹಾಗೂ ಸೈದ್ಧಾಂತಿಕ ತಳಹದಿಯ ಮೇಲೆ ಹೋರಾಟಗಳನ್ನು ಜೀವಂತವಾಗಿಡುವ ಅವಶ್ಯಕತೆಯಿದೆ. ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿಗಳ ವಿರುದ್ಧ ಸಮಾಜವಾದಿ ಕ್ರಾಂತಿಗಾಗಿ ನಾವೆಲ್ಲರು ಸಂಕಲ್ಪ ತೆಗೆದುಕೊಳ್ಳಬೇಕಿದೆ ಎಂದರು.

ಇದಕ್ಕೂ ಮೊದಲು ಕ್ರಾಂತಿಯ ಕೆಂಪು ಧ್ವಜಾರೋಹಣ ನೆರವೇರಿಸಲಾಯಿತು. ಕಾರ್ಯಕರ್ತರು ಕಾಮ್ರೇಡ್ ಶಿವದಾಸಘೋಷ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪಕ್ಷದ ಗೀತೆಯಾದ ‘ಸರ್ವಹರಾ’ ದೊಂದಿಗೆ ಆರಂಭಗೊಂಡು ‘ಅಂತರರಾಷ್ಟ್ರೀಯ’ ಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು. ಪಕ್ಷದ ಸದಸ್ಯರಾದ ಕಾಮ್ರೇಡ್ ಶರಣು ಹೇರೂರ, ಯೇಸಪ್ಪ ಕೇದಾರ, ವೆಂಕಟೇಶ ದೇವದುರ್ಗ, ಅರುಣ ಹಿರೆಬಾನರ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here