ವಾಡಿ: ಸಿಡಿಲಬ್ಬರದ ಮಳೆಗೆ ತತ್ತರಿಸಿಹೋದ ಸಿಮೆಂಟ್ ನಗರಿ ವಾಡಿ ಪಟ್ಟಣದ ಪ್ರವಾಹ ಪೀಡಿತ ಕುಟುಂಬಗಳಿಗೆ ಜುನಾಯಿತ ಜನಪ್ರತಿನಿಧಿಗಳು ನೆರವಿಗೆ ಧಾವಿಸಿದ್ದಾರೆ.
ಧಾರಾಕಾರ ಮಳೆಯಿಂದ ನಲುಗಿದ್ದ ಬಿಯ್ಯಾಬಾನಿ ಏರಿಯಾ, ಸೇವಾಲಾಲ ನಗರ ತಾಂಡಾ, ರೆಸ್ಟ್‌ಕ್ಯಾಂಪ್ ತಾಂಡಾ ಬಡಾವಣೆಯ ಜನರಿಗೆ ಆಹಾರ ಪದಾರ್ಥ ವಿತರಿಸಲು ಮುಂದಾಗಿರುವ ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ನೀರುಪಾಲಾಗಿ ಸಂಕಷ್ಟ ಅನುಭವಿಸಿದ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ಒದಗಿಸಲು ಪೃಕೃತಿ ವಿಕೋಪದ ಪಟ್ಟಿ ಸಿದ್ಧತೆಗೆ ಆದೇಶ ನೀಡಿದ್ದಾರೆ. ಅತ್ತ ಸೇವಾಲಾನ ನಗರದ ಸಂತ್ರಸ್ತ ಕುಟುಂಬಗಳಿಗೆ ಪುರಸಭೆ ಸದಸ್ಯೆ, ಬಿಜೆಪಿಯ ಶೋಭಾ ಗೋವಿಂದ ಪವಾರ ದಿನಸಿ ಕಿಟ್ ವಿತರಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಮುಖ್ಯಧಿಕಾರಿ ವಿಠ್ಠಲ ಹಾದಿಮನಿ ಅವರು ಜಲಾವೃತಗೊಂಡ ಬಡಾವಣೆಗಳ ನೀರನ್ನು ಸಾಗಿಸಲು ಕ್ರಮಕ್ಕೆ ಮುಂದಾದ ಪ್ರಸಂಗ ನಡೆಯಿತು.
ನೀರಿನಲ್ಲಿ ಮುಳುಗಡೆಯಾದ ಮನೆಗಳ ಸ್ಥಿತಿಗತಿ ಪರಿಶೀಲಿಸಿದ ಪುರಸಭೆ ಸದಸ್ಯ ಶೋಭಾ ಪವಾರ, ಬಂಜಾರಾ ಕುಟುಂಬಗಳಿಗೆ ಅಕ್ಕಿ, ಬೇಳೆ, ತರಕಾರಿ ಸೇರಿದಂತೆ ಇತರ ಅವಶ್ಯಕ ಪದಾರ್ಥಗಳನ್ನು ಕಿಟ್ ರೂಪದಲ್ಲಿ ವಿತರಿಸಿದರು.
ಪಟ್ಟಣದಲ್ಲಿ ಭಾರಿ ಮಳೆಯಿಂದ ಹಲವು ವಾರ್ಡ್‌ಗಳು ಜಲಪ್ರವಾಹಕ್ಕೆ ತುತ್ತಾಗಲು ನಗರದ ಅವೈಜ್ಞಾನಿಕ ಚರಂಡಿಗಳೇ ಪ್ರಮುಖ ಕಾರಣವಾಗಿವೆ. ಪದೇಪದೆ ಬಡ ಕುಟುಂಬಗಳು ಜಲಾವೃತಗೊಳ್ಳದಂತೆ ವೈಜ್ಞಾನಿಕ ಚರಂಡಿಗಳನ್ನು ನಿರ್ಮಿಸಲು ಮುಂದಾಗಬೇಕು. ಪ್ರವಾಹ ಸಂತ್ರಸ್ಥ ಕುಟುಂಬಗಳಿಗೆ ಸರಕಾರ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪುರಸಭೆಯ ವಿರೋಧ ಪಕ್ಷದ ನಾಯಕ ಪ್ರಕಾಶ ನಾಯಕ ಈ ಸಂದರ್ಭದಲ್ಲಿ ಇದ್ದರು.