ಕಲಬುರಗಿ: ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ಮಧ್ಯಪ್ರದೇಶ ಬಿಜೆಪಿ ಸರಕಾರದ ಪೊಲಿಸರು ಲಾಠಿಚಾರ್ಜ್ ಮಾಡಿರುವ ಘಟನೆಯನ್ನು ಖಂಡಿಸಿ ಇಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್ (AIDYO) ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಪ್ರತಿಭಟನಾ ದಿನದ ಕರೆಯ ಮೇರೆಗೆ ಮಧ್ಯಪ್ರದೇಶದ ವಿವಿಧ ಜಿಲ್ಲೆಗಳ 1500ಕ್ಕೂ ಹೆಚ್ಚು ಯುವಕರು ತಮ್ಮ ಜಿಲ್ಲೆಗಳಿಂದ ನಿರಂತರ ಹಲವಾರು ಪ್ರತಿಭಟನೆಗಳ ನಂತರ ಭೂಪಾಲನಲ್ಲಿ ನಿನ್ನೆ ಸಭೆ ಸೇರಿದ್ದರು. ಎಲ್ಲರಿಗೂ ಉದ್ಯೋಗ ನೀಡಬೇಕು. SSC, ರೈಲ್ವೆ ಶಿಕ್ಷಕರು ಮತ್ತು ಪೊಲೀಸ್ ಇಲಾಖೆ ನೇಮಕಾತಿ ಪರೀಕ್ಷೆ ಫಲಿತಾಂಶ ಘೋಷಣೆ ಮಾಡಬೇಕು. ಸರ್ಕಾರಿ ಹುದ್ದೆಗಳು ಭರ್ತಿ ಮಾಡಬೇಕು ಹೀಗೆ ಹಲವು ಬೇಡಿಕೆಗಳೊಂದಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಪತ್ರ ನೀಡಲು ಯುವಕರು ಮುಂದಾಗಿದ್ದರು ಎಂದು ಸಂಘಟನೆಯ ಮುಖಂಡರಾದ ಭೀಮಾಶಂಕರ್ ಪಾಣೇಗಾಂವ್ ತಿಳಿಸಿದರು.
ಆದರೆ ಅಹವಾಲು ಕೇಳುವ ಬದಲು ಮಧ್ಯಪ್ರದೇಶದ ಪೊಲೀಸರು ಅವರ ಮೇಲೆ ಕ್ರೂರ ಲಾಠಿಚಾರ್ಜ್ ಮಾಡಿದ್ದಾರೆ. ಇದರಿಂದ ಅನೇಕರು ಗಾಯಗೊಂಡಿದ್ದಾರೆ ಹೋರಾಟದ ನಾಯಕರು ಮಧ್ಯಪ್ರದೇಶAIDYO ರಾಜ್ಯ ಕಾರ್ಯದರ್ಶಿ ಪ್ರಮೋದ್ ನಾಮದೇವ್ ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
ನಿಂಗಣ್ಣ ಜಂಬಗಿ, ಜಗನಾಥ್ ಎಸ್. ಎಚ್, ಅಂಬಿಕಾ ಗುತ್ತೇದಾರ್, ಈಶ್ವರ್ ಇ. ಕೆ, ಸಿದ್ದು ಚೌಧರಿ, ಪ್ರವೀಣ ಬಣಮಿಕರ, ಮಲ್ಲು ಧರಿಯಪುರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.