ಕಲಬುರಗಿ: ಸತತ ಮಳೆಯಿಂದ ಬೆಳೆಗಳು ನಷ್ಟವಾಗಿರುವ ರೈತರಿಗೆ ಸಮರ್ಪಕ ಪರಿಹಾರ, ಮಳೆಯ ಹೊಡೆತಕ್ಕೆ ನಷ್ಟವಾಗಿರುವ ಕೃಷಿ ಭೂಮಿಯ ಸೂಕ್ತ ಸಮೀಕ್ಷೆ ನಡೆಸಿ ರೈತರಿಗೆ ಆದ ನಷ್ಟ ಭಾರಿ ಹೊಳೆ, ಹಳ್ಳಗಳಿಂದ ಹಾಳಾಗಿರುವ ರಸ್ತೆ, ಕಾಲುವೆ, ಕೃಷಿಹೊಂಡ, ಬದುಗಳು ಹೀಗೆ ಹಾನಿಗೊಳಗಾಗಿರುವ ಯುದ್ಧೋಪಾಧಿಯಲ್ಲಿ ಪುನರ್ನಿಮಿಸಲು ಕ್ರಮಕೈಗೊಳ್ಳಬೇಕೆಂದು ರೈತ-ಕೃಷಿಕಾರ್ಮಿಕರ ಸಂಘಟನೆ (ಆರ್.ಕೆ.ಎಸ್.) ಜಿಲ್ಲಾ ಸಮಿತಿಯ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಗಣಪತರಾವ್ ಕೆ. ಮಾನೆ ಹಾಗೂ ಜಿಲ್ಲಾ ಕಾರ್ಯದರ್ಶಿಗಳಾದ ಮಹೇಶ್ ಎಸ್. ಬಿ. ಯವರು ಮಾತನಾಡಿ, ಕಲಬುರಗಿ ಜಿಲ್ಲೆಯನ್ನೊಳಗೊಂಡು ರಾಜ್ಯದಾದ್ಯಂತ ಶೇಂಗಾ, ಗೋವಿನ ಜೋಳ, ಹೆಸರು, ಉದ್ದು, ತೊಗರಿ, ಹತ್ತಿ, ಸಜ್ಜಾ, ಸೋಯಾ, ಹರ್ಷಿಣ ಹಾಗೂ ದಿನನಿತ್ಯದ ತರಕಾರಿಗಳು ನಾಶವಾಗಿದ್ದು ಸಾಲದ ಸುಳಿಯಿಂದ ಹೊರಬರಲಾಗದ ರೈತನು ಮತ್ತೆ ಸಾಲದ ಸುಳಿಯಲ್ಲಿಯೇ ಸಿಲುಕುವ ಪರಿಸ್ಥಿತಿ ಬಂದೊದಗಿದೆ ಎಂದರು.
ಆದ್ದರಿಂದ ರಾಜ್ಯ ಸರ್ಕಾರ ರೈತರ ಇಂತಹ ಕಷ್ಟದ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ರೈತರು ಬೆಳೆದ ಬೆಳೆ ನಷ್ಟಕ್ಕೆ ಹಾಗೂ ಅತಿಯಾದ ಮಳೆಯಿಂದ ಹಾಳಾಗಿರುವ ಹೊಲಗಳನ್ನು ತುರ್ತು ಸಮೀಕ್ಷೆಗಳನ್ನು ನಡೆಸಿ ಸರಿಯಾದ ಹಾಗೂ ಸಮರ್ಪಕ ನಷ್ಟಪರಿಹಾರವನ್ನು ನೀಡಬೇಕೆಂದು ಆಗ್ರಹಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಗುಂಡಣ್ಣ ಎಂ.ಕೆ., ವಿಶ್ವನಾಥ ಸಿಂಗೆ, ರಾಜೇಂದ್ರ ಅತನೂರು, ಸಹ ಕಾರ್ಯದರ್ಶಿಗಳಾದ ಮಲ್ಲಣ್ಣ ದಂಡಬಾ ಸದಸ್ಯರಾದ ರಾಘವೇಂದ್ರ ಅಲ್ಲಿಪೂರಕರ್, ಮಹಾದೇವ ಸ್ವಾಮಿ, ಸಾಬಣ್ಣ ನಾಟೀಕರ್, ಹರೀಶ ಸಂಗಾಣಿ, ಚೌಡಪ್ಪ, ಮಲ್ಲಿಕಾರ್ಜುನ ಗಂಜಿ, ಅಮೃತ ಚೌಹಾಣ, ಪರಶುರಾಮ್, ಮಲಂಗ್ ಸಾಬ್, ಕಂಠೆಪ್ಪಾ, ಬಸವರಾಜ, ಶಿವಲಿಂಗಪ್ಪ, ಶರಣಯ್ಯ ಗುತ್ತೇದಾರ್, ಶರಣು ಗುತ್ತೇದಾರ, ಮಹದೇವಪ್ಪಾ ಹೀಗೆ ಇನ್ನು ಹಲವಾರು ಜನ ರೈತರು ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.