ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಸಕ್ರಿಯ ಪ್ರಕರಣಗಳು ಹೆಚ್ಚಿರುವ 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ವೀಡಿಯೋ ಸಂವಾದ ನಡೆಸಿದರು.
ಪ್ರಧಾನಮಂತ್ರಿಗಳು ಮಾತನಾಡಿ, ಕೋವಿಡ್ ಹೆಚ್ಚಾಗಿರುವ ರಾಜ್ಯಗಳಲ್ಲಿ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಈ ಸಭೆಯನ್ನು ಕರೆಯಲಾಯಿತು. ಪ್ರತಿ ರಾಜ್ಯವೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ತಂಡಸ್ಪೂರ್ತಿಯೊಂದಿಗೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಒಟ್ಟಾಗಿ ಈ 10 ರಾಜ್ಯಗಳಲ್ಲಿ ಕೊರೋನಾವನ್ನು ಸಮರ್ಥವಾಗಿ ಎದುರಿಸಿದರೆ, ದೇಶವೇ ಈ ಹೋರಾಟದಲ್ಲಿ ಗೆದ್ದಂತೆ. ಸಾಂಕ್ರಾಮಿಕವನ್ನು ಗುರುತಿಸಿ, ತಡೆಗಟ್ಟುವಲ್ಲಿ ಉತ್ತಮ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ಸಕ್ರಿಯ ಪ್ರಕರಣಗಳ ಸಂಖ್ಯೆ ಹಾಗೂ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಹಾಗೂ ಜನರಲ್ಲಿ ಭೀತಿಯೂ ಕಡಿಮೆ ಮಾಡಿದೆ ಎಂದರು.
ಮರಣ ಪ್ರಮಾಣವನ್ನು ಶೇ. ಒಂದಕ್ಕಿಂತ ಕಡಿಮೆ ಮಾಡಲು ನಾವು ಶ್ರಮಿಸಬೇಕಿದೆ. ಸಂಪರ್ಕ ಪತ್ತೆ, ಪರೀಕ್ಷೆ ಹಾಗೂ
ಸರ್ವೇಕ್ಷಣಾ ವ್ಯವಸ್ಥೆ ಕರೋನಾ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಪ್ರಾರಂಭದಲ್ಲಿಯೇ ರೋಗ ಪತ್ತೆ ಮಾಡಿದಲ್ಲಿ ಸಾಂಕ್ರಾಮಿಕವನ್ನು ತಡೆಗಟ್ಟಲು ಸಾಧ್ಯವಿದೆ. 72 ಗಂಟೆಗಳೊಳಗಾಗಿ ಸೋಂಕಿತರನ್ನು ಹಾಗೂ ಅವರ ಸಂಪರ್ಕಿತರನ್ನು ಪತ್ತೆ ಮಾಡುವ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು.
ಸಭೆಯ ಮುಖ್ಯಾಂಶಗಳು: ರಾಜ್ಯದಲ್ಲಿ ಸರ್ವೇಕ್ಷಣೆ, ಪತ್ತೆ ಹಾಗೂ ರೋಗ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲು ಬೂತ್ ಮಟ್ಟದ ತಂಡಗಳನ್ನು ರಚಿಸಲಾಗಿದೆ. ಎಂದು ವಿವರಿಸಿದರು. ಪ್ರತಿದಿನ ಕೋವಿಡ್ ಪರೀಕ್ಷೆಯನ್ನು 20,000 ದಿಂದ 50 ಸಾವಿಕ್ಕೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು 75 ಸಾವಿರಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ರಾಜ್ಯದಲ್ಲಿ ಐ.ಸಿ.ಎಂ.ಆರ್ ಅನುಮೋದಿತ 100 ಪ್ರಯೋಗಾಲಯಗಳಿದ್ದು, 1300 ಮೊಬೈಲ್ ಪರೀಕ್ಷಾ ತಂಡಗಳನ್ನು ನಿರ್ಬಂಧಿತ ಸ್ಥಳಗಳು ಹಾಗೂ ಬಫರ್ ವಲಯಗಳಲ್ಲಿ ನಿಯೋಜಿಸಲಾಗಿದೆ.
ರೋಗ ಲಕ್ಷಣಗಳಿಲ್ಲದ ಪ್ರಕರಣಗಳನ್ನು ಗೃಹಗಳಲ್ಲಿ ನಿಬಂಧಿಸಲಾಗಿದ್ದು, ಅವರನ್ನು ಟೆಲಿ ಮಾನಿಟರಿಂಗ್ ಮೂಲಕ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಹಾಗೂ ಆರೋಗ್ಯ ತಂಡಗಳೂ ಭೇಟಿ ನೀಡುತ್ತಿದ್ದಾರೆ.
43 ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ 17 ಸರ್ಕಾರಿ ಕಾಲೇಜುಗಳು ಸೇರಿದಂತೆ ಶೇ 50 ರಷ್ಟು ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ಚಿಕಿತ್ಸೆಗೆ ಮೀಸಲಿಡಲಾಗಿದೆ ಕರ್ನಾಟಕ ಸರ್ಕಾರ ಎಲ್ಲ ಸೋಂಕಿತರ ಪರೀಕ್ಷ್ಷೆ ಹಾಗೂ ಚಿಕಿತ್ಸೆಯ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳಿಂದ ಶಿಫಾರಸ್ಸಾಗಿ ಬಂದ
ಪ್ರಕರಣಗಳನ್ನೂ ಒಳಗೊಂಡಂತೆ ಭರಿಸುತ್ತಿದೆ. ಈಗಾಗಲೇ ಅಸ್ತಿತ್ವದಲ್ಲಿರುವ 1,04,000 ಹಾಸಿಗೆಗಳ ಜೊತೆಗೆ 10,100 ಹಾಸಿಗೆಗಳ ಸಾಮಥ್ರ್ಯವನ್ನು ಹೊಂದಿದ ಕೋವಿಡ್ ಕೇರ್ ಸೆಂಟರ್ ಅನ್ನು ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುವ 5500 ಆಕ್ಷಿಜನ್ ಬೆಡ್ಗಳೊಂದಿಗೆ 1600 ಬೆಡ್ಗಳನ್ನು ಸೇರ್ಪಡೆಗೊಳಿಸಲಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ 5000 ಬೆಡ್ಗಳು ಲಭ್ಯವಾಗಲಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಒಟ್ಟು 20 ಸಾವಿರ ಆಕ್ಷಿಜನೇಟೆಡ್ ಬೆಡ್ಗಳು ಉಪಯೋಗಕ್ಕೆ ಲಭ್ಯವಾಗಲಿದೆ. ರಾಜ್ಯದಲ್ಲಿ ಆಂಬ್ಯುಲೆನ್ಸ್ಗಳ ಸಂಖ್ಯೆಯನ್ನು 800 ರಿಂದ 2000 ಕ್ಕೆ ಹೆಚ್ಚಿಸಲಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ
ನಿಯಮವನ್ನು ಉಲ್ಲಂಘಿಸಿದ 2,05,029 ಪ್ರಕರಣಗಳನ್ನು ದಾಖಲಿಸಿದ್ದು 6.65 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ.
ಗೃಹ ನಿರ್ಬಂಧ ಉಲ್ಲಂಘಿಸಿದ 3246 ವ್ಯಕ್ತಿಗಳನ್ನು ಮನೆಯಿಂದ ಸಾಂಸ್ಥಿಕ ಕ್ವಾರಂಟೈನ್ಗೆ ಸ್ಥಳಾಂತರಿಸಲಾಗಿದೆ. 5821 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಮರಣ ಪ್ರಮಾಣವನ್ನು ಕಡಿತಗೊಳಿಸುವುದು ನಮ್ಮ ಆದ್ಯತೆಯಾಗಿದ್ದು, ಈ ಸಂಬಂಧ ಪರೀಕ್ಷಾ ಪ್ರಮಾಣದಲ್ಲಿ ಹೆಚ್ಚಳ, ಸ್ಯಾಂಪಲ್ ಸಂಗ್ರಹ ಮತ್ತು ತ್ವರಿತ ಫಲಿತಾಂಶಗಳನ್ನು ಒದಗಿಸುವುದು ಹಾಗೂ ಮನೆಯಿಂದ ಆಸ್ಪತ್ರೆಗೆ ಸ್ಥಳಾಂತರವಾಗುವ ಸಮಯದಲ್ಲಿ ಕಡಿತ – ಇವೆಲ್ಲ ಕ್ರಮಗಳಿಂದ ಮರಣ ಪ್ರಮಾಣವನ್ನು ಆಗಸ್ಟ್ ವೇಳೆಗೆ 1.8 ಗೆ ಇಳಿಸಲಾಗಿದೆ.
ಒಟ್ಟು 182354 ಪ್ರಕರಣಗಳ ಪೈಕಿ 79908 ಸಕ್ರಿಯ ಪ್ರಕರಣಗಳಿವೆ. ರಾಜ್ಯವು ಪ್ರಸ್ತುತ 1.14 ಲಕ್ಷ ಕೋವಿಡ್ ಕೇರ್ ಕೇಂದ್ರಗಳ ಬೆಡ್ಗಳು, 20,000 ಸಾಮಾನ್ಯ ಬೆಡ್ಗಳು , 8000 ಆಕ್ಷಿಜನ್ ವ್ಯವಸ್ಥೆಯುಳ್ಳ ಬೆಡ್ಗಳು ಹಾಗೂ 3000 ಐ.ಸಿ.ಯು ಬೆಡ್ ಮತ್ತು 1500 ವೆಂಟಿಲೇಟರ್ ಉಳ್ಳ ಐ.ಸಿ.ಯು ಬೆಡ್ಗಳನ್ನು ಹೊಂದಿದ್ದು ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧವಾಗಿದೆ. ಕೇಂದ್ರದಿಂದ 2025 ವೆಂಟಿಲೇಟರ್ಗಳನ್ನು ಒದಗಿಸಲಾಗಿದೆ. ಸಮಗ್ರ ಡಾಟಾ ನಿರ್ವಹಣೆಗೆ ಬಿ.ಬಿ.ಎಂ.ಪಿ ಆರೋಗ್ಯ ಕೇಂದ್ರಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳು ಸಂಯೋಜಿತವಾಗಿದೆ.
ರಾಜ್ಯದ ಬೇಡಿಕೆಗಳು: ಕೋವಿಡ್ ಸಂಬಂಧಿತ ಚಟುವಟಿಕೆಗಳಿಗೆ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅಂತಿಮ ವರ್ಷದ ಪೂರ್ವದಲ್ಲಿರುವ ಪ್ಯಾರಾ ಮೆಡಿಕಲ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಪಾಠಗಳನ್ನು ಪ್ರಾರಂಭಿಸಲು ಅನುಮತಿ ಕೋರಲಾಯಿತು.
ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ವರ್ಷ 10,000 ಪದವಿ ಮತ್ತು 2,000 ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಲು ಮನವಿ ಮಾಡಲಾಯಿತು. ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೋರ್ಸು ಮುಗಿದ ನಂತರ ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸಲು ಮಾರ್ಗಸೂಚಿಗಳನ್ನು ಹೊರಡಿಸಲು ಮನವಿ ಮಾಡಲಾಯಿತು. ಲಿಕ್ವಿಡ್ ಆಕ್ಷಿಜನ್ ಘಟಕಗಳನ್ನು ಲಭ್ಯತೆ ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಆರೋಗ್ಯ ಕುರಿತ ಸಂಶೋಧನೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಮನವಿ ಮಾಡಲಾಯಿತು.
ಉಪಮುಖ್ಯಮಂತ್ರಿ ಡಾ. ಅಶ್ವಥ್ನಾರಾಯಣ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ.ಸುಧಾಕರ್ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು, ಬಿಹಾರ್, ಗುಜರಾತ್, ಪಂಜಾಬ್, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.