1
113

ಬಸವಣ್ಣನವರನ್ನು ಬಹುತೇಕ ಜನ ಬರಹಗಾರರು ಭಕ್ತಿಯ ಹರಕಾರರನ್ನಾಗಿ ಮಾಡಿ ಚಿತ್ರಿಸುತ್ತಾರೆ. ಹಿಂದಿನ ಹಲವಾರು ಪುರಾಣಗಳು, ಕಾವ್ಯಗಳು, ರಗಳೆಗಳು ಆ ಭಕ್ತಿಯ ಬರದಲ್ಲಿಯೆ ಬಂದಿವೆ. ಹಲವಾರು ವರ್ಷಗಳವರೆಗೆ ಬಸವಣ್ಣನವರು ಕೇವಲ ಪೂಜೆಗೆ, ಮಂತ್ರಕ್ಕೆ ಮಾತ್ರ ಸೀಮಿತವಾಗಿದ್ದರು. ಬಸವಣ್ಣನ ಭಕ್ತಿಯ ಭಕ್ತಿಯೇ ವಿಭಿನ್ನ ಎಂಬುದು ಅವರ ವಚನಗಳ ಮೂಲಕ ತೆರೆದುಕೊಳ್ಳುತ್ತ ಹೋದಂತೆ ಬಸವಣ್ಣನವರ ಬಗೆಗಿನ ಕ್ಯಾನವಾಸ ವಿಸ್ತರಿಸುತ್ತ ಹೋಯಿತು. ಬಸವ ಕೇವಲ ಭಕ್ತಿಭಂಡಾರಿ ಮಾತ್ರವಲ್ಲ ಆತ ಚಳುವಳಿಗಾರ. ಇಂದಿನ ಅರ್ಥದಲ್ಲಿ ಹೇಳುವುದಾದರೆ ಆತ ಅಂದಿನ ರಾಜಸತ್ತೆ ಹಾಗೂ ಪುರೋಹಿಶಾಹಿ ಜನಗಳ ಅಕ್ಟೋಪಸ್ ಹಿಡಿತದ ವಿರುದ್ಧ ಧ್ವನಿ ಎತ್ತಿದ ಮೊದಲ ಬಂಡಾಯಗಾರ.

ಯಾವುದೆ ಚಳುವಳಿಯ ನಾಯಕ ಮೊಟ್ಟ ಮೊದಲು ತನ್ನ ಸುತ್ತ ಮುತ್ತಲಿನ ಜನಗಳನ್ನು ವಿಚಾರಗಳಿಂದ ಹುರಿಗೊಳಿಸಬೇಕು. ಅಂತಃಕರಣಪೂರ್ವಕವಾಗಿ ಅವರೆಲ್ಲರೊಳಗೆ ಒಂದಾಗಬೇಕು. ಒಳ ಹೊರಗು ಒಂದಾಗಿ ಎಲ್ಲರೊಂದಿಗೆ ಬೆರೆತಿರಬೇಕು. ಆ ನಾಯಕನ ಅಂತರಂಗ ಹಾಗೂ ಬಹಿರಂಗಗಳೆಲ್ಲವೂ ಅವರ ಸುತ್ತ ಮುತ್ತಿನ ಎಲ್ಲರಿಗೂ ಚಿರಪರಿಚಿತವಾಗಿರಬೇಕು. ಎಲ್ಲರೂ ಬಲ್ಲಂತೆ ಬಸವಣ್ಣನವರು ಕಟ್ಟಿದ ಮಹಾಮನೆ ಎಲ್ಲರಿಗೂ ಮುಕ್ತವಾಗಿತ್ತು. ಅಂದಿನ ಶರಣರೆಲ್ಲರೂ ಆ ಮಹಾಮನೆಯ ಸದಸ್ಯರಂತೆ ಇದ್ದರು. ಬಸವಣ್ಣನವರು ತಮ್ಮ ಅಂತಃರಂಗ ಹಾಗೂ ಬಹಿರಂಗವನ್ನು ಮುಚ್ಚು ಮರೆಯಿಲ್ಲದೆ ಎಲ್ಲರೆದುರು ಬಿಚ್ಚಿ ಇಟ್ಟಿದ್ದರು.

Contact Your\'s Advertisement; 9902492681

ರಾಜಶಾಹಿ ವ್ಯವಸ್ಥೆಯ ಭಾಗವಾಗಿಯೆ ಇದ್ದ ಬಸವಣ್ಣನವರು ತಳ ಸಮೂಹದವರೊಂದಿಗೆ ಕೇವಲ ಗುರುತಿಸಿಕೊಳ್ಳದೆ ಅವರೊಳಗೆ ಒಬ್ಬರಾಗಿ ಹೋದದ್ದು ಅವರಿಗೆ ಆನೆ ಬಲವನ್ನು ತಂದುಕೊಟ್ಟಿತ್ತು. ಎನ್ನಂತರಂಗವೆ ಬಸವಣ್ಣನಯ್ಯ ಎಂದು ಗಾವುದಿ ಮಾಚಯ್ಯ ಹಾಡಬೇಕಾದರೆ ಬಸವ ತನ್ನನ್ನು ತಾನು ಶರಣರೊಂದಿಗೆ ಎಷ್ಟು ತೆರೆದುಕೊಂಡಿದ್ದರೆಂಬುದು ಗೊತ್ತಾಗುತ್ತದೆ.

ಸತ್ತವರ ಶವ ಮಾತ್ರ ಹೊಳೆಯಲ್ಲಿ ತೇಲಿ ಹೋಗುತ್ತವೆ. ಆದರೆ ಬದುಕಿದ ಜೀವಿಗಳು ಎಂದೂ ತೇಲಿ ನೀರಿನ ಗುಂಟ ಹರಿದು ಹೋಗುವುದಿಲ್ಲ. ಅವು ರನ್ನು ಈಜಿ ತಮ್ಮ ಅಸ್ತಿತ್ವವನ್ನು ತೋರಿಸುತ್ತವೆ. ಯಾರು ಜೀವಂತವಾಗಿರುವರೋ ಅವರು ಮಾತ್ರ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಕಷ್ಟ- ನೋವು ನಲಿವುಗಳಿಗೆ ಸ್ಪಂದಿಸುವದೆ ಮನುಷ್ಯನ ಲಕ್ಷ್ಯಣ. ಕಣ್ಣ ಮುಂದೆಯೆ ಅನ್ಯಾಯ ಅಸತ್ಯ ಅತ್ಯಾಚಾರ ತಾಡಂವ ನೃತ್ಯ ಮಾಡುತ್ತಿದ್ದರು. ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಷರಾ ಬರೆದಂತೆ ಕುಳಿತು ಬಿಡುವವನು ಎಂದೂ ಮನುಷ್ಯನಾಗಿರಲಾರ.

ಜೀವಚ್ಛವಗಳಾಗಿದ್ದ ಜನ ಸಮುದಾಯವನ್ನು ಹೋರಾಟಗಳಿಗೆ ಅಣಿಗೊಳಿಸುವ ಕಷ್ಟ ಅಂತಿಥದ್ದಲ್ಲ. ಕರ್ಮ ಸಿದ್ಧಾಂತಗಳನ್ನು ನಂಬಿ ಬದುಕುತ್ತಿದ್ದ, ವರ್ಣಾಶ್ರಮ ಧರ್ಮ ಉಂಟು ಮಾಡಿದ್ದ ವಿಪ್ಲವಗಳಿಗೆ ಒಳಗಾಗಿದ್ದ ಜನ ತಾವು ಮನುಷ್ಯರು ಎಂಬುದನ್ನೆ ಮರೆತು ಬಿಟ್ಟಿದ್ದರು. ಆ ಜನಗಳಿಗೆ ಆತ್ಮವಿಶ್ವಾಸ ತುಂಬಿ, ನಮ್ಮ ಬದುಕು ಕರ್ಮ ಸಿದ್ಧಾಂತದ ಫಲವಲ್ಲ. ನಮ್ಮ ಜೀವನವನ್ನು ಜೀವಿಸುವ ಹಕ್ಕು ನಮಗಿದೆ. ಕೇವಲ ಪುರೋಹಿತ ಹಾಗೂ ರಾಜಶಾಹಿಗಳಿಗೆ ಮಾತ್ರವೆ ಜೀವನವಲ್ಲ. ನಮ್ಮಂತೆ ಅವರದು, ಅವರಂತೆ ನಮ್ಮದು ಬದುಕು ಎಂದು ಬಸವ ಮೊಟ್ಟ ಮೊದಲಿಗೆ ಅವರಲ್ಲಿ ಬೆಳಕು ತುಂಬಿದ. ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೋ ಎನ್ನುತ್ತ ಅವರೊಳಗೆ ಜ್ಞಾನದ ದೀಪ ಹೊತ್ತಿಸಿದರು.

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡ್ಯಾ !
ವೇದವನೋದಿದವರ ಮುಂದೆ ಅಳು, ಕಂಡ್ಯಾ !
ಶಾಸ್ತ್ರವ ಕೇಳಿದವರ ಮುಂದೆ ಅಳು , ಕಂಡ್ಯಾ !
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.

ವೇದ ಶಾಸ್ತ್ರಗಳ ಆಧಾರವೆಂದು ಹೇಳಿ ಹೋತಿನ ಹಿಡಿ ತಂದು ಬಲಿ ಕೊಡುವುದನ್ನು ನೋಡಿದ ಬಸವಣ್ಣನವರ ಆ ಹೋತಿಗೆ ಹೇಳುತ್ತಾರೆ. ಎಲೆ ಹೋತೇ ಅಳು. ನಿನ್ನ ಅಳುವು ಸಹ ಪ್ರತಿಭಟನೆಯೆ. ಅಳದೆ ಸುಮ್ಮನೆ ಇರಬೇಡ. ನೀನು ಈಗ ಅತ್ತಿಯಾದರೆ ಅದು ಆ ದೇವನಿಗೂ ತಲುಪುತ್ತದೆ. ನಿನ್ನ ಅಳುವನ್ನು ಕಡೆಗಣಿಸಿ ಅವರು ಕೊಂದರೆ ಅವರಿಗೆ ಆ ಫಲವನ್ನು ಆ ಕೂಡಲಸಂಗಮದೇವಾ ಕೊಟ್ಟೆ ಕೊಡುತ್ತಾನೆ ಎಂಬ ಭರವಸೆಯನ್ನು ನೀಡುತ್ತಾರೆ. ಹೀಗೆ ವೇದ ಶಾಸ್ತ್ರ ಆಗಮ ಪುರಾಣಗಳ ಮೂಲಕ ಜನ ಸಾಮಾನ್ಯರನ್ನು ವಂಚಿಸುತ್ತ ನಡೆದಿದ್ದ ಜನ ಸಮುದಾಯವನ್ನು ಹೋತಿನ ಉದಾಹರಣೆ ಕೊಡುವ ಮೂಲಕ ಬಸವಣ್ಣ ಅವರಲ್ಲಿ ಪ್ರತಿಭಟನೆಯ ಕಿಚ್ಚು ಉಂಟಾಗುವಂತೆ, ಜಾಗೃರಾಗುವಂತೆ ಮಾಡುತ್ತಾರೆ. ಜೊತೆಗೆ ವೇದ ಶಾಸ್ತ್ರ ಪುರಾಣಗಳು ಶೋಷಣೆಯ ಅಸ್ತ್ರಗಳು ಎಂಬ ಅರಿವನ್ನೂ ಅವರು ಡುತ್ತಾರೆ.

ಆಳಿಗೊಂಡಿಹರೆಂದು ಅಂಜಲದೇಕೆ
ನಾಸ್ತಿಕವಾಡಿಹರೆಂದು ನಾಚಲದೇಕೆ
ಆರಾದಡಾಗಲಿ ಶ್ರೀಮಹಾದೇವರಿಗೆ ಶರಣೆ.
ಏನೂ ಅರಿಯೆನೆಂದು ಮೋನಗೊಂಡಿರಬೇಡ.
ಕೂಡಲ ಸಂಗಮದೇವರ ಮುಂದೆ ದಂದಣ್ಣ ದತ್ತಣ್ಣಯೆನ್ನಿ.

ರಾಜರುಗಳು ನಮ್ಮನ್ನು ಆಳುತ್ತಾರೆಂದು ನಾವು ಅಂಜಿಕೂಡುವ ಅವಶ್ಯಕತೆ ಇಲ್ಲ. ರಾಜರುಗಳು ಪ್ರಜೆಗಳ ಅನುಕೂಲ ಮಾಡಲು ಇರಬೇಕೆ ಹೊರತು ತಮ್ಮ ಆಶಯಗಳನ್ನು ಪೂರೈಸಿಕೊಳ್ಳಲು ಅಲ್ಲ. ಅರಮನೆ ಭವ್ಯವಾಗಿ ಕಟ್ಟುವುದಕ್ಕಿಂತ ಆ ಅರಮನೆಯ ನಿರ್ಮಾತೃ ಪ್ರಜೆ. ಆ ಪ್ರಜೆ ವಾಸವಾಗಿರುವ ಮನೆಯೂ ಅರಮನೆಯಂತೆ ಭವ್ಯವಾಗಿರಬೇಕು. ಹಲವರನ್ನು ಶೋಷಿಸಿ ,ವಂಚಿಸಿ ,ಕಬಳಿಸಿ ಅರಮನೆ ಬೃಹದಾಕಾರವಾಗಿ ತಲೆ ಎತ್ತಿ ನಿಲ್ಲುವುದನ್ನು ಬಸವಣ್ಣನವರು ಯಾವತ್ತೂ ಇಷ್ಟ ಪಡಲಿಲ್ಲ. ಹೀಗಾಗಿಯೆ ಅವರು ಅಂದಿನ ರಾಜಶಾಹಿ ನಡವಳಿಕೆಗಳಿಗೆ ಅಂಜದೆ ಅಳುಕದೆ ಪ್ರಶ್ನಿಸಿ ಎಂದು ಹೇಳಿದರು.

ಕೆಲವು ವಿಚಾರಗಳನ್ನು ಸ್ಪಷ್ಟ ಪಡಿಸುತ್ತಿರುವಾಗ ಹಲವಾರು ಜನ ಕುಹಕಿಗಳು ನಾಸ್ತಿಕರೆಂದು ನಿಮ್ಮನ್ನು ಪಟ್ಟಗಟ್ಟಬಹುದು. ಆಗಲೂ ಹೆದರುವ ಅವಶ್ಯಕತೆ ಇಲ್ಲ. ಸತ್ಯವನ್ನು ಅರಿತು ಸಾಕ್ಷಾತ್ಕಾರ ಮಾಡಿಕೊಂಡ ಶರಣ ಯಾವುದೆ ಬಗೆಯ ಕಳಂಕದ ಮಾತಿಗೆ ಹೆದರಿಕೊಳ್ಳಬಾರದು. ಜಾತಿ ಮತ ಪಂಥ ಭೇದವಿಲ್ಲದೆ, ಹೆಣ್ಣು ಗಂಡು ಎಂಬ ತಾರತಮ್ಯ ಮಾಡದೆ, ತನ್ನ ಕಾಯಕವನ್ನು ತಾನು ಮಾಡಿಕೊಂಡಿರವ ವ್ಯಕ್ತಿ ಯಾರೇ ಆಗಿರಲಿ. ಆತ ಮಹಾದೇವನೆ ಆಗಿರಬೇಕು. ಆತನಿಗೆ ನಾವೆಲ್ಲ ತಲೆಬಾಗಲೆ ಬೇಕು.

ವಿನಾಕಾರಣ ಸಮಾಜದಲ್ಲಿ ಗೊಂದಲ ಎಬ್ಬಿಸುತ್ತಿರುವ, ಜಾತಿ ಮತ ಪಂಥಗಳ ನಡುವೆ ಗೋಡೆ ಕಟ್ಟುತ್ತಿರುವ, ಜನಾಂಗ ಜನಾಂಗದ ನಡುವೆ ವಿಷಯ ಬೀಜ ಬಿತ್ತುತ್ತಿರುವ ವಿವೇಕರಹಿತರ ಮುಂದೆ ನಾ ಅಲ್ಪ ಎಂದು ಹಿಂದೆ ಸರಿಯಬೇಡ. ಮೌನವಾಗಿರಬೇಡ. ಅದಕ್ಕೆ ಕೂಡಲೇ ಪ್ರತಿಕ್ರಿಯಿಸು. ಏನೂ ಅನ್ನುವುದಕ್ಕೆ ಶಬ್ಧಗಳು ನಿನ್ನ ಬಳಿ ಇಲ್ಲದೆ ಹೋದರೂ ಚಿಂತೆ ಇಲ್ಲ. ಥಕ ಥೈ ಎಂದು ಕುಣಿದಾದರೂ ಪ್ರತಿಭಟಿಸು ಎಂಬ ಮಾತು ಕಂಪನವನ್ನುಂಟು ಮಡುತ್ತದೆ.

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು.
ಕೊಂದಹರೆಂಬುದನರಿಯದೆ
ಬೆಂದ ಒಡಲ ಹೊರೆವುತ್ತಲದೆ.
ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು
ಕೊಂದವರುಳಿದರೆ ಕೂಡಲಸಂಗಮದೇವಾ

ಜನ ಸಾಮಾನ್ಯರಲ್ಲಿ ಪ್ರತಿಭಟನೆಯ ಕಿಚ್ಚು ಹೇಗೆ ಹಚ್ಚಬೇಕು? ಎಂಬ ಸೂಕ್ಷ್ಮವನ್ನು ಬಸವಣ್ಣನವರು ನಮಗೆ ಕಲಿಸಿಕೊಟ್ಟಿದ್ದಾರೆ. ಯಾರದೋ ಮನಸ್ಸಿನ ಇಚ್ಛೆಗಾಗಿ ಹಬ್ಬ ಮಾಡುತ್ತಿದ್ದಾರೆ. ಈ ಹಬ್ಬದಲ್ಲಿ ನಮ್ಮನ್ನು ಮುಖ್ಯ ಎಂದು ತೋರಿಸುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಕಂಡರೂ ಇದು ಹುಸಿ. ಆ ಹಬ್ಬದ ಹರಕೆಯ ಕುರಿ ನಾವಾಗಿದ್ದೇವೆ. ಕುರಿ ಹೇಗೆ ತನ್ನ ಬಲಿಯನ್ನು ಈ ಹಬ್ಬದಲ್ಲಿ ಕೊಡುತ್ತಾರೆ ಎಂಬುದನ್ನು ಮರೆತು ನಿಶ್ಚಿಂತತೆಯಿಂದ ಆ ಹಬ್ಬದ ಶೃಂಗಾರಕ್ಕಾಗಿ ಕಟ್ಟಿದ ತಳಿರು- ತೋರಣಗಳನ್ನು ಮೇಯುತ್ತ ಶ್ಚಿಂತವಾಗಿರುತ್ತದೆ. ಆದರೆ ಆ ಹಬ್ಬದಲ್ಲಿ ತನಗೆ ಬಲಿ ಕೊಡುತ್ತಾರೆ ಎಂಬ ಅರಿವು ಇರುವುದಿಲ್ಲ. ಆ ಅರಿವು ಕುರಿಗೆ ಇದ್ದರೆ ಅದು ಶ್ಚಿಂತವಾಗಿ ಮೇಯಲು ಸಾಧ್ಯವಿತ್ತೆ ? ಹಸಿವಿನ ಹೊಟ್ಟೆ ತುಂಬಿಸಿಕೊಳ್ಳುವುದು ತಾತ್ಕಾಲಿಕ. ನಿನ್ನ ಜೀವನವನ್ನು ಕೊಲ್ಲಲು ನಿಂತಿರುವಾಗ ಹಸಿವನ್ನು ನಂಬಿ ಅದನ್ನು ಪೂರೈಸಿಕೊಳ್ಳಲು ಮುಂದಾಗಬೇಡ ಎಂಬ ಮೂಲಕ ಬಸವಣ್ಣ ಹಸಿವಿಗಿಂತಲೂ ಮುಖ್ಯ ಪ್ರಜ್ಞೆ ಮತ್ತು ಪ್ರತಿಭಟನೆ ಎಂಬುದನ್ನು ತಿಳಿಸಿಕೊಡುತ್ತಾರೆ.

ಸ್ವತಃ ಬಸವಣ್ಣನವರು ತಾನು ಬಿಜ್ಜಳ ಅರಸನಲ್ಲಿ ಪ್ರಧಾಯಾಗಿದ್ದರೂ ಆ ಗದ್ದುಗೆಯ ಆಳು ಎಂದೂ ಆಗಲಿಲ್ಲ. ಬಸವಣ್ಣನವರು ಬರುವುದಕ್ಕಿಂತ ಪೂರ್ವದಲ್ಲಿ ಯಾವ ಪ್ರಧಾನಿಯೂ ಸಹ ಬಸವಣ್ಣನವರಂತೆ ಗಟ್ಟಿಯಾಗಿ ರಾಜನನ್ನು ಸಂಬೋಧಿಸಿ ಮಾತನಾಡಿದ್ದು ಚರಿತ್ರೆ ಕಂಡಿಲ್ಲ. ರಾಜರನ್ನು ರಾಜಾಧಿರಾಜ, ತಟಗಟಿತ ಮಣಿಮುಕುಟ,ಭೂಪರಾಕ, ಭೂಪರಾಕ ಎಂದು ಹಾಡಿ ಹೊಗಳಿದವರನ್ನೇ ನಾವು ಕಾಣುತ್ತೇವೆ. ಇಂದ್ರ ಚಂದ್ರ ದದೀಚಿಗೆ ನಮ್ಮ ರಾಜನೇ ಸಾಟಿ ಎಂದು ಬಿರುದು ನೀಡಿ ಹೊಗಳಿದವರ ಸಾಲು ಸಾಲು ಪಟ್ಟಿಯಿದೆ. ಆದರೆ ಬಸವಣ್ಣನವರು ಮಾತ್ರ ಬಿಜ್ಜಳ ದೊರೆಗೆ ವಿಶೇಷಗಳಿಂದ ಕರೆಯುವುದು ಒತ್ತಟ್ಟಿಗಿರಲಿ ಬರೀ ಬಿಜ್ಜಳ ಎಂದು ಕರೆದರು ಅದು ಬಹು ದೊಡ್ಡ ಕ್ರಾಂತಿಯ ಮಾತಾಗುತ್ತಿತ್ತು. ಆದರೆ ಬಸವಣ್ಣನವರ ಧೈರ್ಯ ಎಂತಹದ್ದೆಂದರೆ ಬಿಜ್ಜಳನ್ನು ಆ ಭವಿ ಬಿಜ್ಜಳಂಗೆ ಅಂಜುವೆನೆ ? ಎಂದು ತನ್ನ ಶರಣ ಸಮೂಹವನ್ನು ಕ್ರಾಂತಿಯ ಪಥದಲ್ಲಿ ಧೈರ್ಯದಿಂದ ನಡೆಯುವಂತೆ ಸೂಚಿಸಿ ಬಿಡುತ್ತಾರೆ.

ಮೀನು ಮೊಸಳೆ ಮುಂತಾದ ಸರಿಸೃಪಗಳು ತಮ್ಮ ಭಾವಕ್ಕೆ ಧಕ್ಕೆಯಾದಾಗ ಪ್ರತಿಭಟಿಸುತ್ತವೆ. ಆಕ್ರೋಶ ವ್ಯಕ್ತ ಪಡಿಸುತ್ತವೆ. ಸಣ್ಣದಾದ ಇರುವೆ ಕೂಡ ತನ್ನ ಅಸ್ತಿತ್ವಕ್ಕೆ ದಕ್ಕೆ ಬಂದಾಗ ತನ್ನ ಜೀವದ ಹಂಗು ತೊರೆದು ನಮ್ಮನ್ನು ಕಚ್ಚಿ ಹೈರಾಣ ಮಾಡುತ್ತದೆ. ಜೇನು ನೊಣವನ್ನು ತಡವಿ ಉಳಿದವರಾರು ಇಲ್ಲ. ಇಲಿ ಬೆಕ್ಕು ಹಾವು ಹಲ್ಲಿಗಳಲ್ಲೂ ಪ್ರತಿಭಟನೆಯ ಕಿಚ್ಚು ಕಾಣುತ್ತೇವೆ. ಆದರೆ ಮನುಷ್ಯನಲ್ಲಿ, ಅದು ಇನ್ನೂ ಹೆಚ್ಚಾಗಿರಬೇಕಿತ್ತು. ಆದರೆ ಇಂದು ಏನಾಗಿದೆ ? ಮನುಷ್ಯನೊಳಗಣ ಪ್ರತಿಭಟನೆಯೆಂಬ ಕಬ್ಬಿಣಕ್ಕೆ ಸ್ವಾರ್ಥದ ಜಂಗು ತಿಂದಿದೆ. ಕಬ್ಬಿಣ ತನ್ನ ಸತ್ವ ಕಳೆದುಕೊಂಡಿದೆ.

1 ಕಾಮೆಂಟ್

  1. ಬಸವಣ್ಣನವರು ಬರೀ ಭಕ್ತಿ ಭಂಡಾರಿ ಯಾಗಿರಲಿಲ್ಲ,ಅವರು ಕರುಣಾಮಯಿತ್ವವನ್ನು ಹೊಂದಿದ ಹೋರಾಟಗಾರರಾಗಿದ್ದರು.ಅಳುವುದು ಪ್ರತಿಭಟನೆಯ ಸಂಕೇತ ಎಂದು ತಿಳಿಸಿದ ಪ್ರತಿಭಟನೆಯ ರೂವಾರಿ.ಸಮ ಸಮಾಜದ ಕನಸುಗಾರಮತ್ತು ಒಂದು ಮದುವೆಯ ಮೂಲಕ ಸಾಬೀತು ಪಡಿಸಿದ ದೀರ ಶರಣ. ಆದರೆ ಸಮಾಜ ಅರಗಿಸಿಕೊಳ್ಳಲಾಗಲಿಲ್ಲ ಅದು ದುರಂತ. ಇಗಬಸವಣ್ಣನವರನ್ನು ಜಗತ್ತೆ ಅರ್ಥಮಾಡಿಕೊಳ್ಳುತ್ತಿರುವುದು ಸಂತೋಷ್ ಸಂಗತಿ ಶರಣುಗಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here