ಬೆಂಗಳೂರು: ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ೨೦೨೦ ನ್ನು ಕಂದಾಯ ಸಚಿವರ ಆರ್.ಅಶೋಕ್ ಅವರ ಪರವಾಗಿ ಜೆ.ಸಿ.ಮಾಧುಸ್ವಾಮಿ ಅವರು ಮಂಡಿಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ೩ ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಕೈಗಾರಿಕಾ ವಿವಾದಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ ೨೦೨೦ನ್ನು ಕಾರ್ಮಿಕ ಮತ್ತು ಸಕ್ಕರೆ ಸಚಿವ ಆರಬೈಲ್ ಹೆಬ್ಬಾರ ಶಿವರಾಮ್ ಮಂಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾದ ನಾರಾಯಣಸ್ವಾಮಿ ಮಾತನಾಡಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುವಂತೆ ತಿದ್ದುಪಡಿ ಮಾಡಿ ಅಂಗೀಕರಿಸಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದುವರೆದು ಮಾತಾನಾಡಿದ ವಿಧಾನಪರಿಷತ್ ಸದಸ್ಯೆ ಡಾ: ತೇಜಸ್ವಿನ ಗೌಡ ಅವರು ಕೈಗಾರಿಕೆಗಳಿಗೆ ಕೃಷಿ ಭೂಮಿಯನ್ನು ನೀಡದೆ, ಬಂಜರು ಭೂಮಿಯನ್ನು ಅಭಿವೃದ್ಧಿಗಾಗಿ ನೀಡಬೇಕು. ಖಾಸಗಿ ಸಂಸ್ಥೆಯವರಿಗೆ ನೀಡಿದಾಗ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಉದ್ಯೋಗ ಮತ್ತು ಜೀವನಕ್ಕೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ ೨೦೨೦, ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ ೨೦೨೦, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃಧ್ಧಿ) ವಿಧೇಯಕ (ತಿದ್ದುಪಡಿ) ೨೦೨೦ನ್ನು ಅಂಗೀಕರಿಸಲಾಯಿತು.