ಜೇವರ್ಗಿ: ಹನ್ನೆರಡನೆಯ ಶತಮಾನ ಕನ್ನಡ ಇತಿಹಾಸದ ಬೆಳಕಿನ ಸಂಪುಟ. ಎತ್ತ ನೋಡಿದರೂ ಶಿವಶರಣರು-ಶಿವಶರಣೆಯರು ಕಾಣುವ ಸುವರ್ಣ ಯುಗ ಅದು. ಅವರ ಕೈಯೊಳಗೆ ಸತ್ಯ ಶುದ್ಧವಾದ ಕಾಯಕ, ಮನದಲ್ಲಿ ಮಹಾದೇವನ ನೆನಹು, ಮನೆಯೊಳಗೆ ಜಂಗಮ ದಾಸೋಹ ಇರುತ್ತಿತ್ತು. ಸಮೂಹ, ಸಮಾಜ ಚಿಂತಕರಾಗಿದ್ದ ಶರಣರ ಅಂತರಂಗದ ಅರಿವಿನ ಪರದೆಯ ಮೇಲಿನ ಮುಕ್ತಕಗಳೇ ವಚನಗಳು. ಶರಣರಿಗೆ ವ್ಯಕ್ತಿಗಿಂತ ವ್ಯಕ್ತಿತ್ವವೇ ದೊಡ್ಡದಾಗಿತ್ತು. ಅವರಿಗೆ ಕೆಲಸ ಕಾಯಕವಾಗಿತ್ತು. ನರ ಹರನಾಗಿದ್ದ. ಜೀವ-ಶಿವನಾಗಿದ್ದ. ಮಾನವ-ಮಹಾದೇವನಾಗಿದ್ದ. ಮಾತು ಮಂತ್ರವಾಗಿತ್ತು. ಅನ್ನ ಪ್ರಸಾದವಾಗಿತ್ತು ಎಂದು ಶರಣೆ ಸಾಕ್ಷಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಪಟ್ಟಣದ ನೀಲಕಂಠ ಅವಂಟಿಯವರ ಮನೆಯಲ್ಲಿ ಅವರ ತಂದೆಯವರ ಸ್ಮರಣೋತ್ಸವ ನಿಮಿತ್ತ ಬಸವ ಕೇಂದ್ರದ ಮಹಿಳಾ ಘಟಕವು ಶುಕ್ರವಾರ ಸಂಜೆ ಹಮ್ಮಿಕೊಂಡ ಷಣ್ಮುಖ ಶಿವಯೋಗಿಗಳ ವಚನ ಬಿತ್ತನೆ ವಿಶೇಷ ಕಾಐಕ್ರಮದಲ್ಲಿ ಷಣ್ಮುಖ ಶಿವಯೋಗಿಗಳ “ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ ಅಸತ್ಯದ ಮನೆಯಲ್ಲಿ ಶಿವನಿರ್ಪನೆ” ವಚನವನ್ನು ವಿಶ್ಲೇಷಣೆ ಮಾಡುತ್ತ, ಮೊದಲ ವಚನಕಾರ ಮುದನೂರಿನ ದೇವರ ದಾಸಿಮಯ್ಯ ಹಾಗೂ ಕೊನೆಯ ವಚನಕಾರ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ನಮ್ಮ ಸಗರನಾಡಿನವರು ಎಂಬುದು ಬಹಳ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಜೇವರ್ಗಿಯ ಷಣ್ಮುಖ ಶಿವಯೋಗಿಗಳು ಕಲ್ಯಾಣ ಕ್ರಾಂತಿಯ ೩೦೦ ವರ್ಷಗಳ ನಂತರ ಇದೇ ನೆಲದಲ್ಲಿ ಜನಿಸಿದ ಒಬ್ಬ ಅವತಾರಿ ಪುರುಷ. ಇವರನ್ನು ಕೊನೆಯ ವಚನಕಾರ ಎಂದು ಗುರುತಿಸಲಾಗುತ್ತದೆ. ಅಭಿನವ ಚೆನ್ನಬಸವಣ್ಣ, ವಚನ ವಸಂತದ ಕೋಗಿಲೆ, ಜಡದಲ್ಲಿ ಜಂಗಮ, ಯೋಗಿ, ಶಿವಯೋಗಿ ಎಂಬಿತ್ಯಾದಿ ಬಿರುದಾಂಕಿತದಿಂದ ಇವರನ್ನು ಕರೆಯಲಾಗುತ್ತದೆ. ಜೇವರ್ಗಿಯ ಮಲಶೆಟ್ಟಿ-ದೊಡ್ಡಮಾಂಬೆ ದಂಪತಿಯ ಉದರದಲ್ಲಿ ಹುಟ್ಟಿ ಜೇವರ್ಗಿಯಲ್ಲೇ ಲಿಂಗೈಕ್ಯರಾದ ಏಕೈಕ ಶರಣ ಇವರು. ಇಡೀ ಭಾರತವನ್ನೆಲ್ಲ ೧೨ ಸಲ ಸುತ್ತಾಡಿ ಲೋಕದ ಜ್ಞಾನದ ಜೊತೆಗೆ ಗುರು ಅಖಂಡೇಶ್ವರರ ಮೂಲಕ ಅಧ್ಯಾತ್ಮದ ಹಸಿವು ಹಿಂಗಿಸಿಕೊಂಡ ಷಣ್ಮುಖ ಶಿವಯೋಗಿಗಳು ಕೋಳಕೂರು, ಕಟ್ಟಿ ಸಂಗಾವಿ, ಚಿಕ್ಕ ಕೌಲಗಿ, ಜೋಗಿಕೊಳ್ಳ ಮುಂತಾದ ಸ್ಥಳಗಳಲ್ಲಿ ಬಸವ ಪುರಾಣ, ಅನುಷ್ಠಾನ, ಸಾಧನೆ, ಸಿದ್ಧಿ, ತಪಸ್ಸು ಮಾಡಿದ ಇವರು ಅಭಿನವ ಚೆನ್ನಬಸವಣ್ಣ ಎಂದೇ ಖ್ಯಾತರಾಗಿದ್ದರು ಎಂದು ವಿವರಿಸಿದರು.
೧೨ನೇ ಶತಮಾನದಲ್ಲಿ ಶರಣರು ವಚನ ರಚನೆ ಮಾಡಿದಂತೆ ೧೭ನೇ ಶತಮಾನದಲ್ಲಿ ಅಖಂಡೇಶ್ವರ ವಚನಾಂಕಿತದಲ್ಲಿ ೭೨೨ ವಚನ ರಚನೆ ಮಾಡಿದುದಲ್ಲದೆ ಶರಣರ ವಚನಗಳ ಕಟ್ಟುಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸುವ ಮೂಲಕ ಬಸವಣ್ಣನೇ ನಿಜವಾದ ಜಗದ್ಗುರು ಎಂದು ಕರೆದು ಬಸವಣ್ಣನವರ ಭೂಮ ವ್ಯಕ್ತಿತ್ವವನ್ನು ನಾಡಿಗೆ ಪರಿಚಯಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಪ್ರಸ್ತುತ ಐದು ಸಾಲುಗಳ ಈ ವಚನ ಸತ್ಯದ ಮಹತ್ವವನ್ನು ಕುರಿತು ಹೇಳುತ್ತದೆ. ಸತ್ಯಂ, ಶಿವಂ, ಸುದಂರಂ ಎನ್ನುವಂತೆ ಸತ್ಯ ಶಿವಮಯವಾಗಿರುತ್ತದೆ. ಆ ಕಾರಣದಿಂದಲೇ ನಮ್ಮ ವ್ಯಕ್ತಿತ್ವಕ್ಕೆ ಮೆರಗು ತಂದುಕೊಡುತ್ತದೆ.
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಎನ್ನುವ ಗಾದೆಮಾತು ಸತ್ಯದ ಹಾದಿ ತುಂಬಾ ಕಠಿಣವಾದುದು. ಆದರೆ ಸತ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಶಾಶ್ವತವಾದ ಸುಖ ಪಡೆಯಬಹುದು ಎಂಬುದನ್ನು ತಿಳಿಸುತ್ತದೆ. ಅಂತೆಯೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯವೇ ದೇವರು ಎಂದು ಕರೆದಿದ್ದಾರೆ. ಸತ್ಯದಿಂದಲೇ ಶಿವನ ಒಲುಮೆ ಸಾಧ್ಯವಾಗುತ್ತದೆ. ಶಿವನು ಸತ್ಯವಂತರ ಮನೆಯಲ್ಲಿ ನೆಲೆಸಿರುತ್ತಾನೆ ವಿನಃ ಆತ ಅಸತ್ಯದ ಮನೆಯವರ ಹತ್ತಿರವೂ ಸುಳಿಯಲಾರ. ಆದುದರಿಂದ ಶಿವ (ಅಖಂಡೇಶ್ವರ ಲಿಂಗ)ನನ್ನು ಒಲಿಸಬೇಕಾದರೆ ಮೊದಲಿಗೆ ಸತ್ಯದ ಆಚರಣೆಯನ್ನು ಅನುಸರಿಸಬೇಕು, ಅನುಸಂಧಾನಿಸಬೇಕು. ಅಂತಹ ಸತ್ಯವಂತ, ಸದ್ಭಕ್ತರ ಮನೆಯಲ್ಲಿ ಶಿವನು ವಾಸವಾಗಿರುತ್ತಾನೆ ಎಂದು ಷಣ್ಮುಖ ಶಿವಯೋಗಿಗಳು ತಿಳಿಸುತ್ತಾರೆ ಎಂದು ಅವರು ಹೇಳಿದರು.
ಶರಣೆ ಮಹಾನಂದ ಹಿರೇಗೌಡ ಅಧ್ಯಕ್ಷತೆ ವಹಿಸಿದ್ದರು. ಶರಣೆ ಮಹಾನಂದ ಹುಗ್ಗಿ, ಶರಣೆ ಕಾವೇರಿ ಕಟ್ಟಿ ಸಂಗಾವಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀದೇವಿ ಶರಣಬಸವ ಕಲ್ಲಾ, ನೀಲಕಂಠ ಅವಂಟಿ ಪರಿವಾರದ ಸದಸ್ಯರು ಹಾಗೂ ಬಸವಕೇಂದ್ರದ ಸದಸ್ಯೆಯರು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜೇಶ್ವರಿ ಮಾಲಿ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ಹಿಪ್ಪರಗಿ ನಿರೂಪಿಸಿದರು. ಸರಸ್ವತಿ ಬಿರಾದಾರ ಸ್ವಾಗತಿಸಿದರು. ಮಲ್ಲಮ್ಮ ಅವಂಟಿ, ಗಂಗೂ ಆವಂಟಿ, ಲೀಲಾವತಿ ಅರಳಿ, ಬಸವಕೇಂದ್ರದ ಅಧ್ಯಕ್ಷರು ಶರಣೆ ರಾಜೇಶ್ವರಿ ಪಾಟೀಲ್ , ಶರಣೆ ಲೀಲಾವತಿ ಅರಳಿ , ಶರಣೆ ಗಂಗಾಂಬಿಕಾ ಅವಾಂಟಿ , ಶರಣೆ ಮಲ್ಲಮ್ಮ ಹಳಿಮನಿ, ಶರಣೆ ಬಸಮ್ಮ ಅರಳಗುಂಡಗಿ , ಶರಣೆ ತ್ರಿವೇಣಿ ಕುಳಗೇರಿ ಸರಸ್ವತಿ ಬಿರಾದರ್ ಜ್ಯೋತಿ ಹಿಪ್ಪರಗಿ , ಲಕ್ಷ್ಮಿ ಬಂಟನೂರ , ಶರಣೆ ನಾಗಲಾಂಬಿಕೆ ಹಂಗರಗಿ , ಪ್ರೇಮ ಶಿವಣಿ ಕರ್. ಸುವರ್ಣ ರಾಂಪುರ್ ಸಾವಿತ್ರಿ ಹಳ್ಳಿ.ಪ್ರೇಮ ಕಲ್ಲ . ಮಾಯಾ ಪಾಟೀಲ. ಬೋರಮ್ಮ ಚನ್ನೂರು. ಶಾರದಾ ಪಾಟೀಲ್, ಕಸಾಪ ತಾಲ್ಲೂಕು ಅಧ್ಯಕ್ಷ ಶಿವನಗೌಡ ಹಂಗರಗಿ, ಬಸವ ಕೇಂದ್ರದ ಅಧ್ಯಕ್ಷ ಶರಣ ಬಸವ ಕಲ್ಲಾ ಇತರರು ಇದ್ದರು.