ಶಹಾಬಾದ:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿ ಅವರನ್ನು ಅವಮಾನಿಸಿದ ಸಿಂದಗಿ ತಾಲೂಕಿನ ಮಡ್ನಾಲ್ ಗ್ರಾಮದ ಕೆಬಿಎಸ್ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಸ್.ಮೊಕಾಶಿ ಹಾಗೂ ಒಬ್ಬ ಶಿಕ್ಷರನ್ನು ಅಮಾನತು ಮಾಡಿದರೇ ಸಾಲದು, ಅವರನ್ನು ಸರಕಾರ ಸೇವೆಯಿಂದಲೇ ವಜಾಗೊಳಿಸಬೇಕೆಂದು ದಸಂಸ ಜಿಲ್ಲಾ ಸಂಚಾಲಕ ಮುಖಂಡ ಸುರೇಶ ಮೆಂಗನ್ ಮತ್ತು ಸಂಘಟನಾ ಸಂಚಾಲಕ ಭರತ್ ಧನ್ನಾ ಆಗ್ರಹಿಸಿದ್ದಾರೆ.
ಶಾಲೆಯಲ್ಲಿ ನಡೆದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ವೇಳೆ ಅಂಬೇಡ್ಕರ್ ಭಾವಚಿತ್ರವನ್ನು ಇಡುವ ವಿಚಾರದಲ್ಲಿ ಗ್ರಾಮಸ್ಥರೊಂದಿಗೆ ಶಿಕ್ಷಕ ವಾಗ್ವಾದ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಆ ಶಿಕ್ಷಕರು ಅಂಬೇಡ್ಕರ್ ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿಲ್ಲ.ಹೀಗಾಗಿ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರ ಇಡುವ ಅಗತ್ಯವಿಲ್ಲ.ನಾವು ನಮ್ಮ ಮಕ್ಕಳಿಗೆ ತಪ್ಪು ಮಾಹಿತಿ ನೀಡಬಾರದು.ಅಂಬೇಡ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲ.ಹೀಗಾಗಿ ನಾನು ಅವರ ಭಾವಚಿತ್ರ ಇಡುವುದಿಲ್ಲ ಎಂದು ಗ್ರಾಮಸ್ಥರಿಗೆ ಹೇಳಿದ್ದಾರೆ.
ಇದೇ ವೇಳೆ ಮೊಕಾಶಿ ಅವರಿಗೆ ಶಿಕ್ಷಕಿಯೊಬ್ಬರೂ ಬೆಂಬಲಿಸಿರುವುದು ಕಂಡು ಬಂದಿದೆ. ಅಂಬೇಡ್ಕರ್ ಯಾರು ಎಂದು ಇಡೀ ವಿಶ್ವಕ್ಕೆ ಗೊತ್ತಿರುವಾಗ, ಶಿಕ್ಷಕರಾದ ಇವರಿಗೆ ಸಾಮನ್ಯ ಜ್ಞಾನ ಇಲ್ಲದಿರುವಂತೆ ವರ್ತಿಸಿದ್ದಾರೆ.ಇಂತಹ ಶಿಕ್ಷಕರು ಮಕ್ಕಳಿಗೆ ಏನು ತಾನೇ ಹೇಳಿಕೊಡಬಹುದು. ಅಂಬೇಡ್ಕರ ಜೀವನ ಬಗ್ಗೆ ಗೊತ್ತಿಲ್ಲದ ಇವರುಗಳಿಗೆ ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೈತೊಳೆದುಕೊಂಡರೇ ಸಾಲದು ಸೇವೆಯಿಂದ ಅಮಾನತು ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.