ಕಲಬುರಗಿ: ಚರ್ಚ್ ಫಾದರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದಾಗಲೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನನೊಂದು ಮಹಿಳೆ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಿನ್ನೆ ಸೈಬರ್ ಕ್ರೈಂ ಕಚೇರಿಗೆ ಆವರಣದಲ್ಲಿ ನಡೆದಿದೆ ಎನ್ನಲಾಗಿದೆ.
ನಗರದ ಸೇಂಟ್ ಮೇರಿ ಕ್ಯಾಥೋಡ್ರಾಲ್ ಚರ್ಚ್ನಲ್ಲಿ ಲಾಕ್ ಡೌನ್ ವೇಳೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆಗೆ ಫಾದರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದು, ಅಲ್ಲದೇ ಫೇಸ್ ಬುಕ್ ನಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.
ದೂರಿನ ಅನ್ವಯ ನಗರ ಮಹಿಳಾ ಪೊಲೀಸ್ ಠಾಣೆಗೆ ಅಲೆದಾಡಿದ್ದಾರೆಂದು ತಿಳಿದುಬಂದಿದ್ದು, ಸೈಬರ್ ಕ್ರೈಂ ಕಚೇರಿಯಲ್ಲಿ ದೂರಿನ ಕುರಿತು ವಿಚಾರಣೆಗೆ ಆಗಮಿಸಿದ ವೇಳೆ ತನಗೆ ನ್ಯಾಯ ಸಿಗುವುದಿಲ್ಲ ಎಂಬ ಅನುಮಾನ ವ್ಯಕ್ತವಾಗಿ ಕಚೇರಿ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.
ಪ್ರಸ್ತುತ ಪ್ರಕರಣದ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ನಗರ ಹಾಗೂ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಮಾಹಿತಿ ತಿಳಿದುಬಂದಿದೆ.
ಪ್ರಕರಣ ತೀರ ನಿಗೂಢವಾಗಿದ್ದು, ಮಹಿಳೆ ಸೈಬರ್ ಕ್ರೈಂ ಕಚೇರಿಗೆ ಭೇಟಿ ನೀಡಿದ್ದು ಮತ್ತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದ್ದು, ಪೊಲೀಸ್ ಇಲಾಖೆಯ ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಬೇಕಿದೆ.
ನಿನ್ನೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಕುರಿತು ಅಟೆಂಪ್ಟ್ ಟೂ ಸುಸೈಟ್ ಪ್ರಕರಣವನ್ನು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಸಂತ್ರಸ್ತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.