ನೀರು ಶುದ್ಧೀಕರಣ ಘಟಕಕ್ಕೆ ಬಂದವು ಹೊಸ ಯಂತ್ರ: ಎಸ್‌ಯುಸಿಐ ಹೋರಾಟಕ್ಕೆ ಎಚ್ಚೆತ್ತ ಪುರಸಭೆ

0
82

ವಾಡಿ: ಕಳೆದ ಐದಾರು ವರ್ಷಗಳಿಂದ ತುಕ್ಕು ಹಿಡಿದು ಮೂಲೆ ಸೇರಿದ್ದ ಯಂತ್ರಗಳ ನೆರಳಿನಲ್ಲೇ ಸಾಗಿದ್ದ ನೀರು ಶುದ್ಧೀಕರಣ ಘಟಕಕ್ಕೆ ಕೊನೆಗೂ ಹೊಸ ಯಂತ್ರಗಳ ಆಗಮನವಾಗಿದ್ದು, ಕಲುಷಿತ ನೀರು ಕುಡಿದು ಗೋಳಾಡುತ್ತಿದ್ದ ಜನರ ಒಡಲಿಗೆ ಶುದ್ಧ ನೀರು ಸೇರುವ ದಿನಗಳು ಹತ್ತಿರವಾಗಿವೆ.

ಸಿಮೆಂಟ್ ನಗರಿ ವಾಡಿ ಪಟ್ಟಣದ ಪುರಸಭೆಗೆ ಸೇರಿದ್ದ ಕುಂದನೂರು ಭೀಮಾನದಿ ದಂಡೆಯ ಜಲ ಶುದ್ಧೀಕರಣ ಘಟಕಕ್ಕೆ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ನಾಯಕರ ದಿಢೀರ್ ಭೇಟಿಯಿಂದ ಬೃಹತ್ ಗಾತ್ರದ ಘಟಕದ ಕರ್ಮಕಾಂಡ ಬಯಲಾಗಿತ್ತು. ಕ್ಲೋರಿನ್ ಯಂತ್ರಗಳು ಕೆಟ್ಟು ಹೋಗಿದ್ದವು. ಆಲಂ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣದ ಆರು ಯಂತ್ರಗಳು ಹಾಲಾಗಿ ಎರಡು ವರ್ಷಗಳೇ ಉರುಳಿದ್ದವು. ಮರಳಿಲ್ಲದೆ ಕಲುಷಿತ ನೀರು ನದಿಯಿಂದ ನೇರವಾಗಿ ಬಡಾವಣೆಗಳತ್ತ ಓಡುತ್ತಿತ್ತು.

Contact Your\'s Advertisement; 9902492681

ಆಲಂ ಮಿಶ್ರಣ ಯಂತ್ರ ರಿಪೇರಿ ಮಾಡದ ಕಾರಣ ಆಲಂ ರಸಾಯನಿಕವನ್ನು ನೇರವಾಗಿ ನೀರಿಗೆ ಸುರಿಯಲಾಗುತ್ತಿತ್ತು. ನೀರು ಸಂಗ್ರಹಗಳ ಸ್ವಚ್ಚತೆ ಮರೀಚೆಕೆಯಾಗಿತ್ತು. ನಿರ್ವಹಣೆ ಹೆಸರಿನಲ್ಲಿ ವರ್ಷಕ್ಕೆ ಕೋಟಿಗಟ್ಟಲೇ ಹಣ ಖರ್ಚು ಮಾಡಲಾಗುತ್ತಿದ್ದ ಜಲ ಶುದ್ಧೀಕರಣ ಘಟಕ ಇದ್ದೂ ಇಲ್ಲದಂತಿತ್ತು. ಒಂದು ಹನಿ ಶುದ್ಧ ನೀರು ಜನರಿಗೆ ತಲುಪಿರಲಿಲ್ಲ. ಹೋರಾಗಾರರ ಒತ್ತಡದಿಂದ ಕೊನೆಗೂ ಎಚ್ಚೆತ್ತ ಪುರಸಭೆ ಅಧಿಕಾರಿಗಳು, ತರಾತುರಿಯಲ್ಲಿ ೨೦೨೦ನೇ ಸಾಲಿನ ೧೪ನೇ ಹಣಕಾಸು ಅನುದಾನದಡಿ ೧೧ ಲಕ್ಷ ರೂ. ಖರ್ಚು ಮಾಡಿ ಅಗತ್ಯ ರಸಾಯಿನಿಕ, ಮರಳು ಹಾಗೂ ಯಂತ್ರೋಪಕರಣಗಳನ್ನು ಖರೀದಿಸಿ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಅಧಿಕಾರಿಗಳ, ಗುತ್ತಿಗೆದಾರನ ಹಾಗೂ ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸುಮಾರು ಐದು ವರ್ಷಗಳ ಕಾಲ ಸ್ಥಳೀಯರು ರಾಡಿ ನೀರು ಕುಡಿಯಬೇಕಾದ ದುಸ್ಥಿತಿ ಎದುರಾಗಿತ್ತು. ಉಳ್ಳವರು ಇಂದಿಗೂ ಖರೀದಿಸಿಯೇ ನೀರು ಕುಡಿಯುತ್ತಿದ್ದಾರೆ. ಎಸ್‌ಯುಸಿಐ ಪಕ್ಷದ ನಾಯಕರ ಪ್ರತಿರೋಧದಿಂದಾಗಿ ಜಲ ಶುದ್ಧೀಕರಣ ಘಟಕಕ್ಕೆ ಮರುಜೀವ ಬಂದಿದೆ ಎನ್ನಬಹುದು.

ಹತ್ತು ದಿನದಲ್ಲಿ ಜನರ ಮನೆಬಾಗಿಲಿಗೆ ಶುದ್ಧ ನೀರು: 
ಜಲ ಶುದ್ಧೀಕರಣ ಘಟಕದಲ್ಲಿ ಕೆಟ್ಟುಹೋಗಿದ್ದ ಎಲ್ಲಾ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ೨೦೨೦ನೇ ಸಾಲಿನ ೧೪ನೇ ಹಣಕಾಸು ಯೋಜನೆಯಡಿ ೩ ಲಕ್ಷ ರೂ. ಖರ್ಚಿನಲ್ಲಿ ಕ್ಲೋರಿನ್ ಯಂತ್ರಗಳು, ಆಲಂ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣದ ಯಂತ್ರೋಪಕರಣ ಖರೀದಿಸಲಾಗಿದೆ. ಮೈಸೂರಿನಿಂದ ಮೂರು ಪದರಿನ ಮರಳು ತರಿಸಲಾಗುತ್ತಿದೆ. ಘಟಕದಲ್ಲಿ ಹೊಸ ಫಿಲ್ಟರ್ ಮೀಡಿಯಾ ಅಳವಡಿಕೆಗೆ ೮ ಲಕ್ಷ ರೂ. ಸೇರಿದಂತೆ ಒಟ್ಟು ೧೧ ಲಕ್ಷ ರೂ. ಭರಿಸಲಾಗಿದೆ. ಇನ್ನೂ ಹತ್ತು ದಿನಗಳಲ್ಲಿ ಜನರಿಗೆ ಸಂಪೂರ್ಣ ಶುದ್ಧ ನೀರು ಸರಬರಾಜು ಮಾಡುತ್ತೇವೆ. -ರಾಜಕುಮಾರ ಅಕ್ಕಿ. ಕಿರಿಯ ಅಭಿಯಂತರ. ವಾಡಿ ಪುರಸಭೆ.

ಸಕಾಲಕ್ಕೆ ಜನರಿಂದ ತೆರಿಗೆ ವಸೂಲಿ ಮಾಡುವ ಪುರಸಭೆ ಆಡಳಿತ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವುದು ಜನರಿಗೆ ಮಾಡಿದ ಮೋಸವಾಗಿದೆ. ದೊಡ್ಡ ಪ್ರಮಾಣದ ನೀರು ಶುದ್ಧೀಕರಣ ಘಟಕ ಇದ್ದರೂ ಸಾರ್ವಜನಿಕರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ರಾಡಿ ನೀರು ಕುಡಿದು ಜನರ ಆರೋಗ್ಯ ಹದಗೆಡುತ್ತಿದ್ದರೂ ಕೇಳುವವರಿಲ್ಲ. ತಡವಾಗಿಯಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ಯಂತ್ರೋಪಕರಣ ಖರೀದಿಸಿ ಅಳವಡಿಸಿರುವುದು ಸ್ವಾಗತಾರ್ಹ. ಇನ್ನುಮುಂದೆ ಜಲ ಶುದ್ಧೀಕರಣ ಘಟಕವನ್ನು ಜವಾಬ್ದಾರಿಯಿಂದ ನಿರ್ವಹಣೆ ಮಾಡಬೇಕು. ನೀರಿನ ಹೆಸರಿನಲ್ಲಿ ನಡೆಯುತ್ತಿರುವ ಅನುದಾನ ಲೂಟಿ ತಡೆಗಟ್ಟಬೇಕು. ಜನರಿಗೆ ಶುದ್ಧ ನೀರಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು.
-ವೀರಭದ್ರಪ್ಪ ಆರ್.ಕೆ. ಕಾರ್ಯದರ್ಶಿಗಳು, ಎಸ್‌ಯುಸಿಐ (ಸಿ)ಪಕ್ಷ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here