ಸಾಮಾಜಿಕ ಪಿಂಚಣಿ ಪಾವತಿಗೆ ಡಿ.ಬಿ.ಟಿ ಹೆಚ್ಚುಗೊಳಿಸಿ: ಭಗವಂತ ಖೂಬಾ

0
53

ಕಲಬುರಗಿ: ಡಿಜಿಟಲ್ ಇಂಡಿಯಾ ಸಾಕಾರಗೊಳಿಸಲು ಮತ್ತು ಸಾಮಾಜಿಕ ಪಿಂಚಣಿ ಪಡೆಯಲು ವೃದ್ಧರು ಇಲಾಖೆಗಳಿಗೆ ತಿರುಗಾಡುವುದನ್ನು ಹಾಗೂ ಮಾನವ ಸಂಪರ್ಕವನ್ನು ಕಡಿಮೆಗೊಳಿಸಲು ಡಿ.ಬಿ.ಟಿ. ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಪಿಂಚಣಿ ಜಮಾವಾಗುವಂತೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಾರ್ಯವನ್ನು ಮಿಷನ್ ಮಾದರಿಯಲ್ಲಿ ಪೂರ್ಣಗೊಳಿಸುವಂತೆ ಬೀದರ ಸಂಸದ ಭಗವಂತ ಖೂಬಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿನ ಐವಾನ–ಎ-ಶಾಹಿ ಅತಿಥಿಗೃಹದಲ್ಲಿ ಬೀದರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಪಿಂಚಣಿ ವಿಭಾಗ ಮತ್ತು ಅಂಚೆ ಇಲಾಖೆಯು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಬೀದರ ಜಿಲ್ಲೆಯಲ್ಲಿ ಈ ಕಾರ್ಯ ಈಗಾಗಲೆ ಆರಂಭಿಸಲಾಗಿದೆ ಎಂದರು.

Contact Your\'s Advertisement; 9902492681

ಆಳಂದ ಮತ್ತು ಚಿಂಚೋಳಿ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ತೊಗರಿ, ಉದ್ದು, ಹೆಸರು ಹಾಗೂ ಹತ್ತಿ ಬೆಳೆಗಳು ನಾಶವಾಗಿದ್ದು, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ವಿಮೆ ಒದಗಿಸಲು ಕ್ರಮ ವಹಿಸಬೇಕು. ಬೆಳೆ ನಾಶದ ಬಗ್ಗೆ ಕೃಷಿ ಅಧಿಕಾರಿಗಳು ವಿಮೆ ಸಂಸ್ಥೆಗೆ ಕೂಡಲೆ ಮಾಹಿತಿ ನೀಡಬೇಕು. ವಿಮಾ ಸಂಸ್ಥೆಯವರು ಕೃಷಿ ಇಲಾಖೆಯ ಪಿ.ಆರ್.ಗಳ ಸಹಾಯ ಪಡೆದು ಎಲ್ಲಾ ರೈತರಿಗೆ ವಿಮೆ ಮೊತ್ತ ಪಾವತಿಸಬೇಕು ಎಂದು ನಿರ್ದೇಶನ ನೀಡಿದರು.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಚಿಂಚೋಳಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ರೈತರ ನೋಂದಣಿಯಾಗದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಂಸದ ಭಗವಂತ ಖೂಬಾ ಅವರು ಈ ಸಂಬಂಧ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಚಿಂಚೋಳಿ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ಆಳಂದ ತಾಲೂಕಿನಲ್ಲಿ ಬಾಕಿ ಇರುವ 735 ಜನ ರೈತರ ನೋಂದಣಿ ಕಾರ್ಯ ಬೇಗ ಮುಗಿಸಬೇಕು ಎಂದ ಅವರು ಅಂಚೆ ಇಲಾಖೆಯ ಐ.ಪಿ.ಪಿ.ಬಿ. ನಲ್ಲಿ ಬ್ಯಾಂಕ್ ಖಾತೆಗೆ ತೆಗೆಯಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಸಭೆಯಲ್ಲಿ ಭಾಗವಹಿಸಿದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ಸಹಾಯಕ ನಿರ್ದೇಶಕಿ ಮಧುಮತಿ ಅವರು ಜಿಲ್ಲೆಯಲ್ಲಿ 306000 ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿದ್ದು, ಈ ಪೈಕಿ 188870 ಜನರಿಗೆ ಡಿ.ಬಿ.ಟಿ. ಮೂಲಕ ವೇತನ ಪಾವತಿಸಲಾಗುತ್ತಿದೆ. 41 ಸಾವಿರಗಳ ಖಾತೆಗೆ ಆಧಾರ್ ಜೋಡಣೆ ಮಾಡಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಆಳಂದ ಮತ್ತು ಚಿಂಚೋಳಿ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರು ತಮ್ಮ ತಾಲೂಕಿನಲ್ಲಿ ಆದ ಬಿತ್ತನೆ ಪ್ರಮಾಣ ಮತ್ತು ಮಳೆಯಿಂದ ಹಾನಿಗೊಳಗಾದ ಬೆಳೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆಸಿದ ಸಂಸದರು ಕೂಡಲೆ ಜಂಟಿ ಸರ್ವೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.

ಬೀದರ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಕಪ್ಪು ಪಟ್ಟಿಯಲ್ಲಿ ಸೇರಿದ್ದರಿಂದ ಕೆಲಸ ನಿಂತು ಆರು ತಿಂಗಳಾಗಿದ್ದು, ಅಲ್ಲಲ್ಲಿ ಗುಂಡಿ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೂಡಲೆ ಗುಂಡಿ ಮುಚ್ಚಿಸಬೇಕು. ಇದಲ್ಲದೆ ಕಮಲನಗರ ರಸ್ತೆಯಲ್ಲಿ ಬರುವ ಅರಣ್ಯ ಮೀಸಲು ಪ್ರದೇಶದÀಲ್ಲಿ ಬರುವ ಗುಂಡಿ ಮುಚ್ಚಲು ಸಹ ಕ್ರಮ ವಹಿಸಬೇಕು ಎಂದು ಸಂಸದರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ನಾಗಪ್ಪ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಬಿ.ಆರ್.ನನಜಗಿ, ಖಜಾನೆ ಇಲಾಖೆಯ ಜಂಟಿ ನಿರ್ದೇಶಕ ಅಶೋಕ, ಆಳಂದ ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here