ಕಲಬುರಗಿ: ಕಲ್ಯಾಣ ಕರ್ನಾಟಕದ ವಕೀಲರನ್ನು ಕಡೆಗಣಿಸಿ ಬೇರೆ ಜಿಲ್ಲೆಯ ವಕೀಲರನ್ನ ಕಲಬುರಗಿ ಹೈಕೋರ್ಟ್ ಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಶಾಸಕರಾದ ಪ್ರಿಯಾಂಕ್ ಖರ್ತೆ ಅವರು ಆ ಹುದ್ದೆಗೆ ಕಲ್ಯಾಣ ಕರ್ನಾಟಕದ ವಕೀಲರನ್ನು ನೇಮಿಸುವಂತೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಹಿಂದೆಯೂ ಕೂಡಾ ಇದೇ ತರ ಬೇರೆ ಭಾಗದ ವಕೀಲರನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನಾಮ ನಿರ್ದೇಶನ ಮಾಡಿದಾಗ ಕಲಬುರಗಿ ವಕೀಲರ ಸಂಘ ವಿರೋಧಿಸಿತ್ತು. ಆಗ ಭರವಸೆ ನೀಡಿದ್ದ ಸಿಎಂ ಮತ್ತೊಮ್ಮೆ ಹುದ್ದೆ ಸೃಜನೆಯಾದರೆ ಕಕ ಭಾಗದ ವಕೀಲರನ್ನೇ ನೇಮಿಸುವುದಾಗಿ ಹೇಳಿದ್ದರು. ಆದರೆ ಈಗ ಮತ್ತೊಮ್ಮೆ ಕಕ ಭಾಗದ ವಕೀಲರನ್ನು ಕಡೆಗಣಿಸಿ ಬೇರೆ ಭಾಗದ ವಕೀಲರನ್ನು ಅದೇ ಹುದ್ದೆಗೆ ನೇಮಿಸುವ ಮೂಲಕ ಕಕ ಭಾಗದ ಕುರಿತು ಮಲತಾಯಿ ಧೋರಣೆ ಮುಂದುವರೆಸಿದ್ದಾರೆ ಎಂದು ಶಾಸಕರು ಟೀಕಿಸಿದ್ದಾರೆ.
ಕಕ ಭಾಗವು ಸಾಕಷ್ಟು ಹಿರಿಯ ವಕೀಲರನ್ನು ಹೊಂದಿದ್ದು ಈ ಭಾಗದಿಂದ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಕಲಬುರಗಿ ಹೈಕೋರ್ಟ್ ನಲ್ಲಿ ನೂರಾರು ವಕೀಲರು ತಮ್ಮ ವೃತ್ತಿ ಮಾಡುತ್ತಿದ್ದು ಈಗ ಬೇರೆ ಭಾಗದ ವಕೀಲರನ್ನು ಹೈಕೋರ್ಟ್ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಿಸಿರುವುದು ಈ ಭಾಗದ ವಕೀಲರಿಗೆ ಅನ್ಯಾಯ ಮಾಡಿದಂತಾಗಿರುವುದು ಅಲ್ಲದೇ ಈ ಭಾಗವನ್ನು ಕಡೆಗಣಿಸಿದಂತಾಗಿದೆ ಎಂದು ಮಾನ್ಯ ಶಾಸಕರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.
ಕಕ ಭಾಗದ ವಕೀಲರನ್ನು ಹೊರತುಪಡಿಸಿ ಬೇರೆ ಭಾಗದ ವಕೀಲರನ್ನು ನೇಮಿಸಿದರೆ ಅವರು ಸರಿಯಾಗಿ ಕೋರ್ಟ್ ಕಲಾಪದಲ್ಲಿ ಭಾಗವಹಿಸಲು ಆಗದೆ ಪ್ರಕರಣಗಳು ವಿಲೇವಾರಿಯಾಗದೇ ಬಾಕಿ ಉಳಿಯುತ್ತವೆ ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕಲಬುರಗಿ ಹೈಕೋರ್ಟ್ ಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಹುದ್ದೆಗೆ ಕಕ ಭಾಗದ ವಕೀಲರನ್ನೇ ನಾಮ ನಿರ್ದೇಶನ ಮಾಡುವ ಮೂಲಕ ಈ ಭಾಗದ ವಕೀಲರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಪ್ರಿಯಾಂಕ್ ಖರ್ಗೆ ಅವರು ಸಿಎಂ ಅವರನ್ನು ಆಗ್ರಹಿಸಿದ್ದಾರೆ.