ಶಹಾಪುರ: ಬಸವ ತತ್ವವನ್ನು ಜನ ಮಾನಸದಲ್ಲಿ ಬಿತ್ತಲು ಸದಾ ಕಾಲ ಸನ್ನದ್ಧವಾಗಿರುವ ಶರಣ ಸಾಹಿತಿ, ಪತ್ರಕರ್ತ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ ಕಾನೂನು ದಬ್ಬಾಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಶಹಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದವು.
ವಿಶ್ವಾರಾಧ್ಯ ಸತ್ಯಂಪೇಟೆ ಇಡೀ ನಾಡೆ ಬಲ್ಲಂತೆ ಒಬ್ಬ ದಿಟ್ಟ ವೈಚಾರಿಕ ಪತ್ರಕರ್ತ ಶರಣ ಸಾಹಿತಿ. ಇದ್ದದ್ದನ್ನು ಇದ್ದಂತೆ ಹೇಳಿ ಯುವಕರಲ್ಲಿ ವಿಜ್ಞಾನದ ದೀವಿಗೆ ಹಿಡಿದು ನಡೆದಿರುವ ಯುವ ಹೋರಾಟಗಾರ.
ದಾವಣಗೆರೆ ಜಿಲ್ಲೆಯ ರಾಂಪುರ ಮಠದ ಸ್ವಾಮಿ ಶ್ರೀ ವಿಶ್ವೇಶ್ವರ ಸ್ವಾಮಿ ಎಂಬುವವರ ಕುರಿತು ಆಡಿದ ಮಾತು, ಬರಹ ಚಿಂತನಾರ್ಹ. ವೈಜ್ಞಾನಿಕ ವೈಚಾರಿಕ ನಿಲುವಿನಿಂದ ನೋಡದೆ ದ್ವೇಷಪೂರಿತ ಭಾವನೆಯಿಂದ ನೋಡುವುದು ಸರಿಯಲ್ಲ.
ಒಬ್ಬಮಠಾಧೀಶ ಲಾಂಛನ ಧರಿಸಿ ಅದಕ್ಕೆ ತಕ್ಕುದಾದ ನಡೆಗಳು ಇರಬೇಕು. ಇದನ್ನೆಲ್ಲ ಮರೆತು ಬರೀ ಗಿಮಿಕ್ ಗಳಲ್ಲಿಯೇ ಭಕ್ತರನ್ನು ಕತ್ತಲಲ್ಲಿ ಇಟ್ಟಿರುವುದು ಖಂಡನಾರ್ಹ. ಇಷ್ಟಲಿಂಗ ಪೂಜೆಯ ವಿಧಾನ ಮರೆತು ನಾಟಕೀಯ ಅಂಶಗಳಿಂದ ಪೂಜೆ ನಿಜಕ್ಕೂ ಬಸವ ಭಕ್ತರಿಗೆ ನೋವುಂಟು ಮಾಡುವಂಥದ್ದು.
ಇಷ್ಟಕ್ಕೂ ಸತ್ಯಂಪೇಟೆ ವಿಷಾದ ವ್ಯಕ್ತ ಪಡಿಸಿರುವಾಗಲೂ ಕಾಲು ಕೆದರಿ ಅವರ ಮೇಲೆ ಕೇಸ್ ದಾಖಲಿಸಿ, ಮಾನಸಿಕವಾಗಿ ಅವರನ್ನು ಕುಗ್ಗಿಸಲು ಹೊರಟಿರುವುದುನ್ನು ಖಂಡನೀಯವಾಗಿದ್ದು, ವಿಶ್ವಾರಾಧ್ಯ ರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಜಾಪ್ರಭುತ್ವದ ಅಣಕ. ಇದನ್ನು ಇಲ್ಲಿಗೆ ನಿಲ್ಲಿಸದೆ ಸರಕಾರ ಸತ್ಯಂಪೇಟೆಯವರಿಗೆ ಕಿರುಕುಳ ನೀಡಿದರೆ ನಾಡಿನ ತುಂಬಾ ಇರುವ ಬಸವ ಅಭಿಮಾನಿಗಳು, ಪ್ರಗತಿ ಪರರು ಬೀದಿಗೆ ಇಳಿದು ಹೋರಾಟ ಮಾಡಬೇಕಾಗಿತ್ತದೆ ಎಂದು ಸಂಘಟನೆಯ ಪ್ರಮುಖರು ಸದಸ್ಯರು ಮನವಿಯಲ್ಲಿ ವ್ಯಕ್ತ ಪಡಿಸಿದರು.
ತಾಲೂಕು ಅಧ್ಯಕ್ಷರಾದ ಸಿದ್ದಲಿಂಗಪ್ಪ ಅನೇಗುಂದಿ, ಕಾರ್ಯದರ್ಶಿ ಬಸವರಾಜ ಸಿಣ್ಣೂರ, ಪಂಚಾಕ್ಷರ್ಯ್ಯ ಹಿರೇಮಠ, ಬಸವರಾಜ ಹಿರೇಮಠ ಸೇರಿದಂತೆ ಮುಂತಾದವರು ಇದ್ದರು.