ಕಲಬುರಗಿ: ರಾಜ್ಯದ ಬಹುತೇಕ ಕಡೆ ರೈತರು, ಸಾರ್ವಜನಿಕರು ನೆರೆ ಹಾವಳಿಯಿಂದ ಸಂಕಟಪಡುತ್ತಿರುವಾಗ ಅವರ ಸಹಾಯಕ್ಕೆ ನೇರವಾಗಿ ಸ್ಪಂದಿಸದ ಸರಕಾರ ವೈಮಾನಿಕ ಸಮೀಕ್ಷೆ ಹೆಸರಲ್ಲಿ ಆಕಾಶದಿಂದಲೇ ಕೈ ಬೀಸುತ್ತಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ನೆರೆಹಾವಳಿ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಬೆಳಗಾವಿ ಜಿಲ್ಲೆ ವೈಮಾನಿಕ ಸಮೀಕ್ಷೆ ಪ್ರಾರಂಭವಾದ ಬೆನ್ನಲ್ಲೆ ಟ್ವಿಟ್ ಮಾಡಿದ ಶಾಸಕರು ಜನರು ಬೀದಿಯಲ್ಲಿ ಇರುವಾಗ ಕೇವಲ ವೈಮಾನಿಕ ಸಮೀಕ್ಷೆ ಮಾಡುವ ಮೂಲಕ ಆಕಾಶದಿಂದಲೇ ಸರಕಾರ ಕೈಬೀಸುತ್ತಿದೆ ಎಂದಿದ್ದಾರೆ.
ನೆರೆ ಹಾವಳಿ ಪ್ರದೇಶಗಳಿಗೆ ಸಚಿವರು ಭೇಟಿ ನೀಡದ್ದನ್ನು ಪ್ರಸ್ತಾಪಿಸಿದ ಶಾಸಕರು, ರಾಜಕೀಯ ಲಾಭವಾಗುವ ಗಲಭೆಗಳಾದರೆ ಸಚಿವರು ಖುದ್ದಾಗಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ, ಪ್ರವಾಹದಿಂದ ತತ್ತರಿಸಿರುವ ಜನರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲ, ಸರಕಾರದ ಆದ್ಯತೆ ಏನು? ಎಂದು ಶಾಸಕ ಖಾರವಾಗಿ ಪ್ರಶ್ನಿಸಿದ್ದಾರೆ.