ಶಹಾಪುರ: ಜಗತ್ತಿನಲ್ಲಿ ಅನಕ್ಷರತೆ ಇನ್ನಿಲ್ಲದಂತೆ ಮಾಡಿ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಲಿ ಎಂಬುದೇ ಸಾಕ್ಷರತೆಯ ಮುಖ್ಯ ಉದ್ದೇಶವಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು.
ಶಹಾಪುರ ತಾಲ್ಲೂಕು ಸಾಕ್ಷರತಾ ಪ್ರೇರಕರು ಹಾಗೂ ಸಂಯೋಜಕರ ಒಕ್ಕೂಟದ ವತಿಯಿಂದ ನಗರದ ದೇಶಮುಖ ಬಡಾವಣೆಯಲ್ಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣದ ಮಹತ್ವ ಸಾರುವುದರ ಜೊತೆಗೆ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಲಿ ಎಂದು ೧೯೬೫ ರಲ್ಲಿ ಯುನೆಸ್ಕೊದಲ್ಲಿ ಸೆಪ್ಟೆಂಬರ್ ೮ ರಂದು ವಿಶ್ವ ಸಾಕ್ಷರತಾ ದಿನ ಎಂದು ಘೋಷಿಸಲಾಯಿತು ಎಂದು ನುಡಿದರು.ಇನ್ನೋರ್ವ ಸಾಹಿತಿಗಳಾದ ಗುರುಬಸಯ್ಯ ಗದ್ದುಗೆ ಮಾತನಾಡಿ ೨೦೩೦ ರೊಳಗೆ ಶಿಕ್ಷಣದ ಮೂಲಕ ಇಡೀ ವಿಶ್ವವನ್ನೇ ಬಡತನ ಮುಕ್ತ ಮಾಡಬೇಕು ಹಾಗೂ ಜಗತ್ತಿನೆಲ್ಲೆಡೆ ಶಿಕ್ಷಣದಿಂದ ಶಾಂತಿ ನೆಲೆಯೂರಬೇಕೆಂಬುದೆ ಮುಖ್ಯ ಉದ್ದೇಶದ ಈ ಸಪ್ತಾಹ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಶಹಾಪುರ ತಾಲ್ಲೂಕು ಘಟಕದ ಅಧ್ಯಕ್ಷರಾದ ಈರಣ್ಣ ಹಾದಿಮನಿ,ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಬಸವರಾಜ ಸಿನ್ನೂರ ತಾಲ್ಲೂಕು ಸಂಯೋಜಕರಾದ ಶರಣಮ್ಮ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾರಂಭದಲ್ಲಿ ರಾಘವೇಂದ್ರ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳಾಡಿದರು,ಮಲ್ಲಣ್ಣ ಹೊಸಮನಿ ಸ್ವಾಗತಿಸಿದರು ಚಂದ್ರಕಲಾ ವಂದಿಸಿದರು