ಬಸವಣ್ಣ: ಶರಣಗಣ ಸಂಘಟನೆ

0
107

ಬಸವಣ್ಣ ಕಟ್ಟಿದ ಚಳವಳಿಯಲ್ಲಿ ಅಕ್ಕ, ಅಲ್ಲಮ, ಚನ್ನಬಸವಣ್ಣ, ಮಡಿವಾಳ ಮುಂತಾದವರು ಅವರ ಬೆನ್ನಿಗೆ ನಿಂತಿದ್ದರು. ಅಂತೆಯೇ ಅವರು ಸ್ಥಾಪಿಸಿದ ಬಸವಧರ್ಮ, ಶರಣಧರ್ಮ, ಲಿಂಗಾಯತ ಧರ್ಮವು ಇಂದಿಗೂ ವಿಶಿಷ್ಟಧರ್ಮ, ಸ್ವತಂತ್ರಧರ್ಮ, ಹೊತತ್ವಜ್ಞಾನ, ವಿಶಿಷ್ಟ ಚಿಂತನೆಯಾಗಿ ಕಂಡು ಬರುತ್ತಿದೆ. ಸಂಘದ ಸಾಮಾನ್ಯ ಸದಸ್ಯರು, ಆಯ್ಕೆಯಾದ ಪ್ರತಿನಿಧಿಗಳು, ಆಡಳಿತ ಮಂಡಳಿ ಎಂಬ ಇಂದಿನ ಪ್ರಜಾಪ್ರಭುತ್ವ ಮಾದರಿಯಲ್ಲೇ ಶರಣರ ಸಂಘಟನೆ ಮಾಡಿದ್ದರು. ೮೫೦ ವಷಗಳ ಹಿಂದೆಯೇ ಈ ಪ್ರಜಾಪ್ರಭುತ್ವದ ಸ್ವರೂಪವನ್ನು ಅವರು ಜಾರಿಗೆ ತಂದಿರುವುದನ್ನು ನೋಡಿದರೆ ಅವರಲ್ಲಿ ಏನೆಂಥ ಶಕ್ತಿ ಅಡಗಿತ್ತು ಎಂಬುದು ತಿಳಿದು ಬರುತ್ತದೆ.

ಬಿಜ್ಜಳನ ಅರ್ಥಮಂತ್ರಿಯಾಗಿದ್ದ ಬಸವಣ್ಣನವರು ನಾಡಿನ ಅಭಿವೃದ್ಧಿಗೆ ಏನು ಮಾಡಬೇಕೋ ಅದೆಲ್ಲವನ್ನು ಮಾಡಿದರು. ನೆಲದೊಳಗಿನ ನಿಧಿ ತೆಗೆದುಕೊಟ್ಟರು. ತಪ್ಪು ತಪ್ಪಾಗಿದ್ದ ಲೆಕ್ಕವನ್ನು ಸರಿಪಡಿಸಿ ರಾಜ್ಯಭಂಡಾರಕ್ಕೆ ಲಾಭ ಮಾಡಿರುವುದನ್ನು ಗಮನಿಸಿದರೆ ಅವರು ಅತ್ಯಂತ ಪ್ರಾಮಾಣಿಕ ಮತ್ತು ಜವಾಬ್ದಾರಿಯಿಂದ ತಮ್ಮ ಹುದ್ದೆಯನ್ನು ನಿರ್ವಹಿಸಿದರು ಎಂಬುದು ಗೊತ್ತಾಗುತ್ತದೆ.

Contact Your\'s Advertisement; 9902492681

ಜನಸಾಮಾನ್ಯರಿಗೆ, ಸಾರ್ವಜನಿಕರಿಗೆ ಏನಾದರೂ ಸಹಾಯ-ಸಹಕಾರ ಮಾಡಬೇಕು ಎಂಬ ತುಡಿತ ಹೊಂದಿದ್ದ ಬಸವಣ್ಣನವರು ಪರುಷ ಕಟ್ಟೆಯ ಮೇಲೆ ಕುಳಿತು ಜನರ ಯೋಗಕ್ಷೇಮ ಬಯಸುವ, ಅವರ ಕುಂದು-ಕೊರತೆಗಳನ್ನು ಕೇಳುತ್ತಿದ್ದರು. ಇದು ಇವೊತ್ತಿನ ರಾಜಕಾರಣಿಗಳು ಆಗಾಗ ನಡೆಸುವ ಜನತಾದರ್ಶನ ಹೋಲುವಂತಿದೆ. ಇಂತಹ ಜನಸ್ನೇಹಿ ಪರಿಕಲ್ಪನೆಯನ್ನು ೧೨ನೇ ಶತಮಾನದಲ್ಲಿಯೇ ಜಾರಿಗೊಳಿಸಿದ ಬಸವಣ್ಣನವರು ಜನರ ಕುಂದು ಕೊರತೆಗಳಿಗೆ ಆಡಳಿತದ ಮಟ್ಟದಲ್ಲಿ ಇಲ್ಲವೇ ತಮ್ಮ ವೈಯಕ್ತಿಕ ಮಟ್ಟದಲ್ಲಿ ಸ್ಪಂದಿಸುತ್ತಿದ್ದರು. ಬಸವಣ್ಣನವರ ಈ ಕ್ರಮವನ್ನು ಈಗಿನ ರಾಜಕಾರಣಿಗಳು ಪ್ರಾಮಾಣಿಕವಾಗಿ ಅನುಸರಿಸಿದರೆ ಅವರು ಒಂದು ಐತಿಹಾಸಿಕ ಕ್ರಮ ಅನುಸರಿಸಿದಂತೆ ಆಗುತ್ತದೆ ಮಾತ್ರವಲ್ಲ ಜನಕಲ್ಯಾಣ ಕೂಡ ಆಗಬಲ್ಲದು.

ವಿವಿಧ ಕಾಯಕ ಮಾಡುವ ಜನರ ಮಧ್ಯೆ ನಾನಿರಬೇಕಾದರೆ ಅವರ ಜೊತೆಗೆ ನಿಕಟ ಸಂಪರ್ಕ ಅಗತ್ಯ ಎಂದು ಪರಿಭಾವಿಸಿದ ಬಸವಣ್ಣನವರು ತಮ್ಮ ಮನೆಯನ್ನೇ ಮಹಾಮನೆಯನ್ನಾಗಿಸಿದರು. ವೈಯಕ್ತಿಕ ಮಟ್ಟದಲ್ಲಿ ಜನರೊಂದಿಗೆ ಸಂಪರ್ಕವಿಟ್ಟುಕೊಂಡರು. ಬರುಬರುತ್ತ ಜನಸಂಪರ್ಕ ಹೆಚ್ಚಾಯಿತು. ಈ ಮಹಾಮನೆ ಶರಣ ಸಂಘಟನೆಯ ನೆಲೆವನೆ ಕೂಡ ಆಯ್ತು. “ಜಂಗಮ ಭಕ್ತಿಯ ಮಾಡಿಹನೆಂದು ಮಹಾಮನೆಯ ಕಟ್ಟಿದ?” ಎಂಬ ಮೋಳಿಗೆಯ ಮಾರಯ್ಯನವರ ವಚನವು, ಬಸವಣ್ಣನವರು ಕಟ್ಟುವ ನೆಲೆಯನ್ನು ಗುರುತಿಸುವಂತಿದೆ. “ಕರ್ತನಟ್ಟಿದ ಮರ್ತ್ಯದಲ್ಲಿ ಮಹಾಮನೆಯ ಕಟ್ಟಿದೆ ಸತ್ಯ ಶರಣರಿಗೆ ತೊತ್ತು ಭೃತ್ಯನಾಗಿ ಸವೆದು ಬದುಕಿದೆನಯ್ಯ” ಎಂದು ಬಸವಣ್ಣನವರು ಹೆಮ್ಮೆಯಿಂದ ಹೇಳಿರುವುದನ್ನು ನೋಡಿದರೆ ಮಹಾಮನೆಯ ಸ್ವರೂಪ ನಮ್ಮ ಕಣ್ಮುಂದೆ ಬಂದು ನಿಲ್ಲುತ್ತದೆ. ಮಹಾಮನೆ ಸ್ಥಾಪನೆಯ ಉದ್ದೇಶ ಏನಿತ್ತು? ಅದರಿಂದುಂಟಾದ ಪರಿಣಾಮವನ್ನು ತಿಳಿಸಿಕೊಡುತ್ತದೆ.

ಬಸವಣ್ಣನವರು ಹೇಳುವ ಭಕ್ತಿ ದೇವರನ್ನು ಪ್ರಾರ್ಥಿಸಿ ದೈವವನ್ನು ಒಲಿಸಿಕೊಳ್ಳುವ ಭಕ್ತಿಯಲ್ಲ. ಬೇಡರ ಕಣ್ಣಪ್ಪನಂತೆ, ಶಿರಿಯಾಳ ಚಂಗಳೆರ ಭಕ್ತಿಯಂತೆ ಶಿವನಿಗೆ ಒಂದು ಕೊಟ್ಟು ಇನ್ನೊಂದು ಪಡೆಯುವ ಸೀಮಿತ ಉದ್ದೇಶ ಕೂಡ ಹೊಂದಿಲ್ಲ. “ಬಾಣ ಮಯೂರನಂತೆ ಬಣ್ಣಿಸಬಲ್ಲನೆ?.. ಎನಗೆ ಕೊಟ್ಟಡೆ ಧರ್ಮವೆನಿಸಿತ್ತು ಕೂಡಲಸಂಗಮದೇವ” ಬೇಡುವುದು, ನೀಡುವುದು ಭಕ್ತಿಯಲ್ಲ. ಭಕ್ತಿ ಇನ್ನೊಬ್ಬರಿಗೆ ಕೊಡುವ ಶಕ್ತಿಯಾಗಿ ಬೆಳೆಯಬೇಕು ಎಂಬುದು ಬಸವಣ್ಣನವರ ವಿಚಾರ. ಬಸವತತ್ವಕ್ಕೆ ಭಕ್ತಿಯೇ ಮೂಲ ನೆಲೆಗಟ್ಟು “ಮಾತಿನ ಮಾತಿನಲ್ಲಪ್ಪುದೆ ಭಕ್ತಿ?, ಮಾಡಿ ತನು ಸವೆಯದನ್ನಕ್ಕ, ಮನ ಸವೆಯದನ್ನಕ್ಕ, ಧನ ಸವೆಯದನ್ನಕ್ಕ ಅಪ್ಪುದೆ ಭಕ್ತಿ? ಕೂಡಸಂಗಮದೇವನೆಲುದೊರೆ ಸರಸವಾಡುವನು ಸೈರಿಸದನ್ನಕ್ಕ ಅಪ್ಪುದೆ”ಭಕ್ತಿ? ಎಂದು ಪ್ರಶ್ನಿಸುವ ಮೂಲಕ ಸಂಘಟನೆಗೆ ಭಕ್ತಿಯ ಬುನಾದಿ ಹಾಕಿದರು ಬಸವಣ್ಣನವರು.

“ಅರ್ಥ, ಪ್ರಾಣ, ಅಭಿಮಾನದಲ್ಲಿ ವಂಚನೆಯಿಲ್ಲದಿಹುದೇ ಭಕ್ತಿ. ನುಡಿದಂತೆ ನಡೆಯಲು ಬಾರದಯ್ಯ ಕೂಡಲಸಂಗನ ಶರಣರ ಭಕ್ತಿ, ಬಾಳಬಾಯಧಾರೆ, ಮಾಡುವ ಭಕ್ತನ ಕಾಯಬಾಳೆಯ ಕಂಬಂದಂತಿರಬೇಕು” ಎಂದು ಹೇಳುತ್ತ ಭಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತ ಹೋಗುತ್ತಾರೆ. ನದಿಯ ತೆರನ ಹೋಲಬಲ್ಲಡೆ ಭಕ್ತಿ ಕೂಡೆ ಸಯಧನವ ನೀಡಬಲ್ಲಡೆ ಭಕ್ತಿ (೫೨೪), ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು/ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ. ಭಕ್ತಿ=ಸಮಾಜಸೇವೆ, ಸಜ್ಜನರಸೇವೆ. ಇದಕ್ಕಾಗಿಯೇ ನಾನು ಮಹಾಮನೆ ಕಟ್ಟಿರುವೆ ಎಂದು ಬಸವಣ್ಣನವರು ಹೇಳಿದ್ದಾರೆ.

ಮರ್ತ್ಯಲೋಕದ ಮಹಾಮನೆಯ ಹಾಳಾಗಿ ಹೋಗಬಾರದೆಂಬ, ಕರ್ತನಟ್ಟಿದನಯ್ಯ ಒಬ್ಬ ಶರಣರ, ಆ ಶರಣ ಬಂದು ಕಲ್ಯಾಣವೆಂಬ, ಶಿವಪುರವ, ಕೈಲಾಸವ ಮಾಡಿ… ಎನ್ನುವ ಅಲ್ಲಮನ ಈ ವಚನ ಬಸವಣ್ಣ ಮಾನವ ಲೋಕದ ಕಲ್ಯಾಣದ ಎಷ್ಟು ದಿವ್ಯ,ಭವ್ಯವಾಗಿದೆ ಎಂಬುದನ್ನು ತಿಳಿಸುತ್ತದೆ. ರುದ್ರಗಣ, ಪ್ರಮಥಗಣ ಹಾಗೂವುಗಳಿಮದಲೇ ಆಯ್ಕೆಮಾಡಿಕೊಂಡ ಅಮರಗಣಗಳೆಂಬ ಮೂರು ಗುಂಪು ಮಾಡಿ ಸಂಘಟನೆ ಮಾಡಿದರು. ಜಗವರಿಯಲು ಮರ್ತ್ಯಲೋಕ ಮತ್ತು ಶಿವಲೋಕಕ್ಕೆ ನಿಚ್ಚಣಿಕೆಯಾದರು. ಬಸವಣ್ಣನವರ ದಾಸೋಹದ ಘನ ಎಂಥದ್ದು ಎಂಬುದನ್ನು ಹೇಳುತ್ತಾರೆ.

ಕಾಯಕ ಜೀವಿಗಳೆಲ್ಲರನ್ನು ಬಸವಣ್ಣನವರು ಒಂದುಗೂಡಿಸಿದರು. ಅಂಗದ ಮೇಲೆ ಲಿಂಗವುಳ್ಳವರೆಲ್ಲರೂ ಸಂಗಮನಾಥನಿಗೆ ಸಮಾನ. ಜಂಗಮ ಮುಖದಲ್ಲಿ ಲಿಂಗವನ್ನು ಕಂಡು ದಾಸೋಹವೆಂಬ ಮಮತೆಯನ್ನು ಕೊಟ್ಟೆನು ಎಂದು ಹೇಳುವ ಬಸವಣ್ಣನವರು ಸರ್ವ ಸಮಾನತೆಯ ಲಿಂಗತತ್ವವನ್ನು ವಿವರಿಸುತ್ತಾರೆ. ಬಸವಣ್ಣನವರ ನಾಯಕತ್ವದಲ್ಲಿ ನಡೆದ ಈ ಚಳವಳಿಯಿಂದಾಗಿ ಸಮ ಸಮಾಜ, ಹೊಸ ಜ್ಞಾನ, ಹೊಸ ತತ್ವಗಳು ಒಡಮೂಡಿದವು.

ಸ್ಥಳ: ಅನುಭವ ಮಂಟಪ,
ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here