ಬೈಪಾಸ್‌ ರಸ್ತೆಯ ಪರಿಷ್ಕೃತ ಪ್ರಸ್ತಾವನೆ ಎನ್‌ಹೆಚ್‌ಎಐ ಕಚೇರಿಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ

0
27

ಬೆಂಗಳೂರು: ನೈಸ್‌ ಕಂಪನಿಯ ಪ್ರತಿನಿಧಿಗಳ ಜೊತೆ ನಡೆಸಿರುವ ಸಭೆಯ ಅಂಶಗಳನ್ನು ಒಳಗೊಂಡ ಪರಿಷ್ಕೃತ ಪ್ರಸ್ತಾವನೆಯನ್ನು ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾದ ಕೇಂದ್ರ ಕಚೇರಿಗೆ ಶುಕ್ರವಾರದ ಒಳಗಾಗಿ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಇಂದು ವಿಡಿಯೋ ಸಂವಾದದ ಮೂಲಕ ಹುಬ್ಬಳ್ಳಿ ಧಾರವಾಡ ಭಾಗದ ಕೆ.ಆರ್‌.ಡಿ.ಸಿ.ಎಲ್‌, ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಅಡಿ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು. ವಿಡಿಯೋ ಸಂವಾದದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಸಚಿವರಾದ ಶ್ರೀ ಪ್ರಹ್ಲಾದ್‌ ಜೋಶಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಗದೀಶ ಶೆಟ್ಟರ ಮತ್ತು ಉಪಮುಖ್ಯಮಂತ್ರಿ ಶ್ರೀ ಗೋವಿಂದ ಕಾರಜೋಳ ಅವರುಗಳು ಭಾಗವಹಿಸಿದ್ದರು.

Contact Your\'s Advertisement; 9902492681

ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್‌ ಜೋಶಿ, ಜುಲೈ 24 ರಂದು ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ನೈಸ್‌ ಕಂಪನಿಯ ಪ್ರತಿನಿಧಿಗಳ ಜೊತೆಯಲ್ಲಿ ನಡೆಸಿದ ಸಭೆಯ ಮಾಹಿತಿಗಳನ್ನು ಅಧಿಕಾರಿಗಳಿಂದ ಅವರು ಪಡೆದುಕೊಂಡರು. ಇದೇ ಸಂಧರ್ಭದಲ್ಲಿ ಅಧಿಕಾರಿಗಳು ಈ ಕಾಮಗಾರಿಯ ಸಂಬಂಧ ಬೆಂಗಳೂರಿನಲ್ಲಿ ಅಗತ್ಯ ವಿರುವ ಎಲ್ಲಾ ಅಗತ್ಯ ಕಾರ್ಯಗಳನ್ನು ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು. ನಂತರ, ಕೇಂದ್ರ ಸಚಿವರು ಸಭೆಯ ಅಂಶಗಳನ್ನು ಒಳಗೊಂಡಿರುವ ಹುಬ್ಬಳ್ಳೀ ಧಾರವಾಡ ಬೈಪಾಸ್‌ ರಸ್ತೆಯ ಪರಿಷ್ಕೃತ ಪ್ರಸ್ತಾವನೆಯನ್ನು ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾದ ಕೇಂದ್ರ ಕಚೇರಿಗೆ ಕಳುಹಿಸಿಕೊಡುವಂತೆ ಸೂಚನೆ ನೀಡಿದರು. ತಾವು ದೆಹಲಿಯಲ್ಲಿ ಕೇಂದ್ರ ಸಚಿವರಾದ ನಿತೀನ್‌ ಗಡ್ಕರಿ ಅವರೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಗದೀಶ ಶೆಟ್ಟರ ಮಾತನಾಡಿ, ಕಾಮಗಾರಿ ಪ್ರಾರಂಭದ ನಂತರ ಯಾವುದೇ ಅಡೆತಡೆಗಳು ಬಾರದ ರೀತಿಯಲ್ಲಿ ಸಂಬಂಧಪಟ್ಟ ಎಲ್ಲಾ ಕಡೆಗಳಿಂದ ಅಗತ್ಯ ಒಡಂಬಡಿಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಈ ಪ್ರಸ್ತಾಪದ ಆರ್ಥಿಕ ಅನುಮೋದನೆಯ ನಂತರ ಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕಾದ ಸರ್ವೀಸ್‌ ರೋಡ್‌, ಅಂಡರ್‌ ಪಾಸ್‌ ನಂತಹ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುವಂತೆ ತಿಳಿಸಿದರು. ಇದೇ ವೇಳೆ, ಹುಬ್ಬಳ್ಳಿ – ಬಿಜಾಪುರ ರಸ್ತೆಯ ಕಾಮಾಗಾರಿಯ ಬಗ್ಗೆ ಪ್ರಸ್ತಾಪಿಸಿದ ಅವರು, 218 ನೇ ನ್ಯಾಷನಲ್‌ ಹೈವೇ ರಸ್ತೆಯ ಕಾಮಗಾರಿ ಸಮರ್ಪಕವಾಗಿ ಮುಗಿದಿಲ್ಲ. ಆದರೂ ಹೆಬಸೂರು ಬಳಿ ಟೋಲ್‌ ಸಂಗ್ರಹಕ್ಕೆ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾಮಗಾರಿ ಮುಗಿಯದೆ ಟೋಲ್‌ ಸಂಗ್ರಹ ಸರಿಯಲ್ಲ ಎಂದು ಹೇಳಿದರು. ಈ ಕಾಮಗಾರಿ ಯನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಅರವಿಂದ್‌ ಬೆಲ್ಲದ್‌, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಧಾರವಾಡ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಕೆ ಆರ್‌ ಡಿ ಸಿ ಎಲ್‌ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here