ಕಲಬುರಗಿ: ನಗರದ 11 ಮತ್ತು ತಾಲೂಕು ಹಂತದ 7 ಸೇರಿದಂತೆ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಸೆಪ್ಟೆಂಬರ್ 7 ರಿಂದ 19ರ ವರೆಗೆ ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯನ್ನು ವಾರ್ಷಿಕವಾಗಿ ನಡೆಯುವ ಪರೀಕ್ಷೆಯಂತೆ ಗಂಭೀರತೆ ಕಾಯ್ದುಕೊಂಡು ಸುಲಲಿತವಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸೂಚಿಸಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಾ, ಪರೀಕ್ಷೆ ಸುಗಮವಾಗಿ ನಡೆಯಲು 10 ಜನ ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ಪರಿವೀಕ್ಷಣಾಧಿಕಾರಿಗಳನ್ನು ಮತ್ತು ವೀಕ್ಷಕರನ್ನು ನೇಮಿಸಲಾಗುತ್ತದೆ. ಎಲ್ಲಿಯಾದರು ನಕಲು ಕಂಡುಬಂದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರೆ ಜವಾಬ್ದಾರರಾಗುತ್ತಾರೆ ಎಂದು ಡಾ.ಶಂಕರ ವಣಿಕ್ಯಾಳ ತಿಳಿಸಿದರು.
ಕೊರೋನಾ ಹಿನ್ನೆಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎರಡು ಕೋಣೆಗಳನ್ನು ಕಂಟೇನ್‍ಮೆಂಟ್ ವಲಯದಿಂದ ಬಂದಿರುವ, ಕೊರೋನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಬಂದ ಅಥವಾ ಕೊರೋನಾ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮೀಸಲಿರಿಸಬೇಕು. ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಇನ್ನೀತರರಿಗೆ ಪ್ರವೇಶ ನಿಷೇಧವಿರುತ್ತದೆ ಎಂದರು.
ಪರೀಕ್ಷೆ ಸಿ.ಸಿ.ಟಿ.ವಿ. ಮತ್ತು ವಿಡಿಯೋಗ್ರಾಫಿ ಕಣ್ಗಾವಲಿನಲ್ಲಿ ನಡೆಯಲಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪ್ರತ್ಯೇಕ ಮಹಿಳಾ ಮತ್ತು ಪುರುಷ ಪೊಲೀಸರನ್ನು ಫ್ರೀಸ್ಕಿಂಗ್‍ಗಾಗಿ ನೇಮಿಸಲಾಗುವುದು. ಯಾವುದೇ ಅಕ್ರಮಕ್ಕೆ ಇಲ್ಲಿ ಅವಕಾಶವಿಲ್ಲ. ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ಜೊತೆಗೆ ಇತರೆ ಯಾವುದಾದರು ಒಂದು ಗುರುತಿನ ಚೀಟಿ ತರಬೇಕು ಎಂದು ಸ್ಪಷ್ಟಪಡಿಸಿದರು.
ಕೊರೋನಾ ಮುಂಜಾಗ್ರತೆ ಇರಲಿ: ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪರೀಕ್ಷೆ ನಡೆಯುವ ಮುನ್ನ ಪರೀಕ್ಷಾ ಕೋಣೆ ಸ್ಯಾನಿಟೈಸ್ ಮಾಡಿಸಬೇಕು. ವಿದ್ಯಾರ್ಥಿಗಳನ್ನು ಡಿಜಿಟಲ್ ಥರ್ಮೋಮೀಟರ್‍ನಿಂದ ಪರೀಕ್ಷಿಸಬೇಕು. ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರದೊಂದಿಗೆ ಪರೀಕ್ಷೆ ಬರೆಯಲು ಆಸನ ನಿಗದಿಪಡಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಜನಸಂದಣಿಯಾಗದಂತೆ ಎಚ್ಚರವಹಿಸಬೇಕು.
ಮೋಬೈಲ್ ನಿಷೇಧ: ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಮೊಬೈಲ್, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಬ್ಲ್ಯೂಟೂತ್ ಡಿವೈಸ್, ಪೇಜರ್, ವೈರಲೆಸ್, ಕ್ಯಾಲ್ಕುಲೇಟರ್ ಇತರೆ ಮೊದಲಾದ ಉಪಕರಣಗಳು, ಸ್ಲೈಡರೂಲ್, ಮಾರ್ಕರ್, ಲಾಗ್ ಟೇಬಲ್, ವೈಟ್ ಫ್ಲೂಯಿಡ್, ಬ್ಲೇಡ್, ಎರೆಸರ್, ವಾಚ್ ಕ್ಯಾಲ್ಕುಲೇಟರ್, ಪಠ್ಯ ಪುಸ್ತಕ, ನಕಲು ಚೀಟಿಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಡಿಡಿಪಿಯು ಶಿವಶರಣಪ್ಪ ಮೂಳೇಗಾಂವ ಅವರು ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆಗಳನ್ನು ವಿವರಿಸಿದರು. ಸಭೆಯಲ್ಲಿ ಡಿ.ಎಸ್.ಪಿ ಜೇಮ್ಸ್ ಮಿನೇಜಸ್ ಸೇರಿದಂತೆ ಸಹಾಯಕ ಆಯುಕ್ತರು, ತಹಶೀಲ್ದಾರರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವೀಕ್ಷಕರು ಮತ್ತು ಮಾರ್ಗಾಧಿಕಾರಿಗಳು ಇದ್ದರು.