ವಾಡಿ: ಮಾದಿಗರಿಗೆ ಒಳಮೀಸಲಾತಿ ಹಕ್ಕು ಕಲ್ಪಿಸಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಈಬಾರಿಯ ಸದಸನದಲ್ಲಿ ಅತ್ಯಂತ ಏರುಧ್ವನಿಯಲ್ಲಿ ಸದ್ದು ಮಾಡಬೇಕು. ಸರಕಾರ ಈ ವರದಿಯನ್ನು ಜಾರಿಗೊಳಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಸ್ಥಳೀಯ ಮಾದಿಗ ಸಮಾಜದ ಮುಖಂಡ, ಡಾ.ಬಾಬು ಜಗಜೀವನರಾಮ್ ಸಂಘದ ಅಧ್ಯಕ್ಷ ರಿಚ್ಚರ್ಡ್ ಮರೆಡ್ಡಿ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಆದಿ ಜಾಂಭವ ಯುವಕ ಸಂಘ ಹಾಗೂ ಡಾ.ಬಾಬು ಜಗಜೀವನ ರಾಮ್ ಸಂಘಗಳು ಜಂಟಿಯಾಗಿ ಏರ್ಪಡಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸರಕಾರಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಳೆದ ಏರಡು ದಶಕಗಳಿಂದ ಮಾದಿಗ ಸಮುದಾಯ ಸದಾಶಿವ ಆಯೋಗ ವರದಿ ಜಾರಿಗಾಗಿ ಒತ್ತಾಯಿಸಿ ನಿರಂತರ ಹೋರಾಟದಲ್ಲಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸರಕಾರಗಳು ಬಂದು ಹೋದರೂ ವರದಿ ಜಾರಿಗೆ ಬರುತ್ತಿಲ್ಲ. ಮಾದಿಗ ಸಮುದಾಯವನ್ನು ಮತ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು, ಅಸ್ಪೃಶ್ಯರೊಳಗೊಬ್ಬ ಅಸ್ಪೃಶ್ಯರಾಗಿ ಮೀಸಲಾತಿಯಿಂದ ವಂಚಿತಗೊಂಡಿರುವ ಮಾದಿಗ ಜನಾಂಗದ ಕೂಗು ಕೇಳಿಸಿಕೊಳ್ಳುವಲ್ಲಿ ಕಿವುಡುತನ ಪ್ರದರ್ಶಿಸಿವೆ ಎಂದು ಆಪಾದಿಸಿದರು.
ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಇತರ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಮೋಸಗೊಳಿಸಿ ಮತಗಳನ್ನು ಕಸಿದಿವೆ. ಸುಳ್ಲು ಭರವಸೆಗಳನ್ನು ಕೊಟ್ಟು ಮೋಸಮಾಡಿವೆ. ಸುಪ್ರೀಂಕೋರ್ಟ್ ಆದೇಶದಂತೆ ಸಂವಿಧಾನಬದ್ಧವಾಗಿ ಒಳಮೀಸಲಾತಿ ಜಾರಿಗೆ ಬರಬೇಕು. ಆರಂಭಗೊಳ್ಳಲಿರುವ ವಿಧಾನಸಭೆ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಕುರಿತು ಗಂಭೀರ ಚರ್ಚೆ ನಡೆಯಬೇಕು. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಈ ವರದಿ ಜಾರಿಗೆ ಬರಲು ಒಮ್ಮತ ಸೂಚಿಸಬೇಕು ಎಂದು ಒತ್ತಾಯಿಸಿದ ಆದಿ ಜಾಂಭವ ಸಂಘದ ಅಧ್ಯಕ್ಷ ಪರಮೇಶ್ವರ ಕೆಲ್ಲೂರ, ನಿರ್ಲಕ್ಷ್ಯ ವಹಿಸಿದರೆ ಸರಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದರು.
ಆದಿ ಜಾಂಭವ ಸಮಾಜದ ಅಧ್ಯಕ್ಷ ಸುಮಿತ್ರಪ್ಪ ಹೊಸೂರ, ಮಾದಿಗ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಸೈದಾಪುರ, ಅಂಬ್ರೀಶ ಮಾಳಗಿ, ಶರಣು ಬಿರಾಳ, ಮಲ್ಲಿಕಾರ್ಜುನ ಮುದ್ನಾಳ ಸುದ್ದಿಗೋಷ್ಠಿಯಲ್ಲಿದ್ದರು.