ವಾಡಿ: ನಾಲವಾರ ಗ್ರಾಮದಲ್ಲಿರುವ ಶಿಥಿಲಾವಸ್ಥೆಯ ಪಶು ಆಸ್ಪತ್ರೆ ಕಟ್ಟಡ ತೆರವುಗೊಳಿಸಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ೧.೧೮ ಕೋಟಿ ರೂ. ಅನುದಾನ ನೀಡುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಅವರು ಜಾನುವಾರುಗಳ ಆರೋಗ್ಯ ಕಾಳಜಿ ಮೆರೆದಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ ಹೇಳಿದರು.
ನಾಲವಾರ ಗ್ರಾಮಕ್ಕೆ ಮಂಜೂರಾಗಿರುವ ನೂತನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ೪೩ ಲಕ್ಷ ರೂ. ವೆಚ್ಚದ ಪಶು ಆರೋಗ್ಯ ಕೇಂದ್ರ, ೭೫ ಲಕ್ಷ ರೂ. ಅನುದಾನದಡಿ ಆರೋಗ್ಯ ಸಿಬ್ಬಂದಿಗಳ ಕೋಣೆ, ಮಿನಿ ನೀರು ಶುದ್ಧೀಕರಣ ಘಟಕ, ಅಂಗನವಾಡಿ ಕಟ್ಟಡ ಸೇರಿದಂತೆ ಗ್ರಾಮದಲ್ಲಿ ಮಾದರಿ ಶೌಚಾಲಯ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುತ್ತಿದೆ. ಚಿತ್ತಾಪುರ ತಾಲೂಕಿನ ಹೋಬಳಿ ಕ್ಷೇತ್ರವಗಿರುವ ನಾಲವಾರ ಪ್ರಗತಿಗೆ ಪ್ರಿಯಾಂಕ್ ಮುನ್ನುಡಿ ಬರೆದಿದ್ದಾರೆ. ಗ್ರಾಮಕ್ಕೆ ಇನ್ನಷ್ಟು ಅಭಿವೃದ್ಧಿ ಪರ ಯೋಜನೆಗಳು ಬರಲಿವೆ ಎಂದು ತಿಳಿಸಿದರು.
ರಾಯಚೂರು ಕೃಷಿ ವಿವಿ ಮಾಜಿ ನಿರ್ದೇಶಕ, ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣಗೌಡ ಪರಸರೆಡ್ಡಿ ಮಾತನಾಡಿ, ರಾಜ್ಯದಲ್ಲಿಯೇ ಯಾವ ಶಾಸಕನೂ ತರಲಾರದಷ್ಟು ಅನುದಾನವನ್ನು ಶಾಸಕ ಖರ್ಗೆ ಚಿತ್ತಾಪುರಕ್ಕೆ ತಂದಿದ್ದಾರೆ. ಇಡೀ ರಾಜ್ಯವೇ ಇತ್ತ ನೋಡುವಂತೆ ಪ್ರಗತಿಗೈದಿದ್ದಾರೆ. ಮಾದರಿ ಕೋವಿಡ್ ಕೇರ್ ಸೆಂಟರ್ ಚಿತ್ತಾಪುರದಲ್ಲಿ ಸ್ಥಾಪಿಸಿದ್ದಾರೆ. ಗ್ರಾಮೀಣ ಭಾಗದ ರಸ್ತೆಗಳು ಸುಧಾರಣೆ ಕಾಣಲು ಮತ್ತು ಶೈಕ್ಷಣಿಕ, ಕೃಷಿ, ಆರೋಗ್ಯ ವಲಯಕ್ಕೆ ಹೆಚ್ಚಿನ ಕಾಳಜಿ ತೋರಿ ಅನುದಾನ ನೀಡುತ್ತಿದ್ದಾರೆ. ಹಲವು ದಶಕಗಳ ನಂತರ ನಾಲವಾರ ಗ್ರಾಮಕ್ಕೆ ಹೊಸ ಪಶು ಆಸ್ಪತ್ರೆ ಮಂಜೂರಾಗಿರುವುದು ರೈತರಿಗೆ ಅನುಕೂಲವಾಗಲಿದೆ. ಚುನಾವಣೆ ವೇಳೆ ಗ್ರಾಮಸ್ಥರಿಗೆ ಕೊಟ್ಟ ಮಾತನ್ನು ಪ್ರಿಯಾಂಕ್ ಖರ್ಗೆ ಉಳಿಸಿಕೊಂಡಿದ್ದಾರೆ ಎಂದರು.
ಎಪಿಎಂಸಿ ಅಧ್ಯಕ್ಷ ಶಿವುರೆಡ್ಡಿಗೌಡ, ಮುಖಂಡರಾದ ಶಿವರಾಜ ಪಾಟೀಲ, ಶರಣು ವಾರದ್, ಸಲೀಮ ಅಹ್ಮದ್, ಚಂದ್ರಶೇಖರ ಲೇವಡಿ, ಪ್ರದೀಪ ರೆಡ್ಡಿ, ರುದ್ರುಮುನಿ ಮಠಪತಿ, ಸಂತೋಷ ಮಳಬಾ, ಸಾಬಣ್ಣ ಹಳಕರ್ಟಿ, ಮಹ್ಮದ್ ಕರೀಮ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.