ಕಲಬುರಗಿ: ‘ನೈಜ ಬದುಕಿನ ಅನಾವರಣಗೊಂಡಿರುವ ಕಾದಂಬರಿ ಎಚ್.ಟಿ. ಪೋತೆಯವರ ‘ಬಯಲೆಂಬ ಬಯಲು’. ಈ ಕಾದಂಬರಿಯನ್ನು ತಳಸಮುದಾಯಗಳ ಬವಣೆಗಳ ನುಡಿಯ ಆವಿಷ್ಕಾರ ಎಂತಲೇ ಹೇಳಬಹುದು. ಬುದ್ಧ, ಬಸವ, ಅಂಬೇಡ್ಕರ್, ಫುಲೆ ಅವರ ಪರೋಕ್ಷ ಪ್ರಭಾವ ಈ ಕಾದಂಬರಿಯಲ್ಲಿ ಕಾಣುತ್ತದೆ. ರೂಕ್ಷ ಬದುಕಿನ ರೂಕ್ಷ ಅನಾವರಣ. ಇದು ಕಟ್ಟುಕತೆಯಲ್ಲ. ನೈಜ ಬದುಕಿನ ಅನಾವರಣ ಕಾದಂಬರಿಯಲ್ಲಿದೆ. ಬರವಣಿಗೆಯಲ್ಲಿ ವ್ಯಕ್ತಿತ್ವವೂ ಕಾಣುತ್ತದೆ.’ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಕವಿ ದೊಡ್ಡರಂಗೇಗೌಡರು ಅಭಿಪ್ರಾಯಪಟ್ಟರು.
ಕುಟುಂಬ ಪ್ರಕಾಶನ ಹಾಗೂ ಬುಕ್ ಬ್ರಹ್ಮ ವೆಬ್ ಜಂಟಿಯಾಗಿ ಆಯೋಜಿಸಿದ್ದ ಪ್ರೊ.ಎಚ್.ಟಿ. ಪೋತೆ ಅವರ ‘ಬಯಲೆಂಬ ಬಯಲು ಬಯೋಪಿಕ್ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದ ಅವರು,‘ದೇಸಿ ನೆಲೆಯಿಂದ ಬರುವ ಲೇಖಕರ ಸವಾಲು ಅನುಭವವನ್ನು ಬರೆಯುವಾಗ ಭಾಷೆ ಶಿಷ್ಟಭಾಷೆಗೆ ಹೊರಳುತ್ತೇವೆ. ಆದರೆ ಈ ಕೃತಿಯಲ್ಲಿ ಅಪ್ಪಟ ದೇಶಿಭಾಷೆಯನ್ನೇ ಬಳಸಿದ್ದಾರೆ. ಏಕಕಾಲಕ್ಕೆ ಮೂರು ತಲೆಮಾರಿನ ಕುರಿತು ಈ ಬರವಣಿಗೆಯಲ್ಲಿ ವಾಸ್ತವತೆ ಇದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತಕುಲಪತಿಗಳಾದ ಮಲ್ಲೇಪುಂ ಜಿ. ವೆಂಕಟೇಶ ಅವರು ಮಾತನಾಡಿ ‘ಕನ್ನಡದ ಮೊಟ್ಟಮೊದಲ ದಲಿತ ಬಯೋಪಿಕ್ ಕಾದಂಬರಿ ಇದು. ಮೂರು ತಲೆಮಾರುಗಳ ಅನನ್ಯ ಸಂಬಂಧವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದರು.
ಹಿರಿಯ ಲೇಖಕರಾದ ಕೆ.ಇ. ರಾಧಾಕೃಷ್ಣ ಹಾಗೂ ಪ್ರೊ.ಎಚ್.ಟಿ. ಪೋತೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.