ವಾಡಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಸಿಡಿದೆದ್ದ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು, ಎನ್‌ಇಪಿ ಪ್ರತಿಯನ್ನು ಸಾರ್ವಜನಿಕವಾಗಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿ ಜಮಾಯಿಸಿದ್ದ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನಗರ ಸಮಿತಿ ಪದಾಧಿಕಾರಿಗಳು, ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರ ಗಳ ವಿರುದ್ಧ ಘೋಷಣೆ ಕೂಗಿದರು. ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಪ್ರದರ್ಶನ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ, ರಾಷ್ಟ್ರೀಯ ಶಿಕ್ಷಣ ನೀತಿಯು ಈಗಾಗಲೇ ಎಲ್ಲೆಡೆ ವಿಜೃಂಭಿಸುತ್ತಿರುವ ಖಾಸಗೀಕರಣವನ್ನು ಇನ್ನ? ಬೆಳೆಸುವ ನೀಲಿ ನಕ್ಷೆಯಾಗಿದೆ. ದೇಶದ ಜನಸಂಖ್ಯೆಯ ಬಹುದೊಡ್ಡ ಭಾಗವಾಗಿರುವ ಬಡವರಿಂದ ಶಿಕ್ಷಣವನ್ನು ಬಹುದೂರ ಕೊಂಡೊಯ್ಯುವ ಕುತಂತ್ರವಾಗಿದೆ. ಅಲ್ಲದೆ ಈ ಹಿಂದೆ ರಾಜೀವ್‌ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ್ದ ಎನ್‌ಪಿಇ ೧೯೮೬ರ ಮುಂದುವರೆದ ಭಾಗವಾಗಿದೆ ಎಂದು ಆರೋಪಿಸಿದರು.
ಶಿಕ್ಷಣವು ಮಾನವನ ಚಾರಿತ್ರ್ಯ ನಿರ್ಮಾಣದ ಪ್ರಕ್ರಿಯೆ ಎಂಬ ಆಶಯವನ್ನು ಸಂಪೂರ್ಣವಾಗಿ ನಾಶಗೊಳಿಸಿ ಶಿಕ್ಷಣದ ಖಾಸಗೀಕರಣ ವ್ಯಾಪಾರೀಕರಣಕ್ಕೆ ಮತ್ತು ಶಿಕ್ಷಣದಲ್ಲಿ ವಿದೇಶಿ ಬಂಡವಾಳದ ಅವಕಾಶವನ್ನು ಕಲ್ಪಿಸುವ ಈ ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳು, ಪೋ?ಕರು, ಶಿಕ್ಷಕರೂ ಒಳಗೊಂಡಂತೆ ದೇಶದ ಎಲ್ಲ ಶಿಕ್ಷಣ ಪರ ಮನಸ್ಸುಗಳು ವಿರೋಧಿಸಬೇಕು ಹಾಗೂ ಈ ನೀತಿಯ ವಿರುದ್ಧ ಪ್ರಬಲ ಹೋರಾಟಗಳನ್ನು ಕಟ್ಟಬೇಕು ಎಂದು ಕರೆ ನೀಡಿದರು.
ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ, ಅರುಣಕುಮಾರ ಹಿರೇಬಾನರ, ಗೋವಿಂದ ಯಳವಾರ, ದತ್ತಾತ್ರೇಯ ಹುಡೇಕಲ್, ಸುನೀಲ ಪೂಜಾರಿ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.