ಶರಣ ಕೋಲಶಾಂತಯ್ಯನವರ ಕುರಿತು ಪಾಲ್ಕುರಿಕೆ ಸೋಮನಾಥ, ಭೀಮಕವಿ, ಹರಿಹರ ಮುಂತಾದವರು ಯಾರೂ ಲಿಖಿತ ರೂಪದಲ್ಲಿ ಬರೆದಿಲ್ಲ. ಕೆಲ ಕೃತಿಗಳಲ್ಲಿ ಇವರ ಪ್ರಸ್ತಾಪ ಸಿಕ್ಕರೂ ಸಹ ಅದು ಅಲ್ಪ ಪ್ರಮಾಣವಾಗಿದೆ. ಅವರ ಕೈಯಲ್ಲಿ ಕೋಲು ಇರುತ್ತಿತ್ತು. ಹೀಗಾಗಿ ಇವರನ್ನು ಕೋಲಶಾಂತಯ್ಯ ಎಂದು ಕರೆಯುತ್ತಿದ್ದರು. ಇವರು ನೀಲಕಂಠ ದೇವರ ಭಕ್ತರಾಗಿದ್ದರು.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಭೀಮಾನದಿಯ ನೀರಿನಲ್ಲಿ ಸ್ನಾನ ಮಾಡಿ ದೇವರ ಪೂಜೆ ಮಾಡುತ್ತಿದ್ದರು. ಸಂಜೆವೇಳೆ ಸ್ನಾನಕ್ಕೆ ತೆರಳುವಾಗ ಭೀಮಾನದಿಯ ದಂಡೆಯ ಮರಳಿನ ಮೇಲೆ ತಮ್ಮ ಕೈಯಲ್ಲಿರುವ ಕೋಲನ್ನು ನೆಲಕ್ಕೂರಿ ಅದಕ್ಕೆ ಕಂದೀಲು ಸಿಕ್ಕಿಸಿ ಸ್ನಾನ ಮಾಡಿ ಮತ್ತೆ ಪೂಜೆಗೆ ತೆರಳುತ್ತಿದ್ದರು ಎಂಬ ಮೌಖಿಕ ಮಾಹಿತಿ ಮಾತ್ರ ದೊರೆಯುತ್ತದೆ. ಆದರೆ ಕೋಲಿನ ಮಹತ್ವ ಅನುಸರಿಸಿ ಪವಾಡ ಪುರುಷರಾಗಿದ್ದರು ಎಂಬ ಸಣ್ಣ ಘಟನೆಯನ್ನು ಪುರಾಣದಲ್ಲಿ ಹೇಳುತ್ತಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿಯಿಂದ ವಿಜಯಪುರ ಮಾರ್ಗವಾಗಿ ತೆರಳುವ ಮುಖ್ಯ ರಸ್ತೆಯಲ್ಲಿ ಬರುವ ಸೊನ್ನ ಕ್ರಾಸ್‌ನಿಂದಲಗಡೆ ಆರು ಕಿ. ಮೀ. ತೆರಳಿದರೆ ಸಾಕು ನೆಲೋಗಿ ಎಂಬ ಗ್ರಾಮ ಬರುತ್ತದೆ. ಕೈಯಲ್ಲಿ ಕೋಲು, ಉದ್ದನೆಯ ಜಡೆ, ನೀಲಕಂಠನ ಭಕ್ತರಾಗಿದ್ದರು ಎಂದು ಹೇಳಲಾಗುತ್ತಿದೆ ಅಷ್ಟೇ! ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಭುಯಾರ (೧೧೬೨) ಶಾಸನ “ನೆಲವಿಗೆಯ ಶಾಂತಯ್ಯ” ಸಂಬೋಧಿಸುತ್ತದೆ. ಬಸವಾಪಟ್ಟಣ (೧೨೬೧) ಶಾಸನ ನೆಲವಿಗೆಯ “ಶಿವಯೋಗಿ ಸಾಥಯ್ಯ, ಸಾತಿದೇವ” ಮರಡಿಪುರ ಶಾಸನ (೧೨೮೦) “ನೆಲವಿಗೆಯ ಸಾಂತಯ್ಯ” ಎಂದು ಉಲ್ಲೇಖಿಸುವುದರಿಂದ ಶಾಂತಯ್ಯನವರ ಹುಟ್ಟೂರು ನೆಲೋಗಿ ಆಗಿರಬಹುದು.
ಭೀಮಾನದಿ ದಂಡೆಯ ಮೇಲಿರುವ ನೆಲೋಗಿಯ ನೀಲಕಂಠ ದೇವಸ್ಥಾನ ಇದೀಗ ತೀರಾ ದುಸ್ಥಿತಿಯಲ್ಲಿದೆ. ಸುತ್ತಲೂ ಗಲೀಜು ಮಾಡಲಾಗುತ್ತಿದೆ. ಅಲ್ಲೊಂದು ಸಣ್ಣದಾದ ಗವಿಯಿದ್ದು, ಆ ಗವಿಗೆ ಇನ್ನೊಂದು ಬಾಗಿಲು ಇತ್ತು. ಅದನ್ನು ಈಗ ಮುಚ್ಚಲಾಗಿದೆ. ಇಲ್ಲಿಂದಲೇ ಊರ ಒಳಗೆ ಇರುವ ಮಲ್ಲಿಕಾರ್ಜುನ (ಹನುಮಾನ)ದೇವಾಲಯಕ್ಕೆ ಹೋಗಲು ನೆಲಮಾರ್ಗವಿದೆ ಎಂದು ಅಲ್ಲಿನ ಜನ ಹೇಳುತ್ತಾರೆ. ಆ ಊರಲ್ಲಿ ಇರುವ ಆಂಜನೇಯ ದೇವಸ್ಥಾನ ಆಗ ಮಲ್ಲಿಕಾರ್ಜುನ ದೇವಾಲಯವೇ ಆಗಿತ್ತು ಎಂಬುದಕ್ಕೆ ದೇವಾಲಯದಲ್ಲಿ ಈಗಲೂ ಒಂದೆರಡು ಕುರುಹುಗಳು ದೊರೆಯುತ್ತವೆ.
ಊರ ಹನುಮಂತ ದೇವರ ಮೂರ್ತಿಯ ಬಲಗಡೆ ಈ ಹಿಂದೆ ಅಲ್ಲೊಂದು ಗವಿಯ ಬಾಗಿಲು ಇತ್ತು. ಪಕ್ಕದಲ್ಲಿ ಇಡಲಾಗುತ್ತಿದ್ದ ವಸ್ತುಗಳು ಗವಿಯೊಳಗೆ ಜಾರುತ್ತಿದ್ದವು. ಹೀಗಾಗಿ ಆ ನೆಲಮಾರ್ಗವನ್ನು ಈಗ ಮುಚ್ಚಿಲಾಗಿದೆ ಎಂದು ಅಲ್ಲಿನ ಪೂಜರಿಗಳು ಹೇಳುತ್ತಾರೆ. ದೇವಾಲಯದ ಕುಂಬಿ ಮೇಲೆ ನಾಲ್ಕು ಕಡೆ ನಂದಿಮೂರ್ತಿಗಳಿರುವುದು, ಗರ್ಭಗೃಹದ ಎದುರಿಗಿನ ಕಾಂಪೌಂಡ್ ಒಳಗೆ ಹಳೆಯ ಈಶ್ವರ ಲಿಂಗವಿರುವುದು, ಪಾದುಕೆಗಳನ್ನು ಅರ್ಪಿಸುವ ಪದ್ಧತಿ ಇರುವುದನ್ನು ನೋಡಿದರೆ ಈ ದೇವಾಲಯ ಶೈವ ಸಂಪ್ರದಾಯದ ದೇವಾಲಯ ಆಗಿತ್ತು ಎಂಬುದು ನಮಗೆ ತಿಳಿದುಬರುತ್ತದೆ.
ಗ್ರಾಮದ ಪೂರ್ವ ದಿಕ್ಕಿನಿಂದ ೨ ಕಿ. ಮೀ. ದೂರ ಹೋದರೆ ಅಣಬಸವಣ್ಣನ ಸಮಾದಿ, ಮೂಕ ಬಸವಣ್ಣನ ಸಮಾದಿ, ಕೋಲಶಾಂತಯ್ಯನ ಸಮಾದಿ ಎಂಬ ಮೂರು ಸಣ್ಣ ಸಮಾದಿಗಳು ಕಾಣಿಸುತ್ತವೆ. ಅಲ್ಲಿಗೆ ಹೋಗುವ ಹಾದಿಯ ಕಂದರದಲ್ಲಿ ಮತ್ತೊಂದು ಸಮಾದಿ ಕಂಡುಬರುತ್ತದೆ. ಇದು ನನ್ನಯ್ಯ-ನಾದಯ್ಯಗಳ ಸಮಾದಿ ಎಂದು ಹೇಳಲಾಗುತ್ತಿದ್ದು, ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಿರವಾಳದಲ್ಲಿ ಹಾಗೂ ಇಲ್ಲಿ ಮಾತ್ರ ಈ ನನ್ನಯ್ಯ ನಾದಯ್ಯಗಳ ಗುಡಿ ಮತ್ತು ತೋರು ಗದ್ದುಗೆಗಳಿವೆ. ಭಯಾರ ಶಾಸನದ ಪ್ರಕಾರ,” ಶಾಂತಯ್ಯನವರ ಶಿಷ್ಯ ಬಸವಯ್ಯಂಗೆ ದತ್ತಿ ಬಿಟ್ಟಿರುವ ಬಗ್ಗೆ ಉಲ್ಲೇಖ ಬರುತ್ತದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದಲ್ಲಿ ಕೂಡ ಶಾಂತೇಶ್ವರ ದೇವಸ್ಥಾನವಿದೆ. ಗುಡಿಯ ಎದುರಿಗೆ ಒಂದು ಶಿಲಾ ಶಾಸನವಿದೆ. ಪಕ್ಕದಲ್ಲಿ ಈಶ್ವರ ದೇವಸ್ಥಾನವಿದೆ. ಸೊಡ್ಡಳ ಬಾಚರಸ/ ಶೆಡ್ಡಾಳೇಶ್ವರ /ಸೆಡ್ಡಾಳೇಶ್ವರ ಎಂಬ ದೇವಾಲಯ ಸೇರಿದಂತೆ ಈ ಮೂರು ದೇವಸಾಥನಗಳು ಒಂದೇ ಸಾಲಿನಲ್ಲಿವೆ. ದೇವಾಲಯಕ್ಕೆ ಬಿಟ್ಟ ಹೊಲ, ಹಿರಿಯ ಕೆರೆ, ಇಮ್ಮಡಿ ಸಾತಿದೇವನ ತಂದೆಯವರು ಕೋಲಶಾಂತಯ್ಯನವರ ಪರಮ ಶಿಷ್ಯರಾಗಿದ್ದರು. ಹೀಗಾಗಿ ಇಮ್ಮಡಿ ಸಾತಿದೇವ ಕೋಲಶಾಂತಯ್ಯನವರ ದೇವಾಲಯ ಜೀರ್ಣೋದ್ಧಾರ ಮಾಡಿದ ಎಂಬುದು ಆ ಶಾಸನದಿಂದ ತಿಳಿದು ಬರುತ್ತದೆ. ಕೋಲ ಶಾಂತಯ್ಯ ಇಲ್ಲಿ ಈಗ ದೇವರೆಂದು ಪೂಜಿಸಲ್ಪಡುತ್ತಿದ್ದಾರೆ.
ಇದೆಲ್ಲವನ್ನು ನೋಡಿದಾಗ ಶರಣ ಕೋಲ ಶಾಂತಯ್ಯನವರ ಬಗ್ಗೆ ಕೊನೆಗೊಂದು ತೀರ್ಮಾನಕ್ಕೆ ಬರಬಹುದು. ಇವರ ಹುಟ್ಟೂರು ಜೇವರ್ಗಿ ತಾಲ್ಲೂಕಿನ ನೆಲೋಗಿ. ಅಲ್ಲಿರುವ ಸಮಾದಿ ಅವರ ತೋರು ಗದ್ದುಗೆ, ಇಲ್ಲವೇ ಅವರ ಶಿಷ್ಯರ ಸಮಾದಿಗಳಾಗಿರಬಹುದು. ಕನ್ನಡದ ಪ್ರಮುಖ ವಚನಕಾರರಾಗಿದ್ದ ಕೋಲ ಶಾಂತಯ್ಯನವರು “ಪುಣ್ಯಾರಣ್ಯದಹನ ಭೀಮಲಿಂಗ ನಿರಂಗಸಂಗ” ಎಂಬ ಅಂಕಿತನಾಮದಲ್ಲಿ ಬರೆದ ೧೦೩ ವಚನಗಳು ಈಗ ಲಭ್ಯ.
ಸ್ಥಳ: ಅನುಭವ ಮಂಟಪ,
ಜಯನಗರ, ಕಲಬುರಗಿ