ಸುರಪುರ: ತಾಲೂಕಿನ ದೇವಿಕೆರಾ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ಬಿದ್ದು ದೊಡ್ಡ ಪ್ರಮಾಣದಲ್ಲಿ ನಷ್ಟವುಂಟಾಗಿರುವ ಘಟನೆ ಬುಧವಾರ ಮದ್ಹ್ಯಾನ ನಡೆದಿದೆ.
ಇಮಾಮ್‌ಸಾಬ್ ದೊಡ್ಮನಿ ಎಂಬುವವರಿಗೆ ಸೇರಿದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದರಿಂದ ಮನೆಗೆ ಬೆಂಕಿ ಬಿದ್ದಿದ್ದು ಮನೆಯಲ್ಲಿದ್ದ ಸುಮಾರು ೪೦ ಗ್ರಾಂ ಬಂಗಾರ ಹಾಗು ಮಗಳ ಮದುವೆಗೆಂದು ಸಾಲ ಮಾಡಿ ತಂದಿದ್ದ ೮.೫೦ ಲಕ್ಷ ರೂಪಾಯಿ ನಗದು ಹಾಗು ಜೋಳ ಅಕ್ಕಿ ಬೇಳೆ ಸೇರಿದಂತೆ ಅಗತ್ಯ ವಸ್ತುಗಳು ಮತ್ತು ಬಟ್ಟೆ ಬರೆ ಎಲ್ಲಾ ಸುಟ್ಟು ಕರಕಲಾಗಿದೆ.
ಮನೆಯಲ್ಲಿ ಒಟ್ಟು ಐದು ಕೋಣೆಗಳಿದ್ದು ಬಹುತೇಕ ಎಲ್ಲಾ ಕೋಣೆಗಳು ಬೆಂಕಿಗಾಹುತಿಯಾಗಿವೆ. ಮನೆಯಲ್ಲಿ ಒಟ್ಟು ೯ ಜನರಿದ್ದು ಅವರಲ್ಲಿ ಕೆಲವರು ತಮ್ಮ ತಮ್ಮ ಕೆಲಸಗಳಿಗೆ ತೆರಳಿದ್ದು ಚಿಕ್ಕ ಮಕ್ಕಳು ಹೊರಗಡೆ ಇರುವುದರಿಂದ ಅದೃಷ್ಟಾವಶಾತ್ ಮನೆಯಲ್ಲಿ ಯಾರೂ ಇಲ್ಲದೆ ಜೀವ ಹಾನಿ ಸಂಭವಿಸಿಲ್ಲ.ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹೋಗಿ ಬೆಂಕಿ ನಂದಿಸಿದರಾದರು ಆಗಲೆ ಎಲ್ಲವು ಸುಟ್ಟು ಹೋಗಿದ್ದವು ಎಂದು ಮನೆಯ ಯಜಮಾನ ಇಮಾಮ್‌ಸಾಬ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗು ಸುರಪುರ ಠಾಣೆಯಲ್ಲೂ ದೂರು ದಾಖಲಿಸುವುದಾಗಿ ಮನೆಯ ಮಾಲೀಕ ತಿಳಿಸಿದ್ದು ಮಗಳ ಮದುವೆ ಮಾಡಬೇಕಾದ ಸಂದರ್ಭದಲ್ಲಿ ಎಲ್ಲವೂ ಸುಟ್ಟು ಹೋಗಿವೆ ಈಗ ಮಗಳ ಮದುವೆ ಮಾಡಲು ಏನು ಮಾಡುವುದೆಂದು ದೊಡ್ಡ ಚಿಂತೆಯಾಗಿದೆ.ಸರಕಾರ ನಮಗೆ ಏನಾದರು ಪರಿಹಾರ ನೀಡಬೇಕೆಂದು ವಿನಂತಿಸಿದ್ದಾರೆ.