ಜಿಮ್ಸ್‌ನಲ್ಲಿ ಶುಶ್ರೂಷಾಧಿಕಾರಿಗಳಿಗೆ ಮೂಲ ಸೌಲಭ್ಯ ವದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

0
46

ಕಲಬುರಗಿ: ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ನ್ಯಾಯಯುತವಾದ ಮೂಲ ಸೌಲಭ್ಯತಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಖಾಯಂ ಶುಶ್ರೂಷಕ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ಭಾನುವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಅಡಚಣೆಯಾಗದಂತೆ ಪ್ರತಿಭಟನೆ ನಡೆಸಲಾಯಿತು.

ಜಿಮ್ಸ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಶುಶ್ರೂಷಾಧಿಕಾರಿಗಳು ವಿಶ್ವವ್ಯಾಪಿ ಕೋವಿಡ್-೧೯ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ಕನಿಷ್ಠ ಸರ್ಕಾರಿ ಸೌಲಭ್ಯಗಳಾದ ಎನ್‌ಪಿಎಸ್, ಕೆಜಿಐಡಿ, ಜ್ಯೋತಿ ಸಂಜೀವಿನಿ, ಡಿಸಿಆರ್‌ಜಿ ಮತ್ತು ಇತರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ಸಿಗುವಂತಹ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಶುಶ್ರೂಷಾಧಿಕಾರಿಗಳಾಗಿ ಕರ್ತವ್ಯಕ್ಕೆ ಹಾಜರಾದಾಗಿನಿಂದಲೂ ಇಲ್ಲಿಯವರೆಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿಲ್ಲ. ಆದಾಗ್ಯೂ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳಾದ ಜಯದೇವ್ ಹೃದ್ರೋಗ ಆಸ್ಪತ್ರೆ ಮತ್ತು ನೇಫ್ರೋ ಯುರಾಲಜಿ ಸಂಸ್ಥೆಗಳಲ್ಲಿ ಎನ್‌ಪಿಎಸ್ ಸೌಲಭ್ಯ ದೊರೆಯುತ್ತಿದೆ. ಕೂಡಲೇ ಇಂತಹ ತಾರತಮ್ಯವನ್ನು ನಿವಾರಿಸುವಂತೆ ಒತ್ತಾಯಿಸಿದರು.

ಕೆಜಿಐಡಿ ಮತ್ತು ಡಿಸಿಆರ್‌ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೌಲಭ್ಯವಾಗಿದ್ದು, ರಾಜ್ಯದ ಒಂದೇ ಮಾದರಿಯ ಆರೋಗ್ಯ ಸೇವೆಗಳು ಇದ್ದು, ಅದಕ್ಕೆ ಇಲಾಖೆಯ ಶುಶ್ರೂಷಾಧಿಕಾರಿಗಳು ವಂಚಿತರಾಗಿದ್ದಾರೆ. ಇದರಿಂದಾಗಿ ಯಾವುದೇ ಸೇವಾ ಭದ್ರತೆ ಇಲ್ಲದೇ ಇರುವುದು ಎದ್ದು ಕಾಣುತ್ತಿದ್ದು, ಕೂಡಲೇ ಸೇವೆಯನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಜ್ಯೋತಿ ಸಂಜೀವಿನಿ ಯೋಜನೆಯು ರೋಗಿಗಳ ಆರೋಗ್ಯ ಸೇವೆಯಲ್ಲಿ ಇರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ಯಾವುದೇ ರೀತಿಯ ನಗದು ರಹಿತ ಚಿಕಿತ್ಸಾ ಸೌಲಭ್ಯಗಳಿಲ್ಲ. ಆದಾಗ್ಯೂ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಾತ್ರ ಸೌಲಭ್ಯವಿದೆ ಎಂದು ಅವರು ಹೇಳಿದರು.

ಶೇಕಡಾ ೫೦ರಷ್ಟು ಹೆಚ್ಚುವರಿ ವೇತನ ನೀಡುವಂತೆ ಒತ್ತಾಯಿಸಿದ ಅವರು, ಪ್ರಸ್ತುತ ಕೋವಿಡ್-೧೯ ತುರ್ತು ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ವೈದ್ಯರಿಗೆ ಎಐಸಿಟಿ ವೇತನ ಮತ್ತು ಗ್ರುಪ್ ಡಿ ನೌಕರರಿಗೆ ೧೦೦೦೦ರೂ.ಗಳ ಗೌರವ ವೇತನ ನೀಡಿರುವುದು ಸ್ವಾಗತಾರ್ಹ. ಆದಾಗ್ಯೂ, ಜೀವದ ಹಂಗು ತೊರೆದು ಕೋವಿಡ್-೧೯ ಪರಿಸ್ಥಿತಿಯಲ್ಲಿ ಇತರೆ ಸಿಬ್ಬಂದಿಗಳಿಗಿಂತ ಹೆಚ್ಚಿನ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕ್ಷೇತ್ರದ ಬೆನ್ನೆಲುಬು ಆದ ಶುಶ್ರೂಷಾಧಿಕಾರಿಗಳಿಗೆ ಯಾವುದೇ ರೀತಿಯ ಕನಿಷ್ಠ ಸೌಲಭ್ಯವಿಲ್ಲದೇ ಪ್ರೋತ್ಸಾಹ ಧನ, ಭತ್ಯೆ ಕೊಡದೇ ತಾರತಮ್ಯ ಮಾಡಲಾಗುತ್ತಿದೆ. ಕೂಡಲೇ ಎಲ್ಲ ಸೌಲಭ್ಯಗಳನ್ನು ಶುಶ್ರೂಷಾಧಿಕಾರಿಗಳಿಗೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಹಣಮಂತರಾಯ ಚಿತ್ತಾಪೂರಕರ, ಅಧ್ಯಕ್ಷರಾದ ರಾಜಶೇಖರ ಬಿ., ಪ್ರಧಾನ ಕಾರ್ಯದರ್ಶಿ ಸಂಕೇತ ಸೂರ್ಯವಂಶಿ, ಉಪಾಧ್ಯಕ್ಷರಾದ ಅಶೋಕಕುಮಾರ ಗುತ್ತೇದಾರ್, ಶ್ರೀಪಾದ ವಿಭೂತಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಿದ್ದಾರ್ಥ, ವೀರೇಶ, ಭೀಮಣ್ಣ ಹೊಕ್ರಾಣಿ, ಚಂದ್ರಪ್ಪ, ಸುನೀಲಕುಮಾರ, ರೂಪಾ, ಶೀಲಾ, ನಾಗರಾಜ, ಮೋನಪ್ಪಾ, ಪೂರ್ಣಿಮಾ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here