ಕಲಬುರಗಿ: ಮಧ್ಯಮೋತ್ತರ ಎತ್ತರದ ನಿಲುವು, ಮುಗುಳ್ನಗೆಯ ಮುಖ, ಮೈತುಂಬ ಇಲಕಲ್ ಸೀರೆ, ಹಣೆತುಂಬ ಮೂರು ಬೆರಳ ವಿಭೂತಿಯ ತೇಜಸ್ಸು, ಎದುರಿಗಿರುವವರ ಎದೆಯೊಳಗೇನಿದೆ ಎಂದು ಬಗಿದು ನೋಡುವ ಕಣ್ಗಳ ಕಾಂತಿ, ಹಿತಮಿತ ಮೃದು ವಚನ ವೈಖರಿಯ ಡಾ. ಜಯಶ್ರೀ ದಂಡೆಯವರು ಕನ್ನಡ ನಾಡು ಕಂಡ ಅಪರೂಪದ ಶರಣ ಸಾಹಿತಿ ಎಂದು ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಜಿ. ಪಾಟೀಲ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಜಯಶ್ರೀ ದಂಡೆ ಅವರ ಬದುಕು ಬರಹ ವಿಚಾರ ಸಂಕಿರಣ ಮತ್ತು ಅಭಿನಂದನಾ ಸಮಾರಂಭದಲ್ಲಿ ಜಯಶ್ರೀ ದಂಡೆಯವರ ಜೀವನ ಸಾಧನೆ ಕುರಿತು ಮಾತನಾಡಿದ ಅವರು, ಡಾ. ಜಯಶ್ರೀ ದಂಡೆಯವರ ಸಾಹಿತ್ಯಕ ಸೇವೆ ಅಪಾರ ವ್ಯಾಪ್ತಿ ಪಡೆದಿದೆ ಎಂದು ಹೇಳಿದರು.
ಸದಾ ಅಧ್ಯಯನ, ಅಧ್ಯಾಪನಗಳಲ್ಲಿ ತೊಡಗುವ ಮೂಲಕ ಸಾಹಿತ್ಯದ ವಿವಿಧ ಪ್ರಕಾರಗಳು ಸೇರಿದಂತೆ ಶರಣ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಉದ್ಯೋಗದಲ್ಲಿ ಕರ್ತವ್ಯನಿಷ್ಠೆ, ಸಮಯ ಪಾಲನೆ, ಬದುಕಿನಲ್ಲಿ ಬಂದ ಎಂತಹ ಕ್ಲೀಷ್ಟ ಸಂದರ್ಭಗಳನ್ನು ಎದುರಿಸುವ ಸಾರ್ಥಕತೆ, ಅಪಾರ ತಾಳ್ಮೆ, ಸಾತ್ವಿಕ ವ್ಯಕ್ತಿತ್ವದ, ಸರಳ, ಸೌಹಾರ್ದ ಬದುಕು ಸಾಗಿಸುತ್ತಿದ್ದಾರೆ ಎಂದು ಅವರ ಜೀವನ ಸಾಧನೆಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು.
ಡಾ. ಜಯಶ್ರೀ ದಂಡೆಯವರ ಶರಣ ಸಾಹಿತ್ಯ ಕುರಿತು ಪತ್ರಕರ್ತ, ಲೇಖಕ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ವಚನ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿರುವ ಡಾ. ಜಯಶ್ರೀ ದಂಡೆಯವರು ಈ ಕ್ಷೇತ್ರದಲ್ಲಿವಿಶಿಷ್ಟ ಛಾಪು ಮೂಡಿಸಿದ್ದಾರೆ. ವಚನಕಾರರ ಬದುಕು-ಬೋಧನೆಗಳ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಬದ್ಧತೆಯ ಬರವಣಿಗೆ ಮಾಡಿದ್ದಾರೆ ಎಂದು ಹೇಳಿದರು.
ವಚನ ಸಾಹಿತ್ಯದ ಹೊಸ ಮಾತಿನಿಂದಾಗಿ ಮೇದಿನಿಗೆ ಬೆಳಕು ಬಂದಂತೆ ಎಂದು ಜಾನಪದ ತ್ರಿಪದಿಯೊಂದು ಹೇಳುವಂತೆ ನಡೆ-ನುಡಿಯ ವಚನ ಸಾಹಿತ್ಯ, ಸಿದ್ಧಾಂತದ ಬೆನ್ನು ಹತ್ತಿ ಅದರಲ್ಲಿ ಅಪಾರ ಸಾಧನೆ ಮಾಡಿದ ದಂಡೆಯವರು ಯಾವುದೇ ವಾದ-ವಿವಾದಲ್ಲಿ ಸಿಲುಕದೆ ತಮ್ಮ ಪಾಡಿಗೆ ತಾವು ಸಾಹಿತ್ಯ ಕೃಷಿಗೈದವರು. ಇವರ ೫೦ ಕೃತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಶರಣ ಸಾಹಿತ್ಯಕ್ಕೆ ಸಂಬಂಧಿಸಿದವುಗಳಾಗಿವೆ ಎಂಬುದು ಗಮನಾರ್ಹ ಸಂಗತಿ ಎಂದರು.
ಡಾ. ಜಯಶ್ರೀ ದಂಡೆಯವರ ಸಂಶೋಧನಾ ಸಾಹಿತ್ಯ ಕುರಿತು ಮಾತನಾಡಿದ ಜಿಲಾನಾಬಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ವಿಶ್ವನಾಥ ಹೊಸಮನಿ ಮಾತನಾಡಿ, ಶರಣರ ಬೆಡಗಿನ ವಚನಗಳ ಪರಿಭಾಷಾ ಕೋಶ ಬರೆದ ಡಾ. ದಂಡೆಯವರು ಶರಣರ ವಿಚಾರಧಾರೆ ವಿವರಿಸುವುದಲ್ಲದೆ ಶರಣರ ನಿಜವಾದ ವ್ಯಕ್ತಿತ್ವ ಕಟ್ಟಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ವಚನ ಸಾಹಿತ್ಯದ ಅಧ್ಯಯನಾಸಕ್ತರಿಗೆ ಎದುರಾಗುವ ಅನೇಕ ಸಮಸ್ಯೆ-ಸವಾಲುಗಳಿಗೆ ಸರಳ ಪರಿಹಾರ ಸೂಚಿಸುವದರ ಜೊತೆಗೆ ಸಂಶೋಧನಾ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ವಚನ ವ್ಯಾಖ್ಯಾನ, ವಚನ-ನಿರ್ವಚನಗಳಲ್ಲಿ ಸಿದ್ಧಹಸ್ತರಾದ ಇವರ ಬರವಣಿಗೆ ಸಂಶೋಧಕರಿಗೆ ಆಕರ ಗ್ರಂಥಗಳಾಗಿ ಪರಿಣಮಿಸಿವೆ ಎಂದು ವಿವರಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ಕಲಬುರಗಿ ಬಸವ ಸಮಿತಿಯ ಡಾ. ವಿಲಾಸವತಿ ಖೂಬಾ ದಂಡೆ ದಂಪತಿಯ ಕಾರ್ಯಕ್ಷಮತೆಯನ್ನು ಕೊಂಡಾಡಿದರು. ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ ಅಧ್ಯಕ್ಷತೆ ವಹಿಸಿದ್ದರು. ಡಾ. ನಾಗರಾಜ ದಂಡೋತಿ ನಿರೂಪಿಸಿದರು. ಡಾ. ಶ್ರೀಶೈಲ ನಾಗರಾಳ ಸ್ವಾಗತಿಸಿ ಆಶಯ ಭಾಷಣ ಮಾಡಿದರು. ಡಾ. ಶಿವಪುತ್ರ ಮಾವಿನ ವಂದಿಸಿದರು.
ನಂತರ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಸ್.ಆರ್. ನಿರಂಜನ್ ಮಾತನಾಡಿ, ಅಧ್ಯಾಪಕರಾದವರು ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಕೊಡುವುದಾದರೆ ಭಾರತದ ಭವಿಷ್ಯ ಸುಭದ್ರವಾಗಬಲ್ಲುದು. ಅಂತಹ ಕಾರ್ಯ ಮಾಡಿದ ದಂಡೆಯವರ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಶುಭ ಹಾರೈಸಿದರು. ಹೈ.ಕ. ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಉನ್ನತವಾಗಿದ್ದು ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ತಿಳಿಸಿದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮ.ಗು. ಬಿರಾದಾರ ಮಾತನಾಡಿ, ಸರ್ಕಾರಗಳು ಕನ್ನಡದ ಕಲಿಕೆ ವ್ಯಾಪ್ತಿಯನ್ನು ಹೆಚ್ಚು ಮಾಡಿದ್ದಾರೆ. ಆದರೆ ಅದಕ್ಕೆ ಸೂಕ್ತ ಸೌಲಭ್ಯ ಒದಗಿಸುತ್ತಿಲ್ಲ. ಕನ್ನಡಕ್ಕೆ ಬೇರೆ ಬೇರೆ ಅವಕಾಶಗಳನ್ನು ಒದಗಿಸವ ನಿಟ್ಟಿನಲ್ಲಿ ಸರ್ಕಾರ ಮತ್ತು ಕನ್ನಡ ಅಧ್ಯಾಪಕರು ಮುತೂವರ್ಜಿವಹಿಸಬೇಕು ಎಂದು ಹೇಳಿದರು. ಇದಾದ ಬಳಿಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಡಾ. ಕಲ್ಯಾಣರಾವ ಪಾಟೀಲ ನಿರೂಪಿಸಿ ವಂದಿಸಿದರು.