ಕಲಬುರಗಿ: ರೈತರು ಮಳೆ ಅವಲಂಬಿತ ಒಣ ಬೇಸಾಯ ಮಾಡಿದರೆ ಉತ್ತಮ ಇಳುವರಿ ಪಡೆಯದೆ ನಷ್ಟ ಅನುಭವಿಸಿ ತೊಂದರೆಗೊಳಗಾಗುತ್ತಾರೆ. ಕಷ್ಟಪಟ್ಟು ದುಡಿಯುವ ಪ್ರವೃತ್ತಿ ಬೆಳೆಸಿಕೊಂಡು ನೀರಾವರಿ ವ್ಯವಸಾಯ ಮಾಡಿ, ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಕಡಿಮೆ ಸಮಯದಲ್ಲಿಯೇ ಹೆಚ್ಚಿನ ಫಸಲು ಪಡೆದು ರೈತ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆಯೆಂದು ಪ್ರಗತಿಪರ ರೈತ ಮಹೇಶ ಮಠಪತಿ ಹೇಳಿದರು.
ಅವರು ನಗರದ ಸಮೀಪದ ಹಾಗರಗಾ ರಸ್ತೆಯಲ್ಲಿರುವ ತಮ್ಮ ಹೂದೋಟದಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ವು ಹಮ್ಮಿಕೊಂಡಿದ್ದ ’ರಾಷ್ಟ್ರೀಯ ತೋಟಗಾರಿಕೆ ದಿನಾಚರಣೆ’ಯ ಪ್ರಯುಕ್ತ ಡಾ.ಎಂ.ಎಚ್.ಮರಿಗೌಡ್‌ರ ಜನ್ಮದಿನಾಚರಣೆ ಹಾಗೂ ತಮಗೆ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ನಮ್ಮ ಭೂಮಿ ನಗರಕ್ಕೆ ಸಮೀಪವಿದ್ದರೂ ಕೂಡಾ ವಾಣಿಜ್ಯ ದೃಷ್ಟಿಯಿಂದ ಪ್ಲಾಟ್, ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿ ಸಾಕಷ್ಟು ಹಣ ಗಳಿಸಬಹುದಾಗಿತ್ತು. ಆದರೆ, ದೇಶದ ಬೆನ್ನೆಲಬಾದ ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ಹೆಬ್ಬಯಕೆ ನನ್ನದಾಗಿದೆ. ಈ ತೋಟದಲ್ಲಿ ಗುಲಾಬಿ, ಸುಗಂಧರಾಜ್, ಚೆಂಡುಹೂವು ಬೆಳೆಗಳಿಂದ ಸಾಕಷ್ಟು ಆದಾಯ ದೊರೆತು ನಮ್ಮ ಕುಟುಂಬ ಹಾಗೂ ಇಲ್ಲಿ ದಿನನಿತ್ಯ ಕೆಲಸ ಮಾಡುವ ಹತ್ತಾರು ಕೃಷಿ ಕಾರ್ಮಿಕರ ಕುಟುಂಬಕ್ಕೆ ಆಸರೆಯಾಗಿದ್ದು ತುಂಬಾ ತೃಪ್ತಿಯಿದೆಯೆಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಬಳಗದ ಸಂಸ್ಥಾಪಕ ಅಧ್ಯಕ್ಷ, ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ತೋಟಗಾರಿಕೆ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಇಡೀ ತಮ್ಮ ಜೀವನದುದ್ದಕ್ಕೂ ಶ್ರಮಿಸಿ, ’ರಾಷ್ಟ್ರೀಯ ತೋಟಗಾರಿಕೆ ಪಿತಾಮಹ’ರೆಂಬ ಹೆಗ್ಗಳಿಕೆಗೆ ಪಾತ್ರರಾದ ಡಾ.ಎಂ.ಎಚ್.ಮರಿಗೌಡ್‌ರ ಕೊಡುಗೆ ಅವಿಸ್ಮರಣೀಯವಾಗಿದೆ. ರೈತರು ಹನಿ ನೀರಾವರಿ, ತುಂತುರು ನೀರಾವರಿ, ಪಾಲಿ ಹೌಸ್, ನೆರಳು ಪರದೆ, ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕ, ಕೃಷಿ ಹೊಂಡ, ಸಮುದಾಯ ಕೆರೆ, ಮಿನಿ ಟ್ರಾಕ್ಟರ್ ಸೇರಿದಂತೆ ಸರ್ಕಾರದ ಅನೇಕ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಬಹುವಿಧ ತೋಟಗಾರಿಕೆ ಬೆಳೆಯಬೇಕು. ಇದರಿಂದ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ತೀರ್ವವಾಗಿ ಕಡಿಮೆಯಾಗುತ್ತವೆ. ತೋಟಗಾರಿಕೆಯಿಂದ ಸ್ವಯಂ ಅಭಿವೃದ್ಧಿಯ ಜೊತೆಗೆ ರಾಷ್ಟ್ರ ಅಭಿವೃದ್ಧಿ ಸಾಧ್ಯವಿದೆಯೆಂದರು.
ಕಾರ್ಯಕ್ರಮದಲ್ಲಿ ಶ್ರೇಷ್ಠ ರೈತ ಮಹಿಳಾ ರಾಜ್ಯ ಪ್ರಶಸ್ತಿ ಪುರಷ್ಕೃತೆ ಸುಗಲಾಬಾಯಿ ಮಠಪತಿ, ಪ್ರಗತಿಪರ ರೈತರಾದ ಸಿದ್ದಪ್ಪ ಪೂಜಾರಿ, ನಾಗಪ್ಪ ಚಿಂಚೂರೆ, ಅನಿತಾ ಗಂಟಿಮಠ, ಸಂತೋಷ ಬೀರಗೆ, ಪ್ರಮುಖರಾದ ಸುನೀಲಕುಮಾರ ವಂಟಿ, ಬಸಯ್ಯಸ್ವಾಮಿ ಹೊದಲೂರ, ನರಸಪ್ಪ ಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ಅಮರ ಜಿ.ಬಂಗರಗಿ, ಶಿವಶರಣಪ್ಪ ಹಡಪದ, ಬಸವರಾಜ ಜಾನೆ ಸೇರಿದಂತೆ ರೈತರು, ಮಠಪತಿ ಕುಟುಂಬಸ್ಥರು ಭಾಗವಹಿಸಿದ್ದರು.