ಶರಣರ ಸ್ಮಾರಕ: ಶರಣ ಏಕಾಂತರಾಮಯ್ಯ

0
106

ಶೈವ ಪರಂಪರೆಯ ದಿಟ್ಟ ಗುರು ಏಕಾಂತರಾಮಯ್ಯನವರು ಬಸವತತ್ವ ಒಪ್ಪಿಕೊಂಡು ಪ್ರಚಾರ ಮಾಡಿರುವುದಲ್ಲದೆ ಲಿಂಗಯತ ಧರ್ಮ ಸ್ವೀಕರಿಸಿದರು. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದವರು ಎಂಬುದು ಇನ್ನೂ ಹೆಮ್ಮೆಯ ವಿಷಯ. ಇವರು ವೈದಿಕ ಧರ್ಮದ ಶೈವ ಬ್ರಾಹ್ಮಣರಿಗೆ ಸೇರಿದ ಪೋತ್ದಾರ ಮನತೆನದವರು. ಇವರ ತಂದೆ ಹೆಸರು ಪುರುಷೋತ್ತಮ. ಬಾಲ್ಯದಲ್ಲಿ ರಾಮಯ್ಯನಿಗೆ ಏಕಾಂತವಾಗಿರುವುದು ಬಹಳ ಇಷ್ಟ. ಹೀಗಾಗಿ ಏಕಾಂತ ರಾಮಯ್ಯ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದ್ದು, ಆಳಂದನಲ್ಲಿ ಇವರು ಕಟ್ಟಿಸಿದ್ದ ಸೋಮೇಶ್ವರ ದೇವಾಲಯ ಈಗ ಏಕಾಂತ ರಾಮಯ್ಯನ ದೇವಸ್ಥಾನವಾಗಿ ಪರಿಣಮಿಸಿದೆ.

ಏಕಾಂತ ರಾಮಯ್ಯ ರಚಿಸಿದ “ಎನ್ನಯ್ಯ ಚೆನ್ನರಾಮ” ಅಂಕಿತದ ಏಳು ವಚನಗಳು ಮಾತ್ರ ದೊರಕಿವೆ. ಏಕಾಂತ ರಾಮಯ್ಯನ ಚರಿತ್ರೆಯಲ್ಲಿ ಅಗ್ನಿ (ಅಗ್ಘವಣಿ) ಹೊನ್ನಯ್ಯ ಎಂಬ ಶರಣ ಜೊತೆಯಾಗಿ ಕಾಣಿಸುತ್ತಾನೆ. ಈ ಹೊನ್ನಯ್ಯ ಕಲ್ಯಾಣಕ್ಕೆ ತೆರಳಿ ಪೂಜೆಗೆ ಬೇಕಾದ ನೀರು ತರುವ ಕಾಯಕ ಮಾಡುತ್ತಿದ್ದರು. ಇವರಿಬ್ಬರು ಸೇರಿ ಲಕ್ಷ್ಮೇಶ್ವರಕ್ಕೆ ಹೋಗಿ ಆದಯ್ಯನವರಿಗೆ ಭೇಟಿಯಾಗಿರಬೇಕು. ಆಗ ಆದಯ್ಯನವರು ನಾನು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಸಾಸಲು ಕಡೆ ಹೋಗುತ್ತೇನೆ. ನೀವು ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಅಬಲೂರಿಗೆ ತೆರಳಿ ಎಂದು ಮಾರ್ಗದರ್ಶನ ಮಾಡಿರಬೇಕು ಎಂದು ನಾವು ಭಾವಿಸಿಕೊಳ್ಳಬಹುದಾಗಿದೆ. ಆದರೆ ಹರಿಹರನ ಕಾವ್ಯದಲ್ಲಿ ಏಕಾಂತ ರಾಮಯ್ಯನ ಕನಸಿನಲ್ಲಿ ಸೋಮೇಶ್ವರ ಬಂದು ಅಪ್ಪಣೆ ಕೊಡಿಸಿದ ಎಂಬ ಪ್ರಸ್ತಾಪ ಬರುತ್ತದೆ.

Contact Your\'s Advertisement; 9902492681

ಆಳಂದನಿಂದ ಲಕ್ಷ್ಮೇಶ್ವರಕ್ಕೆ ಬಂದ ಏಕಾಂತರಾಮಯ್ಯ ಅಲ್ಲಿರುವ (ಬ್ರಹ್ಮೇಶ್ವರ) ಶಿವ ದೇವಾಲಯದಲ್ಲಿಯೇ ವಾಸವಾಗಿದ್ದರು. ಇವರು ಮಲಗಿದ್ದಾಗ ಚಪ್ಪಲಿ ಹಾಕಿಕೊಂಡು ಯಾರೋ ಒಳಗೆ ಬಂದಿರುವುದು, ಇಲ್ಲವೇ ಬ್ರಹ್ಮೇಶ್ವರನೆಡೆಗೆ ಕಾಲು ಮಾಡಿ ಮಲಗಿರುವುದನ್ನು ನೋಡಿ ಇವರೇ ಜಗಳ ತೆಗೆದಿರಬೇಕು ಅಥವಾ ಶೈವ ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ತಿಳಿದ ಜೈನ ಧರ್ಮೀಯರು ಕಾಲು ಕೆದರಿ ಜಗಳ ತೆಗೆದಿರಬೇಕು. ನಮ್ಮ ಜಿನನಿಗಿಂತ ನಿಮ್ಮ ಶಿವ ಅದ್ಹೇಗೆ ಮೇಲು? ಎಂಬುದರ ಕುರಿತು ವಾದ ಆರಂಭವಾಗುತ್ತದೆ. ಶಿವ ದೊಡ್ಡವನಿದ್ದರೆ ನೀನು ಕುತ್ತಿಗೆ ಕತ್ತರಿಸಿಕೊಂಡು ಮತ್ತೆ ಅದನ್ನು ಕೂಡಿಸಿಕೊಳ್ಳಬೇಕು ಎಂಬ ಅಸಾಧ್ಯದ ಸವಾಲು ಎಸೆಯುತ್ತಾರೆ.

ಸಂಕ ಗಾವುಂಡನ ಕರಾರು ಪತ್ರಕ್ಕೆ ಏಕಾಂತ ರಾಮಯ್ಯ ಒಪ್ಪಿಕೊಂಡರು. ಗೊತ್ತು ಮಾಡಿದ ದಿನ ಏಕಾಂತರಾಮಯ್ಯ ತನ್ನ ರುಂಡ ಕತ್ತರಿಸಿಕೊಂಡರು. ಜೈನರು ಮತ್ತೆ ತಂಟೆ ತೆಗೆದು ಮತ್ತೊಂದು ದಿನ ರುಂಡ ಜೋಡಿಸಿಕೊಳ್ಳಬೇಕು ಎಂದು ತಕರಾರು ತೆಗೆದರು. ಬೇರ್ಪಟ್ಟ ರುಂಡವನ್ನು ಅವರ ಜೊತೆಯಲ್ಲಿದ್ದ ಅಗ್ಘವಣಿಯ ಹೊನ್ನಯ್ಯ ದೊಡ್ಡ ಬಂಗಾರದ ತಟ್ಟೆಯಲ್ಲಿ ತಲೆಯ ಮೇಲೆ ಒತ್ತುಕೊಂಡು ೭ ದಿನದವರೆಗೆ (ಹುಲಿಗೆರೆ, ಅಣ್ಣಿಗೆರೆ, ಕೆಂಭಾವಿ, ಸೊನ್ನಲಿಗೆ, ಕಪ್ಪಡಿ, ಹಂಪೆ, ಅಂತರವಳ್ಳಿಯ-ಮೂರುಚಾವಿದೇವರು) ಮೆರೆಸಿ ಕೊನೆಗೆ ಅಬಲೂರಿಗೆ ತಂದ. ಆ ದಿನ ಏಕಾಂತ ರಾಮಯ್ಯ ತನ್ನ ಮುಂಡಕ್ಕೆ ರುಂಡ ಜೋಡಿಸಿಕೊಂಡ. ಇದರಿಂದಾಗಿ ಜಿನಮೂರ್ತಿಗಳಿದ್ದ ಆ ದೇವಾಲಯದಲ್ಲಿ ಸೋಮೇಶ್ವರನ ಮೂರ್ತಿ ಪ್ರತಿಷ್ಠಾಪಿಸಲಾಯಿತು ಎಂಬ ಪವಾಡದ ಕಥೆಯನ್ನು ಹೇಳಲಾಗುತ್ತಿದೆ.

ಏಕಾಂತ ರಾಮಯ್ಯ ಕಟ್ಟಿಸಿದ ಸೋಮೇಶ್ವರ ದೇವಾಲಯ ಬಹಳ ಅದ್ಭುತವಾಗಿದೆ. ಒಂದು ಕಡೆಯ ಗೋಡೆಯ ಮೇಲೆ ಶಿವನನ್ನು ಒಲಿಸಿಕೊಂಡ ಶಿವಶರಣರ ಚಿತ್ರ, ಮತ್ತೊಂದು ಕಡೆ ಏಕಾಂತರಾಮಯ್ಯ ಶಿರಸ್ ಪವಾಡದ ಕಥೆಯ ಶಿಲ್ಪ ಫಲಕಗಳಿವೆ. ಮಂಗಳವೇಡೆಯ ಶಾಸನದಲ್ಲೂ ಈ ಕಥೆ ಇರುವುದನ್ನು ನಾವು ಕಾಣಬಹುದು.
ಸೋಮೇಶ್ವರ ದೇವಾಲಯದಲ್ಲಿಯೇ ಅಗ್ಘವಣಿ ಹೊನ್ನಯ್ಯ ಮತ್ತು ಏಕಾಂತರಾಮಯ್ಯನವರ ಸಮಾದಿಗಳಿವೆ. ಇದೇ ಊರಿನ ಲಿಂಬಯ್ಯನ ಮಠದ ಜಗಲಿಯ ಮೇಲೆ ಗಂಡು ಗತ್ತರಿ, ಇನ್ನಿತರ ಆಯುಧಗಳಿರುವುದನ್ನು ನಾವು ಇಂದಿಗೂ ಕಾಣಬಹುದು. ಪಾಲ್ಕುರಿಕೆ ಸೋಮನಾಥ ಮತ್ತು ಹರಿಹರ ಅಬಲೂರು (೧೦೪ ಸಾಲುಗಳು ಸುದೀರ್ಘ) ಶಿಲಾ ಶಾಸನಗಳು ನಮಗೆ ಈ ಮಾಹಿತಿಯನ್ನು ಒದಗಿಸುತ್ತವೆ.

ಏಕಾಂತ ರಾಮಯ್ಯನವರ ಈ ಕೀರ್ತಿವಾರ್ತೆ ಕೇಳಿದ ೬ನೇ ವಿಕ್ರಮಾದಿತ್ಯನ ಮಗ ೩ನೇ ಸೋಮೇಶ್ವರ (ಬಿಜ್ಜಳನ ಸೋದರಮಾವ) (೧೧೨೭-೧೧೩೮) ಅರಮನೆಗೆ ಕರೆದು ಸತ್ಕರಿಸಿ “ಅಬಲೂರು”ನ್ನು ಉಂಬಳಿಯಾಗಿ ಕೊಟ್ಟು ಆನೆಯ ಮೇಲೆ ಮೆರೆಸಿದರು, ಬಿಜ್ಜಳ ಕೂಡ ಸನ್ಮಾನ ಮಾಡಿದ, ಚಾಲೂಕ್ಯರ ಮಾಂಡಲೀಕ ಹಾನಗಲ್ಲು ಆಳುತ್ತಿದ್ದ ಸಾಮಂತ ಅರಸ ಕಾದಂಬ ಕಾಮದೇವ “ಮಲವಳ್ಳಿ” ಉಂಬಳಿಯಾಗಿ ಕೊಟ್ಟಿರುವುದನ್ನು ನೋಡಿದರೆ ಏಕಾಂತ ರಾಮಯ್ಯ ಮತ್ತು ಜೈನರ ನಡುವೆ ಸಂಘರ್ಷವಾಗಿರುವುದು ಖಚಿತವಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಕೊನೆಯಲ್ಲಿ ಕಾನಳ್ಳಿ ಕೆರೆ ಇದೆ. ಅಲ್ಲೊಂದು ಏಕಾಂತರಾಮಯ್ಯನ ಗುಡಿ ಇದೆ. ಬಿಜ್ಜಳ ಕಟ್ಟಿಸಿದ ಸೋಮೇಶ್ವರ ದೇವಾಲಯದ ಪ್ರವೇಶದ್ವಾರದ ಎಡಗಡೆ ಸರ್ವಜ್ಞನ ಕವಿಯ ಮೂರ್ತಿ ಇದೆ. ಬಲಗಡೆ ಸರ್ವಜ್ಞನ ಸಮಾದಿ (ಸ್ಮಾರಕ)ಇದೆ. ದೇವಾಲಯದ ಮಗ್ಗುಲಲ್ಲೇ ಕುಂಬಾರ ಓಣಿ ಇರುವುದನ್ನು ಕಾಣಬಹುದು.

ಏಕಾಂತರಾಮಯ್ಯನವರ ಈ ಚರಿತ್ರೆಯನ್ನು ನೋಡಿದರೆ ಅವರಿಗೆ ಈವರೆಗೆ ಬಸವಣ್ಣ ಮತ್ತು ಕಲ್ಯಾಣದ ಸಂಪರ್ಕ ಬಂದಿರಲಿಲ್ಲ. ಶರಣರ ಸಂಪರ್ಕದ ನಂತರ ತಮ್ಮ ಉಗ್ರ ಸ್ವರೂಪ ಕೈ ಬಿಟ್ಟು ಸಾತ್ವಿಕ ಶರಣರಾದರು. ಮೇಲಾಗಿ ಶರಣ ಸಾಹಿತ್ಯವನ್ನು ಪ್ರಸಾರ ಮಾಡಿದರು ಎಂಬುದು ತಿಳಿದುಬರುತ್ತದೆ.

ಸ್ಥಳ: ಅನುಭವ ಮಂಟಪ,
ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here